ಬೆಂಗಳೂರು: ಎಲೆಕ್ಟ್ರಾನಿಕ್ ಸಿಸ್ಟಮ್ ವಿನ್ಯಾಸ ಮತ್ತು ಉತ್ಪಾದನೆ (ಇಎಸ್‌ಡಿಎಂ) ವಲಯದ ಬೆಳವಣಿಗೆಗೆ ಪೂರಕವಾಗಿ ದಕ್ಷಿಣ ಕನ್ನಡ ಜಿಲ್ಲೆ ಸೇರಿ ರಾಜ್ಯದ ಹಲವು ಕಡೆ ವಿವಿಧ ಸಾಮರ್ಥ್ಯದ ಎಐ ಡೇಟಾ ಸೆಂಟರ್ ವಲಯಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಮುಂದಾಗಿದೆ.
ಭವಿಷ್ಯದ ಕೈಗಾರಿಕಾ ಬೆಳವಣಿಗೆ ಕುರಿತು ಖನಿಜ ಭವನದಲ್ಲಿ ಬುಧವಾರ ಆಯೋಜಿಸಿದ್ದ ಇಎಸ್‌ಡಿಎಂ ಮತ್ತು ಕೋರ್ ಮ್ಯಾನಫ್ಯಾಕ್ಚರಿಂಗ್ ವಿಷನ್ ಗ್ರೂಪ್‌ಗಳ ಸಭೆಯಲ್ಲಿ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರು ಈ ವಿಷಯ ಪ್ರಸ್ತಾಪಿಸಿದರು. ಸದ್ಯದಲ್ಲೇ ಇಂಧನ ಇಲಾಖೆಯೊಂದಿಗೆ ಈ ಬಗ್ಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.
ಮೂರು ರೀತಿಯ ಡಾಟಾ ಸೆಂಟರ್‌ಗಳು ಇದ್ದು, 500 ಮೆಗಾವಾಟ್ ಮತ್ತು ಅದಕ್ಕಿಂತ ದೊಡ್ಡ ಸಾಮರ್ಥ್ಯದ ಹೈಬರ್ಸ್ಕೇಲರ್ ಡೇಟಾ ಸೆಂಟರ್ ಸ್ಥಾಪಿಸಲು ಪೂರಕ ವಾತಾವರಣ ನಿರ್ಮಿಸಲಾಗುತ್ತದೆ. ಹಾಗೆಯೇ ಉದ್ಯಮ ಮಟ್ಟದ ಮಧ್ಯಮ ಸಾಮರ್ಥ್ಯ ಹಾಗೂ 25 ರಿಂದ 200 ಮೆಗಾವಾಟ್ ಸಾಮರ್ಥ್ಯದ ಡೇಟಾ ಸೆಂಟರ್‌ಗಳನ್ನು ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಮಾಡುವ ಉದ್ದೇಶ ಇದ್ದು ಹೂಡಿಕೆ ಸೆಳೆಯುವ ಪ್ರಯತ್ನ ನಡೆದಿದೆ ಎಂದರು.
ಕರಾವಳಿ ಭಾಗವನ್ನು 500 ಮೆಗಾವಾಟ್ ಸಾಮರ್ಥ್ಯದ ಎಐ ಡೇಟಾ ಹಬ್ ಅಭಿವೃದ್ಧಿಪಡಿಸುವ ಉದ್ದೇಶವಿದೆ.
ಮಂಗಳೂರಿನಲ್ಲಿ ಕೇಬಲ್ ಲ್ಯಾಂಡಿಂಗ್ ಸ್ಟೇಷನ್ ಸ್ಥಾಪನೆ ಸಂಬಂಧ ಕಾರ್ಯಸಾಧ್ಯತಾ ಅಧ್ಯಯನ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇಎಸ್‌ಡಿಎಂ ವಲಯಕ್ಕೆ ಸೇರಿದ ಜಾಗತಿಕ ಮಟ್ಟದ ಕಂಪನಿಗಳು ಮುಂಬರುವ ದಿನಗಳಲ್ಲಿ 25ರಿಂದ 30 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಗೆ ಉತ್ಸುಕವಾಗಿವೆ ಎಂದು ಮಾಹಿತಿ ನೀಡಿದರು.
ಆ ಕಂಪನಿಗಳ 2ನೇ ಹಂತದ ಹೂಡಿಕೆಯಾಗಿದ್ದು, ಇದರಲ್ಲಿ ಹೆಚ್ಚಿನ ಪಾಲನ್ನು ಸೆಳೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಬಿಡಿಭಾಗಗಳ ಜೋಡಣೆ, ಅಗತ್ಯ ಪರೀಕ್ಷಾ ಸೌಕರ್ಯ, ಪ್ಯಾಕೇಜಿಂಗ್ ಮತ್ತು ವಿಶೇಷ ಉಗ್ರಾಣದ ಮೂಲಸೌಕರ್ಯಗಳನ್ನು ರಾಜ್ಯದಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು.
ಇದೇ ರೀತಿಯಲ್ಲಿ ಆಟೋಮೋಟೀವ್ ಕೈಗಾರಿಕೆಗಳು ತಮಗೆ ಬೇಕಾದ ವಿಶೇಷ ದರ್ಜೆಯ ಉಕ್ಕನ್ನು ಆಮದು ಮಾಡಿಕೊಳ್ಳುತ್ತಿವೆ. ಈ ಉಕ್ಕನ್ನು ಭಾರತದಲ್ಲೇ ಉತ್ಪಾದಿಸಲು ಬೆಂಬಲದ ಅಗತ್ಯವಿದೆ ಎನ್ನುವುದನ್ನು ಉದ್ಯಮಿಗಳು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವರು ಹೇಳಿದರು.