ರೈತರ ಪಾಲಿಗೆ ಮರಣಶಾಸನ

ವಿಧಾನ ಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್
ವಿಧಾನ ಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್
Published on
ಬೆಂಗಳೂರು : ಅಮೆರಿಕಾ ಮತ್ತು ಭಾರತ ನಡುವಿನ ವ್ಯಾಪಾರ ಒಪ್ಪಂದ ರೈತರ ಪಾಲಿಗೆ ಮರಣಶಾಸನ ಎಂದು ಕೇಂದ್ರ ಸರ್ಕಾರದ ವಿರುದ್ಧ ವಿಧಾನ ಪರಿಷತ್‌ನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ವಾಗ್ದಾಳಿ ನಡೆಸಿದರು.
ಯುವ ಕಾಂಗ್ರೆಸ್ ವತಿಯಿಂದ ಬುಧವಾರ ಭಾರತ- ಅಮೆರಿಕಾ ವ್ಯಾಪಾರ ಒಪ್ಪಂದವನ್ನು ವಿರೋಧಿಸಿ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಕಿಸಾನ್ ನ್ಯಾಯ ಸತ್ಯಾಗ್ರಹದಲ್ಲಿ ಭಾಗವಹಿಸಿ ಸಲೀಂ ಅಹ್ಮದ್ ಮಾತನಾಡಿದರು.
ವ್ಯಾಪಾರ ಒಪ್ಪಂದದ ಮೂಲಕ ಭಾರತದ ರೈತರ ಪರಿಶ್ರಮ ಮತ್ತು ಬೆವರನ್ನು ಪ್ರಧಾನಿ ನರೇಂದ್ರ ಮೋದಿ ಮಾರಾಟ ಮಾಡಿದ್ದಾರೆ. ಅಮೆರಿಕಾದ ಒತ್ತಡಕ್ಕೆ ಮೋದಿಯವರು ಭಯಭೀತರಾಗಿ ವ್ಯಾಪಾರದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಕೇಂದ್ರ ಸರ್ಕಾರ ಭಾರತದ 147 ಕೋಟಿ ಜನರಿಗೆ ಮಾಡಿದ ಮಹಾದ್ರೋಹವಾಗಿದೆ ಎಂದು ಸಲೀಂ ಆರೋಪಿಸಿದರು.
ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಲೆಮೇಲೆ ಕೂರಿಸಿ ಮೆರೆದಾಡುತ್ತಿರುವ ಪ್ರಧಾನಿ ಮೋದಿ ಈಗ ಅದೇ ಟ್ರಂಪ್‌ರ ಆಜ್ಞಾಪಾಲಕರಾಗುವ ಸ್ಥಿತಿಗೆ ಬಂದಿರುವುದು ವಿಷಾದನೀಯ ಸಂಗತಿ. ಈ ಒಪ್ಪಂದದಿಂದಾಗಿ ದೇಶದ ರೈತರು ದುರ್ಬಲರಾಗುತ್ತಾರೆ ಎಂದು ಸಲೀಂ ಅಹ್ಮದ್ ಕಿಡಿಕಾರಿದರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 12 ವರ್ಷವಾಗಿದೆ. ರೈತರ ಆದಾಯ ದ್ವಿಗುಣ ಮಾಡುವ ಭರವಸೆ ಇನ್ನೂ ಈಡೇರಿಸಿಲ್ಲ.
ರೈತ- ವಿರೋಧಿ ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದವನ್ನು ರದ್ದುಗೊಳಿಸಬೇಕು. ರೈತರಿಗೆ ಎಂಎಸ್‌ಪಿ ಕಾನೂನುಬದ್ಧ ಖಾತರಿ ನೀಡಬೇಕು. ಮೊದಲ ಬಾರಿಗೆ ಭಾರತದ ಕೃಷಿ ಮಾರುಕಟ್ಟೆಯನ್ನು ಜಾಗತಿಕ ಮಾರಾಟಗಾರರಿಗೆ ತೆರೆಯಲಾಗುತ್ತಿದೆ. ಇದರಿಂದ ದೇಶದ ಗೌಪ್ಯ ಮಾಹಿತಿಯನ್ನು ಅಮೆರಿಕಾಕ್ಕೆ ಒಪ್ಪಿಸಿದಂತಾಗಿದೆ. ಆದರಿಂದ ವ್ಯಾಪಾರ ಒಪ್ಪಂದವನ್ನು ರದ್ದುಗೊಳಿಸಬೇಕೆಂದು ಸಲೀಂ ಅಹ್ಮದ್ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್, ಮಾಜಿ ಮೇಯರ್ ಹುಚ್ಚಪ್ಪ ಸೇರಿದಂತೆ ಯುವ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net