ರಸ್ತೆ ಡಾಂಬರೀಕರಣಕ್ಕೆ ಒತ್ತಾಯ

ಯಾದಗಿರಿ ನಗರದ ಹೊರ ವಲಯದ ಭೀಮಾ ನದಿಗೆ ಹೋಗುವ ರಸ್ತೆ ಇಳಿಜಾರಿನಿಂದ ಕೂಡಿರುವುದು.
ಯಾದಗಿರಿ ನಗರದ ಹೊರ ವಲಯದ ಭೀಮಾ ನದಿಗೆ ಹೋಗುವ ರಸ್ತೆ ಇಳಿಜಾರಿನಿಂದ ಕೂಡಿರುವುದು.
Published on
ಯಾದಗಿರಿ: ನಗರದ ಹಳೆಯ ಬಸ್​ ನಿಲ್ದಾಣದಿಂದ ವಡಗೇರಾ ಕ್ರಾಸ್​ ವರೆಗೆ ಹೆದ್ದಾರಿ ಕಾಮಾಗಾರಿ ಎತ್ತರ ಹೆಚ್ಚಿಸಿ ರಸ್ತೆ ಅಗಲೀಕರಣಗೊಳಿಸಲಾಗಿದ್ದು, ಇದರಿಂದ ಭೀಮಾ ನದಿಯ ರಸ್ತೆ ಹೆದ್ದಾರಿಗೆ ಹೊಂದಿಕೊಂಡು ತಾತ್ಕಲಿಕವಾಗಿ ಮುರುಮ್​ ಹಾಕಿ ಇಳಿಜಾರು ಮಾಡಿದ್ದರಿಂದ ಸಂಚಾರಕ್ಕೆ ತೀವ್ರ ತೊಂದರೆಯಾಗಿದೆ. ಅಲ್ಲದೆ ಈ ರಸ್ತೆಯನ್ನು ಡಾಂಬರೀಕರಣ ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈಗಾಗಲೇ ಲೋಕಾಯುಕ್ತ ಕಚೇರಿಗೆ ಹಾಗೂ ರೈಲ್ವೆ ನಿಲ್ದಾಣದ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಆದರೆ ಭೀಮಾ ನದಿಗೆ ಹೋಗುವ ರಸ್ತೆಗೆ ಡಾಂಬರೀಕರಣ ಮಾಡದೆ ಕೇವಲ ಮುರುಮ್​ ಹಾಕಿ ಇಳಿಜಾರು ಆಗಿದ್ದರಿಂದ ತೀವ್ರ ಸಮಸ್ಯೆಯಾಗಿದೆ. 
ಸಾರ್ವಜನಿಕರ ಓಡಾಟ ಮತ್ತು ವಾಹನಗಳ ಸಂಚಾರಕ್ಕೆ ತುಂಬ ತೊಂದರೆ ಅನುಭವಿಸುವಂತಾಗಿದೆ. ಅಧಿಕಾರಿಗಳು ಕೂಡ ಈ ರಸ್ತೆ ಮೂಲಕ ಹೋಗುತ್ತಾರೆ. ಅವರ ಕಣ್ಣಿಗೆ ಕಂಡರೂ ಕಾಣದಿರುವುದು ಭೀಮಾ ನದಿ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಹೆದ್ದಾರಿಯಿಂದ ನದಿಗೆ ಇಳಿಜಾರು ಪ್ರದೇಶದಲ್ಲಿ ಡಾಂಬರ್​ ರಸ್ತೆ ನಿರ್ಮಿಸಬೇಕು. ಇಲ್ಲದಿದ್ದರೆ ಸಿಮೆಂಟ್​ ರಸ್ತೆ ಮಾಡಬೇಕು ಎಂದು ನಗರದ ಹಾಗೂ ಸುತ್ತಮುತ್ತಲಿನ ಭಕ್ತರಿಗೆ ನದಿ ಸ್ನಾನ ಸೇರಿ ಇತರೆ ಧಾರ್ಮಿಕ ಕಾರ್ಯಗಳಿಗೆ ಹೋಗಲು ಅನುಕೂಲ ಮಾಡಿಕೊಡಬೇಕೆಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಭಕ್ತರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net