ಗುಣಮಟ್ಟ ಪರಿಶೀಲನೆಗೆ ಮಕ್ಕಳೊಂದಿಗೆ ಊಟ ಸೇವಿಸಿ

ಕಲಬುರಗಿ ಡಿಸಿ ಕಚೇರಿಯಲ್ಲಿ ಸರ್ಕಾರಿ ವಸತಿಶಾಲೆ ಪ್ರಾಂಶುಪಾಲರು, ವಾರ್ಡನ್​ಗಳ ಜತೆಗೆ ಬುಧವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಮಾತನಾಡಿದರು. ಪ್ರೀತಿ ದೊಡ್ಡಮನಿ, ಸಂಗಮೇಶ ಇದ್ದರು.
ಕಲಬುರಗಿ ಡಿಸಿ ಕಚೇರಿಯಲ್ಲಿ ಸರ್ಕಾರಿ ವಸತಿಶಾಲೆ ಪ್ರಾಂಶುಪಾಲರು, ವಾರ್ಡನ್​ಗಳ ಜತೆಗೆ ಬುಧವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಮಾತನಾಡಿದರು. ಪ್ರೀತಿ ದೊಡ್ಡಮನಿ, ಸಂಗಮೇಶ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಸೂಚನೆ
  • ವಸತಿಶಾಲೆ ಪ್ರಾಂಶುಪಾಲರು, ವಾರ್ಡನ್​ಗಳ ಸಭೆ
ಕಲಬುರಗಿ: ಜಿಲ್ಲೆಯ ವಸತಿಶಾಲೆಯಲ್ಲಿ ಮಕ್ಕಳಿಗೆ ನೀಡಲಾಗುವ ಊಟದ ಗುಣಮಟ್ಟ ಖಾತ್ರಿಗೆ ಶಿಕ್ಷಕರು ಮತ್ತು ಪ್ರಾಂಶುಪಾಲರು ಮಕ್ಕಳೊಂದಿಗೆ ಊಟ ಸೇವಿಸಬೇಕು. ಪ್ರತಿ ದಿನದ ಊಟಕ್ಕೆ ಸ್ವಚ್ಛ ತರಕಾರಿ ಬಳಸಬೇಕು. ಶುಚಿತ್ವ ಮತ್ತು ನೈರ್ಮಲ್ಯ ವಿಷಯದಲ್ಲಿ ಯಾವುದೇ ರಾಜಿ ಬೇಡ ಎಂದು ಜಿಲ್ಲಾಧಿಕಾರಿ ಇಕ್ರಮ್​ ಶರೀಫ್​ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿಶಾಲೆಯ ಪ್ರಾಂಶುಪಾಲರು ಮತ್ತು ವಾರ್ಡನ್​ಗಳೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿ, ಶಾಲೆಗೆ ಗುತ್ತಿಗೆದಾರನಿಂದ ಆಹಾರ ಧಾನ್ಯ ಸ್ವೀಕರಿಸುವಾಗ ಅದರ ಗುಣಮಟ್ಟ, ಮುಕ್ತಾಯದ ಅವಧಿ ಕಡ್ಡಾಯವಾಗಿ ಪರಿಶೀಲಿಸಬೇಕು. ಕಳಪೆ ಆಹಾರ ಪೂರೈಕೆಯಾದಲ್ಲಿ ತಕ್ಷಣ ಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದರು.
ವಿಶೇಷವಾಗಿ ಅಕ್ಕಿ, ಗೋಧಿ ಸೇರಿ ಆಹಾರಧಾನ್ಯ, ಅಡುಗೆ ಪದಾರ್ಥ ಸ್ವೀಕರಿಸಿದ ನಂತರ ಸ್ವಚ್ಛಗೊಳಿಸಬೇಕು. ಕನಿಷ್ಠ 15 ದಿನಕ್ಕೊಮ್ಮೆ ಆರ್​ಒ ಪ್ಲಾಂಟ್​ ಕ್ಲೀನ್​ ಮಾಡಬೇಕು. ಅಡುಗೆ ಕೋಣೆ, ಡೈನಿಂಗ್​ ಹಾಲ್​, ಶೌಚಗೃಹ ಕೋಣೆ ಹೀಗೆ ಶಾಲೆಯ ಕ್ಯಾಂಪಸ್​ ಸ್ವಚ್ಛತೆಯಿಂದ ಕೂಡಿರಬೇಕು. ಮಕ್ಕಳಿಗೆ ಶುದ್ಧ ಕುಡಿವ ನೀರು ಪೂರೈಸಬೇಕು. ತುರ್ತು ಸಂದರ್ಭದಲ್ಲಿ ಅಗತ್ಯ ಔಷಧಿ ಶಾಲೆಯಲ್ಲಿರಬೇಕು. ನರ್ಸಿಂಗ್​ ಸ್ಟಾಫ್​ ಕೇಂದ್ರಸ್ಥಾನದಲ್ಲಿದ್ದು ಮಕ್ಕಳ ಆರೋಗ್ಯದ ಬಗ್ಗೆ ಗಮನಹರಿಸಬೇಕು ಎಂದು ಸೂಚಿಸಿದರು.
ಬಡ ಮಕ್ಕಳಿಗೆ ಹಳ್ಳಿಯಲ್ಲಿಯೇ ಒಳ್ಳೆಯ ಶಿಕ್ಷಣ ಸಿಗಲೆಂಬ ಆಶಾಭಾವನೆಯೊಂದಿಗೆ ವಸತಿಶಾಲೆಗಳನ್ನು ತೆರೆಯಲಾಗಿದೆ. ಇಷ್ಟೆಲ್ಲ ಸೌಕರ್ಯ ನೀಡಿದರೂ ನಿರೀತ ಫಲಿತಾಂಶ ಬಾರದಿದ್ದರೆ ಹೇಗೆ ? ಜಿಲ್ಲೆಯ ಪ್ರತಿ ವಸತಿಶಾಲೆ ಶೇ.100 ಫಲಿತಾಂಶ ಪಡೆಯುವ ಗುರಿಯೊಂದಿಗೆ ಸಾಗಬೇಕು ಎಂದು ತಾಕೀತು ಮಾಡಿದರು.
ಜಿಪಂ ಸಿಇಒ ರಾಹುಲ್​ ಸಂಕನೂರ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಮತ್ತು ಪ್ರಭಾರಿ ಬಿಸಿಎಂ ಅಧಿಕಾರಿ ಸಂಗಮೇಶ ಇತರರಿದ್ದರು.
"

ವಸತಿ ಶಾಲೆಯಲ್ಲಿ ಬೆಂಚ್​, ಆರ್​ಒ ಪ್ಲಾಂಟ್​, ವಿದ್ಯುತ್​ ಉಪಕರಣ ದುರಸ್ತಿ, ಕಟ್ಟಡ ದುರಸ್ತಿ ಬೇಕಾದ ಅಗತ್ಯ ಮೂಲ ಸೌಕರ್ಯಗಳ ಕುರಿತು ಪಟ್ಟಿ ನೀಡಿದಲ್ಲಿ ಕೆಕೆಆರ್​ಡಿಬಿ ಅಥವಾ ಇಲಾಖೆ ಅನುದಾನದ ಮೂಲಕ ಎಲ್ಲ ಸೌಕರ್ಯ ಪೂರೈಸಲಾಗುವುದು.

— > ಇಕ್ರಮ್​ ಶರೀಫ್​, ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net