ಕಾಲಮಿತಿಯಲ್ಲಿ ಕಲ್ಯಾಣದ ಅಭಿವೃದ್ಧಿ

ಕಲಬುರಗಿ ಶರಣಬಸವ ವಿವಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಗೌರವಾಧ್ಯಕ್ಷ ಬಸವರಾಜ ದೇಶಮುಖ ಅಧ್ಯಕ್ಷತೆಯ ಸಭೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ  ದಸ್ತಿ, ಪ್ರೊ.ಆರ್​.ಕೆ.ಹುಡಗಿ, ಡಾ.ಬಸವರಾಜ ಕುಮ್ನೂರ, ರವೂಫ್​ ಖಾದ್ರಿ, ಶಿವರಾಜ ಇಂಗಿನಶೆಟ್ಟಿ ಇತರರಿದ್ದರು.
ಕಲಬುರಗಿ ಶರಣಬಸವ ವಿವಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಗೌರವಾಧ್ಯಕ್ಷ ಬಸವರಾಜ ದೇಶಮುಖ ಅಧ್ಯಕ್ಷತೆಯ ಸಭೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ, ಪ್ರೊ.ಆರ್​.ಕೆ.ಹುಡಗಿ, ಡಾ.ಬಸವರಾಜ ಕುಮ್ನೂರ, ರವೂಫ್​ ಖಾದ್ರಿ, ಶಿವರಾಜ ಇಂಗಿನಶೆಟ್ಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ಮೇಲೆ ಒತ್ತಡ ಹೇರಲು ನಿರ್ಧಾರ
  • ಕಕ ಹೋರಾಟ ಸಮಿತಿ ನೇತೃತ್ವದಲ್ಲಿ ದುಂಡು ಮೇಜಿನ ಸಭೆ
ಕಲಬುರಗಿ: ಗೋವಿಂದರಾವ್​ ನೇತೃತ್ವದ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ವರದಿಯಂತೆ ಕಲ್ಯಾಣ ಕರ್ನಾಟಕದ ಸ್ಥಿತಿಗತಿ ಮತ್ತು ಭವಿಷ್ಯದಲ್ಲಿ ರಚನಾತ್ಮಕ ಪ್ರಗತಿಗೆ ಹಮ್ಮಿಕೊಳ್ಳಬೇಕಾದ ವೈಜ್ಞಾನಿಕ ಕ್ರಿಯಾಯೋಜನೆ ಕುರಿತು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯು ಶರಣಬಸವ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ತಜ್ಞರು, ಚಿಂತಕರು, ಬುದ್ಧೀಜಿವಿಗಳು, ಅಭಿವೃದ್ಧಿಪರ ಹೋರಾಟಗಾರರು ಮತ್ತು ಆಯಾ ಕ್ಷೇತ್ರದ ಗಣ್ಯರ ಜತೆ ಮಹತ್ವದ ದುಂಡು ಮೇಜಿನ ಸಭೆ ಶುಕ್ರವಾರ ನಡೆಸಿತು.
ಸಮಿತಿ ಗೌರವಾಧ್ಯಕ್ಷ ಬಸವರಾಜ ದೇಶಮುಖ ಅಧ್ಯಕ್ಷತೆಯಲ್ಲಿ ಸಭೆಯನ್ನು ಸಂಸ್ಥಾಪಕ ಅಧ್ಯಕ್ಷ ಡಾ.ಲಕ್ಷ್ಮಣ ದಸ್ತಿ ನಡೆಸಿಕೊಟ್ಟರು. ನಂಜುಂಡಪ್ಪ ವರದಿಯ ಮಾನದಂಡ ಮತ್ತು ಸೂಚ್ಯಂಕಗಳು ಪ್ರಸ್ತುತ ಗೋವಿಂದರಾವ್​ ನೇತೃತ್ವದ ಪ್ರಾದೇಶಿಕ ಅಸಮತೋಲನ ನಿವಾರಣೆ ಸಮಿತಿ ವರದಿಯ ಅಭಿವೃದ್ಧಿ ಸೂಚ್ಯಂಕ ಮತ್ತು ಶಿಫಾರಸು ಬಗ್ಗೆ ಕಲ್ಯಾಣ ಕರ್ನಾಟಕದ ಬೀದರ್​, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಪರಿಣತ ತಜ್ಞರು, ಅಭಿವೃದ್ಧಿಪರ ಹೋರಾಟಗಾರರು ಗಂಭೀರವಾಗಿ ವಿಷಯ ಮಂಡಿಸಿ ವಿವರವಾಗಿ ಚರ್ಚಿಸಿದರು.
ಕೆಕೆಸಿಸಿಐ ಮಾಜಿ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಗುಲ್ಬರ್ಗ ವಿವಿ ವಿಶ್ರಾಂತ ಕುಲಪತಿ ಪ್ರೊ.ಪ್ರತಾಪಸಿಂಗ್​ ತಿವಾರಿ, ಪ್ರೊ.ಬಸವರಾಜ ಕುಮ್ನೂರ, ಡಾ.ರಜಾಕ್​ ಉಸ್ತಾದ್​, ಪ್ರೊ.ಆರ್​.ಕೆ. ಹುಡಗಿ, ಪ್ರೊ.ಧನರಾಜ, ಕೆಕೆಸಿಸಿಐ ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ, ಡಾ.ಸನಾವುಲ್ಲಾ, ಡಾ.ನಿರ್ಮಲಾ ಸಜ್ಜನ್​, ಬೀದರ್​ನ ಕಾರಂಜಾ ಹೋರಾಟ ಸಮಿತಿ ಅಧ್ಯಕ್ಷ ಚಂದ್ರಶೇಖರ ಪಾಟೀಲ ಹುಚಕನಳ್ಳಿ, ಡಾ.ಮಾಜಿದ್​ ಡಾಗಿ, ಡಾ.ಬಿ.ಎಸ್​. ಗುಲಶೆಟ್ಟಿ, ಶಿವಾನಂದ ಪಾಟೀಲ್​, ರಾಯಚೂರಿನ ಅಮರೇಗೌಡ ಪಾಟೀಲ್​, ವಿನಯ ಚಿತ್ರಗಾರ ತಮ್ಮ ತಮ್ಮ ವಿಚಾರ ಮಂಡಿಸಿದರು.
ಡಾ.ಮೀನಾ ಬಾಳಿ, ಕೆ.ನೀಲಾ, ಡಾ.ಸದಾನಂದ ಪೆರ್ಲ, ಡಾ.ಗಾಂಧೀಜಿ ಮೊಳಕೇರಿ, ಡಾ.ಮಲ್ಲಿಕಾರ್ಜುನ ಶೆಟ್ಟಿ, ಸೈಯದ್​ ರೌಫ್​ ಖಾದ್ರಿ, ಮಲ್ಲಿಕಾರ್ಜುನ ಬಿ., ಅಬ್ದುಲ್​ ರಹೀಮ್​, ಮೋಹನ ಕಟ್ಟಿಮನಿ, ಬಸವರಾಜ ಕಲ್ಯಾಣಿ, ಎಸ್​.ಎಸ್​. ಪಾಟೀಲ್​, ರಾಜಪ್ಪ ಕಮಲಾಪುರ, ಡಾ.ರಾಜಶೇಖರ, ಡಾ.ಆರ್​.ವೆಂಕಟರೆಡ್ಡಿ ಇತರರಿದ್ದರು.

ನಿರ್ಣಯಗಳು

ಕಕ ಅಭಿವೃದ್ಧಿಗೆ ಸರ್ಕಾರ 5-10 ವರ್ಷದ ದೂರದೃಷ್ಟಿ, ವೈಜ್ಞಾನಿಕ ಕ್ರಿಯಾಯೋಜನೆ ರೂಪಿಸಬೇಕು. ಕೆಕೆಆರ್​ಡಿಬಿ ಸರ್ಕಾರದ ಬಜೆಟ್​ ಯೋಜನೆ ಹೊರತುಪಡಿಸಿ ನಿರ್ಲಕ್ಷ್ಯಕ್ಕೆ ಒಳಗಾದ ಕ್ಷೇತ್ರ ಮತ್ತು ಗ್ರಾಮ, ತಾಲೂಕುಗಳ ಅಭಿವೃದ್ಧಿಗೆ ಒತ್ತು ನೀಡಬೇಕು. ಸರ್ವತೋಮುಖ ವಿಕಾಸಕ್ಕೆ ಕಲಬುರಗಿ ವಿಭಾಗೀಯ ಕೇಂದ್ರ ಸೇರಿ ಏಳು ಜಿಲ್ಲೆ ಮಂತ್ರಿಗಳ ಸಹಯೋಗದೊಂದಿಗೆ ಮುಖ್ಯಮಂತ್ರಿಗಳ ಬಳಿ ನಿಯೋಗ ಕೊಂಡೊಯ್ಯಲು ಸಭೆ ನಿರ್ಧರಿಸಿತು. ಕಕಕ್ಕೆ ಪ್ರತ್ಯೇಕ ಕೈಗಾರಿಕಾ ನೀತಿ, ಕೃಷಿ ಮತ್ತು ಶೈಕ್ಷಣಿಕ ನೀತಿ ರೂಪಿಸಬೇಕು. ರಾಯಚೂರಿನಲ್ಲಿ ಏಮ್ಸ್​ ಸ್ಥಾಪನೆಗೆ ಕೇಂದ್ರದ ಮೇಲೆ ಒತ್ತಡ, ಬೀದರ್​ನಲ್ಲಿ ದೀರ್ಘಕಾಲದ ಕಾರಂಜಾ ಸಂತ್ರಸ್ತರಿಗೆ ಸಮರ್ಪಕ ಪರಿಹಾರದ ಬೇಡಿಕೆ ಬಗ್ಗೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಗೋವಿಂದರಾವ್​ ಸಮಿತಿ ಸೂಚಿಸಿದ ಸೂಚ್ಯಂಕಗಳಂತೆ ಸರ್ಕಾರ ತಕ್ಷಣ ಅಭಿವೃದ್ಧಿ ಯೋಜನೆ ಹಮ್ಮಿಕೊಂಡು ಸ್ಪಂದಿಸಬೇಕು. ಕಲಬುರಗಿ ಕ್ಷೇತ್ರದ ಅಭಿವೃದ್ಧಿ ಮತ್ತು ರೈಲ್ವೆ ವಿಭಾಗೀಯ ಕೇಂದ್ರ ಕಚೇರಿ ಸ್ಥಾಪನೆಗೆ ಕೇಂದ್ರದ ಮೇಲೆ ಒತ್ತಡ ಹೇರಲು ಹಾಗೂ ಕೆಕೆಆರ್​ಡಿಬಿಗೆ ಕಾಲಮಿತಿಯಲ್ಲಿ ಅಧ್ಯಕ್ಷ ಮತ್ತು ಸದಸ್ಯರು ಹಾಗೂ ಮೇಲ್ವಿಚಾರಣೆ, ಮೌಲ್ಯಮಾಪನ, ಜಾಗೃತದಳ ಸಮಿತಿ ರಚಿಸಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.
"

371(ಜೆ) ವಿಧಿಯಡಿ ನಮ್ಮ ಪಾಲಿನ ಖಾಲಿ ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಕಲ್ಯಾಣ ಕರ್ನಾಟಕದ ನೌಕರರಿಗೆ ಮುಂಬಡ್ತಿ ಸುಸೂತ್ರ ಸಿಗುವಂತೆ ಮಾಡಬೇಕು. ಪ್ರತಿವರ್ಷ ಜನವರಿ 1ರಂದು 371(ಜೆ) ಉತ್ಸವ ನಡೆಸಲು ನಿರ್ಧರಿಸಿದ್ದು, ರಾಜ್ಯ ಸರ್ಕಾರ ಸ್ಪಂದಿಸಬೇಕು.

— > ಬಸವರಾಜ ದೇಶಮುಖ ಗೌರವಾಧ್ಯಕ್ಷ, ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net