ಬರಪೀಡಿತ ತಾಲೂಕು ಘೋಷಣೆ ಮಾಡಿ

 ಜೇವರ್ಗಿಯಲ್ಲಿ ಜೆಡಿಎಸ್​ನಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಲಾಯಿತು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್​, ರಮೇಶಬಾಬು ವಕೀಲ್​, ರೌಫ್​ ಹವಲ್ದಾರ, ಗೊಲ್ಲಾಳಪ್ಪ ಕಡಿ ಇತರರಿದ್ದರು
ಜೇವರ್ಗಿಯಲ್ಲಿ ಜೆಡಿಎಸ್​ನಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಲಾಯಿತು. ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್​, ರಮೇಶಬಾಬು ವಕೀಲ್​, ರೌಫ್​ ಹವಲ್ದಾರ, ಗೊಲ್ಲಾಳಪ್ಪ ಕಡಿ ಇತರರಿದ್ದರು
Published on
ಜೇವರ್ಗಿ: ಬರಪೀಡಿತ ತಾಲೂಕು ಘೋಷಣೆ ಮಾಡಿ, ರೈತರಿಗೆ ಮಧ್ಯಂತರ ಪರಿಹಾರ ಕಲ್ಪಿಸಬೇಕು ಎಂದು ಮಾಜಿ ಶಾಸಕ ಹಾಗೂ ಜೆಡಿಎಸ್​ ರಾಜ್ಯ ಕಾರ್ಯಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ್​ ನರಿಬೋಳ ಒತ್ತಾಯಿಸಿದರು.
ಬಸವೇಶ್ವರ ವೃತ್ತದಲ್ಲಿ ಜೆಡಿಎಸ್​ನಿಂದ ಶನಿವಾರ ಹಮ್ಮಿಕೊಂಡಿದ್ದ ಬೃಹತ್​ ಪ್ರತಿಭಟನೆಯಲ್ಲಿ ಮಾತನಾಡಿ, ಹಿಂದಿನ ವರ್ಷ ಅತವೃಷ್ಟಿಯಿಂದ ರೈತರು ನೋವು ಅನುಭವಿಸಿದ್ದರು. ಈ ವರ್ಷ ಮಳೆ ಬಾರದೆ ಬರದಿಂದ ಕಂಗಾಲಾಗಿದ್ದಾರೆ. ರೈತಾಪಿ ವರ್ಗ ಸಂಕಷ್ಟಕ್ಕೆ ಸಿಲುಕಿ ತೊಂದರೆ ಪಡುತ್ತಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಬರ ಘೋಷಣೆ ಮಾಡಬೇಕು. ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ಈ ಹಿಂದೆ ಎಚ್​.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಇದ್ದಾಗ ರೈತರ ಸಾಲಮನ್ನಾ ಮಾಡಿದ್ದ ರೀತಿಯಲ್ಲಿಯೇ ಈಗಿನ ಕಾಂಗ್ರೆಸ್​ ಸರ್ಕಾರವೂ ಎಲ್ಲ ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್​ಗಳಲ್ಲಿನ ಸಾಲಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ರೈತರ ಪಂಪ್​ಸೆಟ್​ಗಳಿಗೆ ದಿನಕ್ಕೆ 7ಗಂಟೆ ವಿದ್ಯುತ್​ ನೀಡಬೇಕಾದ ಕೆಇಬಿ, ಇಲ್ಲದ ಕಾರಣ ಹೇಳಿ ನಿತ್ಯ ಕೇವಲ ಒಂದು ಗಂಟೆ ಕರೆಂಟ್​ ನೀಡುತ್ತಿದೆ. ರೈತರಿಗೆ ಪೂರ್ಣ ಪ್ರಮಾಣದಲ್ಲಿ 7 ಗಂಟೆ ವಿದ್ಯುತ್​ ನೀಡಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜು ಸಮಯಕ್ಕೆ ಬಸ್​ ವ್ಯವಸ್ಥೆ ಮಾಡಬೇಕು. ಕೃಷಿ ಇಲಾಖೆಯಿಂದ ರೈತರಿಗೆ ವಿತರಿಸಬೇಕಾದ ಗೊಬ್ಬರ ಕಾಳಸಂತೆಯಲ್ಲಿ ಮಾರಾಟ ನಡೆಯುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ನರಿಬೋಳ-ಚಾಮನೂರ ಸೇತುವೆ ನಿರ್ಮಾಣ ಕಾಮಗಾರಿಗಾಗಿ 32 ಕೋಟಿ ರೂ. ಟೆಂಡರ್​ ಆಗಿದ್ದು, ಕೂಡಲೇ ಕೆಲಸ ಆರಂಭಿಸಬೇಕು. ವಡಗೇರಾ ಸಕ್ಕರೆ ಕಾರ್ಖಾನೆ ಕಬ್ಬು ನೀಡಿದ ರೈತರ ಬಿಲ್​ ಬಾಕಿ ಉಳಿಸಿಕೊಂಡಿದ್ದು, ಕೂಡಲೇ ಖಾತೆಗೆ ಜಮೆ ಮಾಡಬೇಕು. ತಾಲೂಕಿನಲ್ಲಿ ಭೂಸೇನೆಯಿಂದ ನಡೆಯುತ್ತಿರುವ ಕಾಮಗಾರಿಗಳಲ್ಲಿ ಹಣ ಲೂಟಿ ನಡೆಯುತ್ತಿದ್ದು, ಈ ಬಗ್ಗೆ ತನಿಖೆ ನಡೆಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಲ್ಲದೆ ಲೂಟಿ ಮಾಡಿದ ಹಣವನ್ನು ಅವರಿಂದಲೇ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ರಮೇಶಬಾಬು ವಕೀಲ, ರೌಫ್​ ಹವಾಲ್ದಾರ್​, ದಂಡಪ್ಪ ಸಾಹು ಕುರಳಗೇರಾ, ಬಸವರಾಜ ಪಾಟೀಲ್​ ನರಿಬೋಳ, ಬಸವರಾಜ ಪಾಟೀಲ್​ ಬಳಬಟ್ಟಿ, ಬಸವರಾಜ ಮಾಲಿಪಾಟೀಲ್​ ಅರಳಗುಂಡಗಿ, ಶಿವಾನಂದ ದ್ಯಾಮಗೊಂಡ, ಧಮುರ್ ಜೋಗೂರ, ಬಾಪುಗೌಡ ವಿಭೂತಿ, ಸಿದ್ದಣ್ಣ ಹೂಗಾರ, ಗೊಲ್ಲಾಳಪ್ಪ ಮಾಗಣಗೇರಾ, ಗೊಲ್ಲಾಳಪ್ಪ ಕಡಿ, ನಾನಾಗೌಡ ಅಲ್ಲಾಪುರ, ಸಿದ್ದಣ್ಣ ಗಡ್ಡದ, ಭೀಮರಾಯ ಮಡಿವಾಳ, ಹಳ್ಳೆಮ್ಮ ಗೌಡತಿ ಮಲ್ಲಾಬಾದ್​, ವಿಜಯಲ್ಮ ಆಂದೋಲಾ, ಸರೋಜಿನಿ ಮಯೂರ, ಈರಣ್ಣ ಅವರಾದ, ರವಿ ಪಡಶೆಟ್ಟಿ, ರಾಕೇಶ ಹರಸೂರ, ಬಸವರಾಜ ಮಡಿವಾಳ ಇತರರಿದ್ದರು.
ಅಖಂಡೇಶ್ವರ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಎತ್ತಿನ ಬಂಡಿಗಳೊಂದಿಗೆ ಬೃಹತ್​ ಪ್ರತಿಭಟನೆ ನಡೆಸಲಾಯಿತು. ಬಳಕ ತಹಸೀಲ್ದಾರ್​ ಅಂಜುಮ್​ ತಬಸ್ಸುಮ್​ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net