ಒಂದು ಟಿಎಂಸಿ ನೀರು ಹರಿಸಲು ಆಗ್ರಹ

ಸಿಂದಗಿ ತಾಲೂಕು ರಾಂಪುರ್​ ಕೆಬಿಜೆಎನ್​ಎಲ್​ ಕಚೇರಿಗೆ ಭೇಟಿ ನೀಡಿದ ಜೇವರ್ಗಿ ಶಾಸಕ ಡಾ.ಅಜಯಸಿಂಗ್​, ಸಿಂದಗಿ ಶಾಸಕ ಅಶೋಕ ಮನಗೂಳಿ ಅವರು ಕಲಬುರಗಿ ಜಿಲ್ಲೆಯ ಜೇವರ್ಗಿ, ವಿಜಯಪುರ ಜಿಲ್ಲೆಯ ಐದು ತಾಲೂಕುಗಳಿಗೆ ಹೆಚ್ಚುವರಿ 1 ಟಿಎಂಸಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಸಿಂದಗಿ ತಾಲೂಕು ರಾಂಪುರ್​ ಕೆಬಿಜೆಎನ್​ಎಲ್​ ಕಚೇರಿಗೆ ಭೇಟಿ ನೀಡಿದ ಜೇವರ್ಗಿ ಶಾಸಕ ಡಾ.ಅಜಯಸಿಂಗ್​, ಸಿಂದಗಿ ಶಾಸಕ ಅಶೋಕ ಮನಗೂಳಿ ಅವರು ಕಲಬುರಗಿ ಜಿಲ್ಲೆಯ ಜೇವರ್ಗಿ, ವಿಜಯಪುರ ಜಿಲ್ಲೆಯ ಐದು ತಾಲೂಕುಗಳಿಗೆ ಹೆಚ್ಚುವರಿ 1 ಟಿಎಂಸಿ ನೀರು ಬಿಡುಗಡೆಗೆ ಸಂಬಂಧಿಸಿದಂತೆ ನಿಗಮದ ಅಧಿಕಾರಿಗಳೊಂದಿಗೆ ಚರ್ಚಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಆರು ತಾಲೂಕುಗಳ ಜನ-ಜಾನುವಾರುಗಳಿಗೆ ಜಲ ಸಂಕಷ್ಟ
  • ರಾಂಪೂರದಿಂದಲೇ ಡಿಸಿಎಂ ಡಿಕೆಶಿಗೆ ದೂರವಾಣಿ ಕರೆ
  • ನೀರಿನ ಸಮಸ್ಯೆ ವಿವರಿಸಿ ಹೆಚ್ಚುವರಿ ನೀರಿಗಾಗಿ ಆಗ್ರಹ
  • ರಾಂಪುರ ಕೆಬಿಜೆಎನ್​ಎಲ್​ ಕಚೇರಿಗೆ ಭೇಟಿ
  • ಎಂಡಿಗೆ ಮನವಿಪತ್ರ ಸಲ್ಲಿಸಿದ ಡಾ.ಅಜಯಸಿಂಗ್​, ಮನಗೂಳಿ
ಕಲಬುರಗಿ: ಜಿಲ್ಲೆಯ ಜೇವರ್ಗಿ ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿ, ಇಂಡಿ, ಚಡಚಣ, ಆಲಮೇಲ್​, ದೇವರ ಹಿಪ್ಪರಗಿ ಸೇರಿ ಒಟ್ಟು ಆರು ತಾಲೂಕುಗಳಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಂಕಷ್ಟ ತಲೆದೋರಿದೆ. ರೈತರು, ಸಾರ್ವಜನಿಕರು ಭಾರಿ ಸಮಸ್ಯೆಗೆ ಸಿಲುಕಿದ್ದು, ಇನ್ನೂ ಹೆಚ್ಚುವರಿ 1 ಟಿಎಂಸಿ ನೀರು ಹರಿಸುವಂತೆ ಜೇವರ್ಗಿ ಶಾಸಕರೂ ಆದ ಕೆಕೆಆರ್​ಡಿಬಿ ಅಧ್ಯ ಡಾ.ಅಜಯ್​ಸಿಂಗ್​ ಹಾಗೂ ಸಿಂದಗಿ ಶಾಸಕ ಅಶೋಕ ಮನಗೂಳಿ ಆಗ್ರಹಿಸಿದ್ದಾರೆ.
ಸಿಂದಗಿ ತಾಲೂಕು ರಾಂಪೂರ ನೀರಾವರಿ ಯೋಜನೆಯ ಮುಖ್ಯ ಇಂಜಿನಿಯರ್​ ಕಚೇರಿಯಲ್ಲಿ ಗುರುವಾರ ಸಭೆ ನಡೆಸಿದ ನಂತರ ಸುದ್ದಿಗರರೊಂದಿಗೆ ಮಾತನಾಡಿದ ಅವರು, ಕಲಬುರಗಿ ಹಾಗೂ ವಿಜಯಪೂರ ಜಿಲ್ಲೆಯಲ್ಲಿ ಬರುವ ಆರು ತಾಲೂಕುಗಳಲ್ಲಿ ಎದುರಾಗಿರುವ ತೀವ್ರ ಜಲಾಮ ನೀಗಿಸಲು ತಕ್ಷಣ ಇನ್ನೂ ಒಂದು ಟಿಎಂಸಿ ಹೆಚ್ಚುವರಿ ನೀರು ಬಿಡುಗಡೆ ಮಾಡಬೇಕೆಂದು ದೂರವಾಣಿ ಮೂಲಕ ಜಲಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರ ಗಮನ ಸೆಳೆದಿದ್ದಾರೆ.
ನಂತರ ಸಿಂದಗಿ ತಾಲೂಕಿನ ರಾಂಪುರದಲ್ಲಿ ನೂರಾರು ರೈತರೊಂದಿಗೆ ಒಟ್ಟಾಗಿ ರಾಂಪುರದ ಸಿಇಓ ಕಚೇರಿಗೆ ಭೇಟಿ ನೀಡಿ ಸದ್ಯದ ಗಂಭೀರ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸುದೀರ್ ಚರ್ಚೆ ನಡೆಸಿ ಮನವಿಪತ್ರ ಸಲ್ಲಿಸಿದರು.
2 ಟಿಎಂಸಿ ನೀರು ಸಾಕಾಗುತ್ತಿಲ್ಲ
ಪ್ರಸ್ತುತ ನಮ್ಮ ಭಾಗದಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ತೀವ್ರ ಅಭಾವ ತಲೆದೋರಿದೆ. ರೈತರ ಬೆಳೆಗಳು ಒಣಗುತ್ತಿದ್ದು, ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ತತ್ತರಿಸುವಂತಾಗಿದೆ. ಈ ಕಠಿಣ ಪರಿಸ್ಥಿತಿ ಮನಗಂಡು, ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಹಾಗೂ ಕೆಬಿಜೆಎನ್​ಎಲ್​ ಎಂಡಿ ಕೃಷ್ಣ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಲಾಗಿತ್ತು.
ನಮ್ಮ ಮನವಿಗೆ ಸ್ಪಂದಿಸಿ ಸರ್ಕಾರ ಈಗಾಗಲೇ ಐಬಿಸಿ ಹಾಗೂ ಐಎಲ್​ಸಿ ಕೆನಾಲ್​ ಮೂಲಕ 2 ಟಿಎಂಸಿ ನೀರು ಬಿಡುಗಡೆ ಮಾಡಿದೆ. ಆದರೆ, ಈ ಕೆನಾಲ್​ಗಳ ಮೂಲಕ ಜೇವರ್ಗಿ, ಸಿಂದಗಿ, ಚಡಚಣ, ದೇವರ ಹಿಪ್ಪರಗಿ, ಇಂಡಿ ಮತ್ತು ಅಲಮೇಲ್​ ಸೇರಿ ಒಟ್ಟು ಆರು ತಾಲೂಗಳಿಗೆ ನೀರು ಹರಿಯುವುದರಿಂದ, ವಿಶಾಲವಾದ ಈ ಪ್ರದೇಶದ ಸಂಪೂರ್ಣ ಅಗತ್ಯಕ್ಕೆ ಈಗ ಬಿಡಲಾಗಿರುವ ನೀರು ಯಾವುದೇ ಕಾರಣಕ್ಕೂ ಸಾಕಾಗುತ್ತಿಲ್ಲ ಎಂದು ಹೇಳಿದರು.
ಆರು ತಾಲೂಕುಗಳ ವ್ಯಾಪ್ತಿ ದೊಡ್ಡದಾಗಿರುವುದರಿಂದ ಕೊನೆಯ ಭಾಗದ ಹಳ್ಳಿಗಳಿಗೂ ನೀರು ತಲುಪಬೇಕಿದೆ. ಹೀಗಾಗಿ ರೈತರ ಬೆಳೆ ಉಳಿಸಲು ಮತ್ತು ಜನ&ಜಾನುವಾರುಗಳ ಕುಡಿಯುವ ನೀರಿನ ಸಮಸ್ಯೆ ಶಾಶ್ವತ ಪರಿಹಾರ ಒದಗಿಸಲು ಇನ್ನೂ ಒಂದು ಟಿಎಂಸಿ ಹೆಚ್ಚುವರಿ ನೀರು ತಣವೇ ಹರಿಸಬೇಕು ಎಂದು ಆಗ್ರಹಿಸಿದರು.
"

ನಮ್ಮ ಭಾಗದ ಜನರ ಮತ್ತು ರೈತರ ಹಿತ ಕಾಯಲು ನಾವು ಸದಾ ಬದ್ಧರಾಗಿದ್ದು, ಹೆಚ್ಚುವರಿ ನೀರು ಬಿಡುಗಡೆಯಾಗುವವರೆಗೂ ನಮ್ಮ ನಿರಂತರ ಪ್ರಯತ್ನ ಹಾಗೂ ಹೋರಾಟ ಮುಂದುವರಿಯಲಿದೆ.

— ಡಾ.ಅಜಯ್​ ಧರ್ಮಸಿಂಗ್​, ಶಾಸಕ, ಜೇವರ್ಗಿ.



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net