ರೈತರಿಗೆ ದ್ರೋಣ್, AI ತಲುಪಿಸಿ: ಬಡ್ಡಿರಹಿತ ದಂಧೆಗೆ ಬ್ರೇಕ್​ ಹಾಕಿ; ಕೃಷಿ ಇಲಾಖೆಗೆ ಸಿಎಂ ಡಿ.ಕೆ ಶಿವಕುಮಾರ್ ನೀಡಿದ ಖಡಕ್ ಆದೇಶಗಳೇನು? CM D K Shivakumar

ಸಿ.ಎಂ ಡಿಕೆಶಿ ನೇತೃತ್ವದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಮೀನುಗಾರಿಕೆ ಇಲಾಖೆ ಪ್ರಗತಿ ಪರಿಶೀಲನೆ ಸಭೆ
ಸಿ.ಎಂ ಡಿಕೆಶಿ ನೇತೃತ್ವದಲ್ಲಿ ಕೃಷಿ, ತೋಟಗಾರಿಕೆ, ರೇಷ್ಮೆ ಮೀನುಗಾರಿಕೆ ಇಲಾಖೆ ಪ್ರಗತಿ ಪರಿಶೀಲನೆ ಸಭೆ
Published on

ಪ್ರಮುಖ ಮುಖ್ಯಾಂಶಗಳು

  • ರೈತರ 5 ಲಕ್ಷ ಬಡ್ಡಿರಹಿತ ಸಾಲದ ದಂಧೆಗೆ ಸಿಎಂ ಡಿ.ಕೆ. ಶಿವಕುಮಾರ್ ಗರಂ
  • ಇಲಾಖೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅಧಿಕಾರಿಗಳ ಬೆವರಿಳಿಸಿದ ಸಿಎಂ
  • ಮಾವು ಬೆಳೆಗಾರರಿಗೆ 229 ಕೋಟಿ ರೂ. ಪರಿಹಾರದ ಭರವಸೆ
  • ರೈತರ ಕೈಗೆ ಸಿಗಲಿದೆ ಡ್ರೋನ್ ಮತ್ತು AI ತಂತ್ರಜ್ಞಾನ
ಬೆಂಗಳೂರು: ರಾಜ್ಯದ ರೈತರಿಗೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಕೊರತೆಯಾಗದಂತೆ ನೋಡಿಕೊಳ್ಳಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (CM D K Shivakumar) ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಸೋಮವಾರ (ಜೂ.15) ವಿಧಾನಸೌಧದಲ್ಲಿ ನಡೆದ ಕೃಷಿ, ತೋಟಗಾರಿಕೆ, ರೇಷ್ಮೆ ಹಾಗೂ ಮೀನುಗಾರಿಕೆ ಇಲಾಖೆಗಳ ಮಹತ್ವದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಿಎಂ ಅಧಿಕಾರಿಗಳ ಕ್ಲಾಸ್ ತಗೆದುಕೊಂಡಿದ್ದಾರೆ.
ಮುಂಗಾರು ಮಳೆ ಹಾಗೂ ಬರ ಪರಿಸ್ಥಿತಿ ಎರಡನ್ನೂ ಎದುರಿಸಲು ಇಲಾಖೆಗಳು ಅಲರ್ಟ್ ಆಗಿರಬೇಕು ಎಂದು ಎಚ್ಚರಿಸಿರುವ ಸಿಎಂ, ರೈತರ ಆದಾಯ ಹೆಚ್ಚಿಸಲು ಮತ್ತು ಕೃಷಿ ವಲಯವನ್ನು ಡಿಜಿಟಲ್ ವಲಯವನ್ನಾಗಿ ಪರಿವರ್ತಿಸಲು ಹತ್ತಾರು ಮಹತ್ವದ ಆದೇಶಗಳನ್ನು ಹೊರಡಿಸಿದ್ದಾರೆ.

ಡ್ರೋನ್ ಮತ್ತು AI ತಂತ್ರಜ್ಞಾನ ರೈತರ ಕೈಗೆ ಸಿಗಬೇಕು!

ಕೇವಲ ಹಳೇ ಪದ್ಧತಿಯಲ್ಲೇ ಕೃಷಿ ಮಾಡಿದರೆ ಸಾಲದು, ಇಲಾಖೆಗಳು ಅಪ್ಡೇಟ್ ಆಗಬೇಕು ಎಂದು ಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ರೈತರಿಗೆ ಡ್ರೋನ್ ಮತ್ತು ಕೃತಕ ಬುದ್ಧಿಮತ್ತೆ (AI) ನಂತಹ ಆಧುನಿಕ ತಂತ್ರಜ್ಞಾನಗಳನ್ನು ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದಿದ್ದಾರೆ.
ಕೃಷಿ ಹೊಂಡಗಳಿಗೆ ಬಿದ್ದು ಜನರು, ಪ್ರಾಣಿಗಳು ಸಾವನ್ನಪ್ಪುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಸಿಎಂ, ತಕ್ಷಣವೇ ಎಲ್ಲಾ ಕೃಷಿ ಹೊಂಡಗಳಿಗೆ ಬೇಲಿ ನಿರ್ಮಿಸಲು ಯೋಜನೆ ರೂಪಿಸುವಂತೆ ಆದೇಶಿಸಿದ್ದಾರೆ. ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಖಾಲಿ ಇರುವ ಕೃಷಿ ಅಧಿಕಾರಿಗಳ ಹುದ್ದೆಗಳನ್ನು ಶೀಘ್ರದಲ್ಲೇ ನೇಮಕಾತಿ ನಡೆಸಲಾಗುವುದು ಎಂದಿದ್ದಾರೆ.

ಬಡ್ಡಿರಹಿತ ಸಾಲದ ದಂಧೆಗೆ ಬ್ರೇಕ್!

ಸಹಕಾರ ಇಲಾಖೆಯ ಕಾಸ್ಕಾರ್ಡ್ ಬ್ಯಾಂಕ್‌ಗಳಲ್ಲಿ ದೊಡ್ಡ ಮಟ್ಟದ ಸಾಲದ ದಂಧೆ ನಡೆಯುತ್ತಿರುವ ಬಗ್ಗೆ ಸಿಎಂ ಗರಂ ಆಗಿದ್ದಾರೆ.
ರೈತರಿಗೆ ಸಿಗಬೇಕಾದ 5 ಲಕ್ಷ ರೂಪಾಯಿವರೆಗಿನ ಬಡ್ಡಿ ರಹಿತ ಸಾಲದ ಸೌಲಭ್ಯ ನಿಜವಾದ ಫಲಾನುಭವಿಗಳಿಗೆ ತಲುಪುತ್ತಿಲ್ಲ. ಬ್ಯಾಂಕ್‌ನವರೇ ತಮಗೆ ಬೇಕಾದವರ ಹೆಸರಿನಲ್ಲಿ ಸಾಲ ಪಡೆದು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ರೈತರು ನನ್ನ ಬಳಿ ಬಂದು ಕಣ್ಣೀರು ಹಾಕಿದ್ದಾರೆ. ಈ ವಂಚನೆಗೆ ಕಟ್ಟುನಿಟ್ಟಿನ ಬ್ರೇಕ್ ಹಾಕಬೇಕು ಎಂದು ಸಿಎಂ ಡಿಕೆಶಿ ಎಚ್ಚರಿಸಿದ್ದಾರೆ. ಅಲ್ಲದೆ, ಸಹಕಾರ ಇಲಾಖೆ ಅಡಿಯಲ್ಲಿ ಬಾಕಿ ಇರುವ ಎಲ್ಲಾ ಸಂಸ್ಥೆಗಳಿಗೆ ತಕ್ಷಣವೇ ಚುನಾವಣೆ ನಡೆಸುವಂತೆ ಗಡುವು ನೀಡಿದ್ದಾರೆ.

ಮಾವು ಬೆಳೆಗಾರರಿಗೆ 229 ಕೋಟಿ ಪರಿಹಾರದ ಭರವಸೆ!

ಈ ವರ್ಷ ರಾಜ್ಯದಲ್ಲಿ ಬರೋಬ್ಬರಿ 1,068 ಕೋಟಿ ರೂಪಾಯಿ ಮೌಲ್ಯದ ಮಾವು ಬೆಳೆ ನಾಶವಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿದ್ದು, ಇದರ ಪರಿಹಾರವಾಗಿ ಕಾನೂನು ಪ್ರಕಾರ ಶೇ.25 ಅಂದರೆ 229 ಕೋಟಿ ರೂಪಾಯಿ ಪರಿಹಾರವನ್ನು ರೈತರಿಗೆ ನೀಡಲು ತೀರ್ಮಾನಿಸಲಾಗಿದೆ. ಇದರಲ್ಲಿ ಕರ್ನಾಟಕ ಸರ್ಕಾರ 114 ಕೋಟಿ ರೂ. ಹಾಗೂ ಕೇಂದ್ರ ಸರ್ಕಾರ 115 ಕೋಟಿ ರೂ. ಭರಿಸಬೇಕಾಗಿದ್ದು, ರೈತರಿಗೆ ಶೀಘ್ರದಲ್ಲೇ ಹಣ ತಲುಪಿಸಲು ಸಿಎಂ ಸೂಚನೆ ನೀಡಿದ್ದಾರೆ.

ಸಬ್ಸಿಡಿ ಹಗರಣಗಳ ತನಿಖೆ? ವರದಿ ಕೇಳಿದ ಸಿಎಂ!

ಸರ್ಕಾರ ರೈತರಿಗೆ ಸಬ್ಸಿಡಿ ದರದಲ್ಲಿ ನೀಡುತ್ತಿರುವ ಸವಲತ್ತುಗಳು ನಿಜಕ್ಕೂ ರೈತರ ಕೈ ಸೇರುತ್ತಿದೆಯೇ? ಅಥವಾ ಮಧ್ಯವರ್ತಿಗಳ ಪಾಲಾಗುತ್ತಿದೆಯೇ? ಎಂಬುದರ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸಿಎಂ ಡಿ.ಕೆ. ಶಿವಕುಮಾರ್ ಸೂಚಿಸಿದ್ದಾರೆ.
ರಾಜ್ಯದಲ್ಲಿರುವ ಕೋಲ್ಡ್ ಸ್ಟೋರೇಜ್ ಮತ್ತು ಗೋದಾಮುಗಳ ಪಟ್ಟಿಯನ್ನು ಕೇಳಿರುವ ಸಿಎಂ, ಕೆಪೆಕ್ (KAPPEC) ಮೂಲಕ ಕೃಷಿ ಉತ್ಪನ್ನಗಳ ರಫ್ತು ಹೆಚ್ಚಿಸಲು ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್ ಹಾಗೂ ಎಸಿಎಸ್ ತುಷಾರ ಗಿರಿನಾಥ್ ಅವರಿಗೆ ಜವಾಬ್ದಾರಿ ವಹಿಸಿದ್ದಾರೆ.
ಎಪಿಎಂಸಿ (APMC) ಮಾರುಕಟ್ಟೆಗಳ ಜಾಗವನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಳ್ಳದಂತೆ ಕಾಂಪೌಂಡ್ ಹಾಕಿಸಿ ಸುರಕ್ಷತೆ ಒದಗಿಸಬೇಕು ಮತ್ತು ಆವರ್ತ ನಿಧಿಯನ್ನು ರೈತರ ಹಿತಕ್ಕಾಗಿಯೇ ಬಳಸಬೇಕು ಎಂದು ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net