ಬೀದರ್ನಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯೆ ಪಲ್ಲವಿ ಜಿ. ಮಾತನಾಡಿದರು. ಡಿಸಿ ಶಿಲ್ಪಾ ಶರ್ಮಾ, ಆನಂದಕುಮಾರ ಏಕಲವ್ಯ, ಯೋಗೇಶ್ ಇದ್ದರು
ಬೀದರ್: ಅಲೆಮಾರಿ ಸಮುದಾಯಗಳಿಗೆ ನಿಗದಿಪಡಿಸಿದ ಯೋಜನೆಗಳು ಸರಿಯಾದ ಸಮಯಕ್ಕೆ ಅರ್ಹ ಲಾನುಭವಿಗಳಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯೆ ಪಲ್ಲವಿ ಜಿ. ಸೂಚಿಸಿದರು.
ಡಿಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ವಿವಿಧ ಯೋಜನೆಗಳ ಕುರಿತು ಜಿಲ್ಲಾ ಅನುಷ್ಠಾನ ಸಮಿತಿ ಸದಸ್ಯರು ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಆಯೋಜಿಸಿದ್ದ ಪ್ರಗತಿ ಪರಿಶೀಲನೆ ಮತ್ತು ಸಮಾಲೋಚನೆ ಸಭೆಯಲ್ಲಿ ಮಾತನಾಡಿದ ಅವರು, ಸ್ಥಗಿತಗೊಂಡ ಅಲೆಮಾರಿ ಸಮುದಾಯ ಭವನ ಕಾಮಗಾರಿಗಳನ್ನು ನಿಗಮದಿಂದ ಅನುದಾನ ನೀಡಿ ಪೂರ್ಣಗೊಳಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಕಳೆದ ವರ್ಷವೂ ಏ.18ರಂದು ನಾನು ಬೀದರ್ ಜಿಲ್ಲಾ ಪ್ರವಾಸ ಕೈಗೊಂಡಿದ್ದೆ. ಆ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿನ ಅಲೆಮಾರಿ ಸಮುದಾಯದವರ ವಾಸಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ತಿಳಿದುಕೊಂಡಿದ್ದೆ. ಈಗಲೂ ಅಧಿಕಾರಿಗಳ ಜತೆ ಹೋಗಿ ಪರಿಶೀಲನೆ ಮಾಡಿದ್ದೇನೆ ಎಂದರು.
ಅಲೆಮಾರಿಗಳ ಸಮಸ್ಯೆ ಬಗೆಹರಿಸುವಂತೆ ಸಂಬಂಧಪಟ್ಟ ಎಲ್ಲ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದೆ. ಚೌಳಿ ಕಮಾನ್ ಹತ್ತಿರದ ಸಿಂಧೋಳ್ ಮತ್ತು ಮಾಂಗಾರವಾಡಿಯ 84 ಕುಟುಂಬಗಳಿಗೆ ಅಲಿಯಂಬರ್ ಗ್ರಾಮದಲ್ಲಿ ಎರಡು ಎಕರೆ ಭೂಮಿ ನಿಗದಿಪಡಿಸಿ ಲೇಔಟ್ ಪ್ಲಾ$್ಯನಿಂಗ್ ಮಾಡಿ ಪ್ರಸ್ತಾವನೆ ಕಳುಹಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದಕ್ಕೆ ಬೇಕಾಗುವ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಅಲೆಮಾರಿ ಅಭಿವೃದ್ಧಿ ನಿಗಮದ ಜಂಟಿ ನಿರ್ದೇಶಕ ಆನಂದಕುಮಾರ ಏಕಲವ್ಯ, ಜಿಲ್ಲಾ ಸಮಾಜ ಕಲ್ಯಾಣ ಉಪ ನಿರ್ದೇಶಕ ಯೋಗೇಶ್, ಅಲೆಮಾರಿ ಸಮುದಾಯದ ಅನುಷ್ಠಾನ ಸಮಿತಿ ಸದಸ್ಯರಾದ ಪಿ.ಟಿ. ಶ್ಯಾಮ, ರೇಖಾ ರಾಕೇಶ್, ಮಹೇಶ, ತಿಪ್ಪಣ್ಣ, ಆಕಾಶ ಇತರರಿದ್ದರು.