ಬೆಂಗಳೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಕೈಗಾರಿಕಗೆ, ಕಲಬುರಗಿ ಜವಳಿ ಪಾರ್ಕ್ಗೆ ಸಂಬಂಧಿಸಿದ ಪ್ರಗತಿ ಪರಿಶೀಲನಾ ಸಭೆ ಶುಕ್ರವಾರ ನಡೆಯಿತು. ಸಚಿವ ಎಂ.ಬಿ.ಪಾಟೀಲ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ, ಹಿರಿಯ ಅಧಿಕಾರಿಗಳಾದ ಡಾ.ಎಸ್.ಸೆಲ್ವಕುಮಾರ್, ರೋಹಿಣಿ ಸಿಂಧೂರಿ, ಖುಷ್ಬು ಗೋಯಲ್ ಚೌಧರಿ, ಕೆ.ಬಿ.ಬಸವರಾಜ್, ಗೋವಿಂದರೆಡ್ಡಿ ಇತರರು ಪಾಲ್ಗೊಂಡಿದ್ದರು.
ಕಲಬುರಗಿ: ಮುಖ್ಯಮಂತ್ರಿಗಳು ಈ ಬಾರಿಯ ಆಯವ್ಯಯದಲ್ಲಿ ಘೋಷಿಸಿರುವಂತೆ ಕಲಬುರಗಿಯಲ್ಲಿ ಸ್ಥಾಪನೆಯಾಗಲಿರುವ ಮಹತ್ವಾಕಾಂ ಪಿಎಂ ಮಿತ್ರ ಜವಳಿ ಪಾರ್ಕ್ ಯೋಜನೆಯ ಕಾಮಗಾರಿ ಅತ್ಯಂತ ವೇಗವಾಗಿ ಪೂರ್ಣಗೊಳಿಸಲು ನಿರ್ಧರಿಸಲಾಯಿತು.
ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ಕೈಮಗ್ಗ ಮತ್ತು ಜವಳಿ ಇಲಾಖೆ ಹಾಗೂ ಕೈಗಾರಿಕಾ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ಮಹತ್ವದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಆಯವ್ಯಯದ ೂಷಣೆಯನ್ನು ಕಾಲಮಿತಿಯಲ್ಲಿ ಜಾರಿಗೆ ತರಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು.
ಪರೀಷ್ಕೃತ ಯೋಜನಾ ವರದಿ ಸಿದ್ಧತೆ
ಕಲಬುರಗಿ ಪಾರ್ಕ್ನ ಬಾಹ್ಯ ಮೂಲಸೌಕರ್ಯ ಕಾಮಗಾರಿ ಒಳಗೊಂಡಂತೆ ಸಮಗ್ರ ಯೋಜನಾ ವರದಿಯನ್ನು ತಣವೇ ಪರೀಷ್ಕರಿಸಿ, ಭಾರತ ಸರ್ಕಾರದ ಯೋಜನಾ ಅನುಮೋದನೆ ಸಮಿತಿಗೆ ಸಲ್ಲಿಸಲು ಕೈಮಗ್ಗ ಮತ್ತು ಜವಳಿ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಭೂಮಿ ಹಂಚಿಕೆ ಮತ್ತು ಆಂತರಿಕ ಕಾಮಗಾರಿಗೆ ಸಂಬಂಧಿಸಿದಂತೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಮೂಲಕ ಪಾರ್ಕ್ನ ಮೊದಲ ಹಂತದ ಅಭಿವೃದ್ಧಿ ಕಾಮಗಾರಿ ತಕ್ಷಣವೇ ಆರಂಭಿಸಲು ಸಭೆಯಲ್ಲಿ ಚರ್ಚಿಸಲಾಯಿತು. ಮೊದಲ ಹಂತದ ಯಶಸ್ವಿ ಅನುಷ್ಠಾನದ ನಂತರವಷ್ಟೇ, ಉದ್ಯೋಗ ಸೃಷ್ಟಿ ಮತ್ತು ಹೂಡಿಕೆ ಪ್ರಮಾಣ ಆಧರಿಸಿ ಎರಡನೇ ಹಂತದ ಅಭಿವೃದ್ಧಿಗೆ ಚಾಲನೆ ನೀಡಲು ಸಭೆ ನಿರ್ಧರಿಸಿತು ಎಂದೂ ಸಚಿವರು ವಿವರಿಸಿದ್ದಾರೆ.
ಕೇಂದ್ರ ಸರ್ಕಾರದ ಅಭಿವೃದ್ಧಿ ಬಂಡವಾಳ ಬೆಂಬಲ ಯೋಜನೆಯಡಿ ಒಟ್ಟು ಯೋಜನಾ ವೆಚ್ಚದ ಶೇ.30 ರಷ್ಟು ಧನಸಹಾಯ ಲಭ್ಯವಾಗಲಿದ್ದು, ಇದನ್ನು ಎರಡು ಹಂತಗಳಲ್ಲಿ ಬಳಸಿಕೊಳ್ಳಲಾಗುವುದು. ಕೇಂದ್ರದ ಮಾರ್ಗಸೂಚಿ ಪ್ರಕಾರ, ಪಾರ್ಕ್ನ ಗೇಟ್ನಿಂದ ಹೊರಗಡೆ ನಡೆಯುವ ಬಾಹ್ಯ ಕಾಮಗಾರಿ ಒಟ್ಟಾರೆ ಅನುದಾನದ ಅರ್ಹತೆಗಾಗಿ ಪರಿಗಣಿಸಬಹುದಾದರೂ, ಕೇಂದ್ರದ ನಿಜವಾದ ಧನಸಹಾಯವನ್ನು ಕೇವಲ ಪಾರ್ಕ್ನ ಒಳಗಿನ ಆಂತರಿಕ ಮೂಲಸೌಕರ್ಯಗಳಾದ ರಸ್ತೆ, ನೀರು, ವಿದ್ಯುತ್, ತ್ಯಾಜ್ಯ ನೀರು ಸಂಸ್ಕರಣಾ ಘಟಕ ಮತ್ತು ವಸತಿ ನಿಲಯಗಳಿಗಾಗಿ ಬಳಸಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಜವಳಿ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಖುಷ್ಬು ೂಯಲ್ ಚೌಧರಿ, ಜವಳಿ ಇಲಾಖೆಯ ಆಯುಕ್ತ ಕೆ.ಬಿ.ಬಸವರಾಜ್, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ ಇತರರು ಪಾಲ್ಗೊಂಡಿದ್ದರು.
"
ಕಲಬುರಗಿ ಜಿಲ್ಲೆಯ ಆರ್ಥಿಕ ಚಿತ್ರಣವನ್ನೇ ಬದಲಿಸಬಲ್ಲ ಮತ್ತು ಸಾವಿರಾರು ಜನರಿಗೆ ಉದ್ಯೋಗ ನೀಡಬಲ್ಲ ಈ ಬೃಹತ್ ಜವಳಿ ಪಾರ್ಕ್ ಯೋಜನೆಯ ಮೊದಲ ಕಂತಿನ ಹಣ ಬಿಡುಗಡೆಗೆ ಅನುವಾಗುವಂತೆ, ರಾಜ್ಯ ಅನುಷ್ಠಾನ ಸಂಸ್ಥೆಯು ಕನಿಷ್ಠ 25 ಕೋಟಿ ಹಣ ಭೌತಿಕ ಮೂಲಸೌಕರ್ಯಗಳಿಗೆ ವಿನಿಯೋಗಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.
— ಪ್ರಿಯಾಂಕ್ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ, ಕಲಬುರಗಿ.