ಕಂದಾಯ ಅಧಿಕಾರಿ ಹಡಗಲಿ ಹೊನ್ನಪ್ಪ, ಗ್ರಾಮ ಸಹಾಯಕ ಭರತ್ ಗಾಯಗೊಂಡವರು. ಚನ್ನಿಗಪ್ಪನ ಪಾಳ್ಯದ ಸರ್ಕಾರಿ ಓಣಿಯನ್ನು ಕೆಲವರು ಒತ್ತುವರಿ ಮಾಡಿಕೊಂಡಿದ್ದರು. ಇದರಿಂದ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗಿತ್ತು. ಹೀಗಾಗಿ 3 ತಿಂಗಳ ಹಿಂದೆ ವೀರಾಪುರ ಗ್ರಾಮಸ್ಥರೆಲ್ಲರೂ ಒಟ್ಟಾಗಿ ತಹಸೀಲ್ದಾರ್‌ಗೆ ಲಿಖಿತ ಮನವಿ ಸಲ್ಲಿಸಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ತಹಸೀಲ್ದಾರ್ ಆದೇಶದಂತೆ, ಮಂಗಳವಾರ ಮಧ್ಯಾಹ್ನ ತಾಲೂಕು ಸರ್ವೇಯರ್ ಮಂಜುನಾಥ್, ಗ್ರಾಮ ಆಡಳಿತ ಅಧಿಕಾರಿ ಹಡಗಲಿ ಹೊನ್ನಪ್ಪ ಹಾಗೂ ಗ್ರಾಮ ಸಹಾಯಕ ಭರತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದರು. ಅಧಿಕಾರಿಗಳ ತಂಡ ಒತ್ತುವರಿಯಾಗಿದ್ದ ಜಾಗದ ಮುಕ್ಕಾಲು ಭಾಗದಷ್ಟು ಸರ್ವೇ ಪೂರ್ಣಗೊಳಿಸಿತ್ತು. ಈ ವೇಳೆ ಏಕಾಏಕಿಯಾಗಿ ಬಂದ ಒತ್ತುವರಿದಾರರಾದ ಜಯಮ್ಮ ಅವರ ಮಕ್ಕಳಾದ ಚಂದ್ರಶೇಖರ್ ಹಾಗೂ ಮೋಹನ್ ಕುಮಾರ್ ಮೂರು ಮಂದಿ ಕರ್ತವ್ಯದಲ್ಲಿದ್ದ ಅಧಿಕಾರಿಗಳೊಂದಿಗೆ ಜಗಳ ತೆಗೆದಿದ್ದಾರೆ. ಮಿತಿಮೀರಿ ಕಂದಾಯ ಅಧಿಕಾರಿ ಹೊನ್ನಪ್ಪ ಅವರ ಮೇಲೆ ಇಬ್ಬರೂ ಆರೋಪಿಗಳು ಮಾರಣಾಂತಿಕವಾಗಿ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ.