ಕನಕಪುರ :ಪಾಶ್ಚಿಮಾತ್ಯ ಸಂಸ್ಕೃತಿಯತ್ತ ವಾಲುತ್ತಿರುವ ಮಕ್ಕಳಿಗೆ ದೇಸಿ ಸಂಸ್ಕೃತಿ ಕಡೆ ಗಮನ ಸೆಳೆಯಲು ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆ ಹೊರತರಲು ಮಕ್ಕಳ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮ ಸಹಕಾರಿ ಎಂದು ಪ್ರಾಂಶುಪಾಲರ ರಾಮೇಗೌಡ ಹೇಳಿದರು.
ತಾಲೂಕಿನ ಕೋಡಿಹಳ್ಳಿ ಹೋಬಳಿ ಶೆಟ್ಟಿಕೆರೆದೊಡ್ಡಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಡಾ. ಬಿ.ಆರ್.ಅಂಬೇಡ್ಕರ್ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮಕ್ಕಳ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಹಾಗೂ ಸರ್ಕಾರಿ ಶಾಲಾ ಮಕ್ಕಳ ಸೂಕ್ತ ಪ್ರತಿಭೆ ಹೊರಹಾಕಿ ಪ್ರೋತ್ಸಾಹಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇಂತಹ ಉತ್ಸವ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಕೆ.ಸತೀಶ್ ಮಾತನಾಡಿ, ನಾಡಿನ ಜನಪದ ಕಲೆ ಮತ್ತು ಸಾಂಸ್ಕೃತಿಕ ಪರಂಪರೆ ಯುವ ಪೀಳಿಗೆಗೆ ಪರಿಚಯಿಸುವುದು, ಮಕ್ಕಳ ಸೃಜನ ಶೀಲತೆ ಮತ್ತು ಆತ್ಮ ವಿಶ್ವಾಸ ಹೆಚ್ಚಿಸುವ ಕಾರ್ಯಕ್ರಮಗಳಾಗಿವೆ. ಸರ್ಕಾರದ ಚಿಗುರು ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲ ಶಾಲಾ-ಕಾಲೇಜು ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರಹೊಮ್ಮಲು ಸಹಾಯ ಮಾಡುತ್ತದೆ ಎಂದರು.
ಬಗರ್‌ಹುಕುಂ ಸಾಗುವಳಿ ಸದಸ್ಯ ಶಿವಣ್ಣ ಮಾತನಾಡಿ, ಈಗಿನ ಮಕ್ಕಳಲ್ಲಿನ ಪ್ರತಿಭೆ ಹೊರ ತರಬೇಕಾದರೆ ಸಾಂಸ್ಕೃತಿಕ ಕಾರ್ಯಕ್ರಮ ಅವಶ್ಯಕವಾಗಿದೆ. ಈಗಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಟಿವಿ ಮೊಬೈಲ್ ಕೊಡುವುದನ್ನು ಪಾಲಕರು ಕಡಿಮೆ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳಿಂದ ಜಾನಪದ, ಸಮೂಹ ನೃತ್ಯ ಭರತನಾಟ್ಯ ಕೋಲಾಟ ಇತರೆ ನೃತ್ಯ ಪ್ರದರ್ಶನ ಮಾಡಿಸಲಾಯಿತು.
ಮುಖಂಡ ರಮೇಶ್, ಕುಳ್ಳಿರೇಗೌಡ, ಚಂದ್ರಶೇಖರ್, ಸುಖಾನಂದಕುಮಾರ್ ಹಾಗೂ ಸ್ಥಳೀಯ ಕಲಾವಿದ ಕೆ.ಶಿವರಾಮ, ಚೆನ್ನಬೋರಯ್ಯ, ಕೆ.ಕಾಳಯ್ಯ ಇದ್ದರು.