Ferrari: ಹೊಸ ಇವಿ ಕಾರು ತಂದ ಆಪತ್ತು: ಒಂದೇ ದಿನದಲ್ಲಿ 36,000 ಕೋಟಿ ರೂ. ಕಳೆದುಕೊಂಡ ಫೆರಾರಿ!

Ferrari
Ferrari
Published on
ಬೆಂಗಳೂರು: ಜಗತ್ತಿನ ಅತ್ಯಂತ ಪ್ರತಿಷ್ಠಿತ ಐಷಾರಾಮಿ ಸ್ಫೋರ್ಟ್ಸ್ ಕಾರ್ ತಯಾರಕ ಕಂಪನಿ ‘ಫೆರಾರಿ’ (Ferrari), ಆಟೋಮೊಬೈಲ್ ಮಾರುಕಟ್ಟೆಯ ಇಂದಿನ ಟ್ರೆಂಡ್‌ಗೆ ತಕ್ಕಂತೆ ತನ್ನ ಮೊದಲ ಸಂಪೂರ್ಣ ಎಲೆಕ್ಟ್ರಿಕ್ ಕಾರ್ (EV) ‘ಲೂಚೆ’ (Luce) ಅನ್ನು ಜಾಗತಿಕ ಮಾರುಕಟ್ಟೆಗೆ ಪರಿಚಯಿಸಿದೆ. ಆದರೆ, ಈ ಐತಿಹಾಸಿಕ ಲಾಂಚ್ ಕಂಪನಿಗೆ ಲಾಭ ತರುವ ಬದಲು ಭಾರಿ ಆಘಾತ ನೀಡಿದೆ.
ಹೌದು, ಇವಿ ಕಾರು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಫೆರಾರಿ ಕಂಪನಿಯ ಷೇರು ಮೌಲ್ಯ ಶೇಕಡಾ 5 ರಷ್ಟು ಕುಸಿದಿದ್ದು, ಹೂಡಿಕೆದಾರರ ಬರೋಬ್ಬರಿ 4.3 ಬಿಲಿಯನ್ ಡಾಲರ್ (ಸುಮಾರು 36,000 ಕೋಟಿ ರೂಪಾಯಿ) ಮಾರುಕಟ್ಟೆ ಮೌಲ್ಯ ಒಂದೇ ದಿನದಲ್ಲಿ ಮಣ್ಣು ಪಾಲಾಗಿದೆ!

ದುಬಾರಿ ಬೆಲೆ ಮತ್ತು ಮಾರುಕಟ್ಟೆಯ ನಿರಾಸಕ್ತಿ

ರೋರಿಂಗ್ ವಿ8 (V8) ಮತ್ತು ವಿ12 (V12) ಇಂಜಿನ್‌ಗಳ ಗರ್ಜನೆಗೆ ಹೆಸರಾಗಿದ್ದ ಫೆರಾರಿ, ಆಪಲ್ ಕಂಪನಿಯ ಮಾಜಿ ವಿನ್ಯಾಸ ಮುಖ್ಯಸ್ಥ ಜೊನಿ ಐವ್ ಅವರ ಸಹಯೋಗದೊಂದಿಗೆ ಈ ಐಷಾರಾಮಿ ಇವಿ ಕಾರನ್ನು ಸಿದ್ಧಪಡಿಸಿದೆ. 1,000 ಕ್ಕೂ ಹೆಚ್ಚು ಹಾರ್ಸ್‌ಪವರ್ ಸಾಮರ್ಥ್ಯ ಹೊಂದಿರುವ ಈ ಕಾರಿಗೆ ಬರೋಬ್ಬರಿ 6,40,000 ಡಾಲರ್ (ಅಂದರೆ ಅಂದಾಜು 5.3 ಕೋಟಿ ರೂಪಾಯಿಗೂ ಹೆಚ್ಚು) ಬೆಲೆ ನಿಗದಿಪಡಿಸಲಾಗಿದೆ.
ಆದರೆ ಜಾಗತಿಕವಾಗಿ ಸದ್ಯ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಕುಸಿಯುತ್ತಿರುವ ಸಮಯದಲ್ಲಿ ಫೆರಾರಿ ಇಷ್ಟೊಂದು ದುಬಾರಿ ಬೆಲೆಯ ಇವಿ ಕಾರನ್ನು ಬಿಡುಗಡೆ ಮಾಡಿರುವುದು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಪೋರ್ಷೆ ಮತ್ತು ಲ್ಯಾಂಬೋರ್ಗಿನಿಯಂತಹ ಕಾಂಪಿಟೇಟರ್ ಕಂಪನಿಗಳೇ ಸದ್ಯಕ್ಕೆ ಇವಿ ಯೋಜನೆಗಳಿಂದ ಹಿಂದೆ ಸರಿಯುತ್ತಿರುವಾಗ, ಫೆರಾರಿಯ ಈ ದುಬಾರಿ ಸಾಹಸ ಷೇರು ಮಾರುಕಟ್ಟೆಯಲ್ಲಿ ತೀವ್ರ ನಕಾರಾತ್ಮಕ ಪ್ರತಿಕ್ರಿಯೆ ಎದುರಿಸುವಂತೆ ಮಾಡಿದೆ.

ಫೆರಾರಿ ಇವಿ ಕಾರಿನ ವಿಶೇಷತೆಗಳೇನು?

ಹೆಸರು: ಲೂಚೆ (Luce - ಇಟಾಲಿಯನ್ ಭಾಷೆಯಲ್ಲಿ 'ಬೆಳಕು' ಎಂದರ್ಥ)
ಸಾಮರ್ಥ್ಯ: 4 ಎಲೆಕ್ಟ್ರಿಕ್ ಮೋಟಾರ್‌ಗಳು ಹಾಗೂ 1,000 ಕ್ಕೂ ಹೆಚ್ಚು ಹಾರ್ಸ್‌ಪವರ್.
ವೇಗ: ಗಂಟೆಗೆ ಗರಿಷ್ಠ 200 ಮೈಲಿ ವೇಗ ಹಾಗೂ ಸಿಂಗಲ್ ಚಾರ್ಜ್‌ನಲ್ಲಿ 300 ಮೈಲಿಗೂ ಅಧಿಕ ಮೈಲೇಜ್.
ವಿಶೇಷತೆ: ಇದು ಫೆರಾರಿಯ ಮೊದಲ 5 ಸೀಟರ್ ಮತ್ತು 4 ಡೋರ್ಸ್ ಹೊಂದಿರುವ ದೊಡ್ಡ ಕಾರಾಗಿದೆ.

ಷೇರು ಮಾರುಕಟ್ಟೆ ಕುಸಿತಕ್ಕೆ ಪ್ರಮುಖ ಕಾರಣಗಳು

1. ಇವಿ ಮಾರುಕಟ್ಟೆಯಲ್ಲಿನ ಮಂದಗತಿ: ಜಾಗತಿಕವಾಗಿ ಇವಿ ಕಾರುಗಳ ಮಾರಾಟವು ನಿರೀಕ್ಷಿತ ಮಟ್ಟದಲ್ಲಿಲ್ಲ. ಶ್ರೀಮಂತ ಗ್ರಾಹಕರು ಇಂದಿಗೂ ಇವಿ ಕಾರುಗಳಿಗಿಂತ ಸಾಂಪ್ರದಾಯಿಕ ಇಂಧನ ಇಂಜಿನ್‌ನ ಶಬ್ದ ಮತ್ತು ವೈಬ್ರೇಷನ್ ಇಷ್ಟಪಡುತ್ತಾರೆ.
2. ಅತಿಯಾದ ಬೆಲೆ: 6,40,000 ಡಾಲರ್ ಬೆಲೆಯು ಸಾಮಾನ್ಯ ಇವಿ ಮಾರುಕಟ್ಟೆಯ ಲೆಕ್ಕಾಚಾರವನ್ನು ಮೀರಿದ್ದಾಗಿದೆ.
3. ಹೂಡಿಕೆದಾರರ ಭೀತಿ: ಇವಿ ಉತ್ಪಾದನೆಗಾಗಿ ಇಟಲಿಯಲ್ಲಿ ಹೊಸ ಇ-ಬಿಲ್ಡಿಂಗ್ ಕಾರ್ಖಾನೆಗೆ ಫೆರಾರಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿದೆ. ಆದರೆ ಮಾರುಕಟ್ಟೆಯಲ್ಲಿ ಬೇಡಿಕೆ ಬರದಿದ್ದರೆ ಈ ಹೂಡಿಕೆ ನಷ್ಟವಾಗಬಹುದು ಎಂಬುದು ಹೂಡಿಕೆದಾರರ ಆತಂಕ.

ಕಂಪನಿಯ ಮುಂದಿನ ಪ್ಲಾನ್ ಏನು?

ಫೆರಾರಿ ಮುಖ್ಯಸ್ಥ ಬೆನೆಡೆಟ್ಟೊ ವಿಗ್ನಾ ಅವರ ನೇತೃತ್ವದಲ್ಲಿ ಕಂಪನಿಯು 2030 ರ ವೇಳೆಗೆ ತನ್ನ ಒಟ್ಟು ಕಾರುಗಳ ಶ್ರೇಣಿಯಲ್ಲಿ ಶೇಕಡಾ 20 ರಷ್ಟು ಇವಿ ಕಾರುಗಳನ್ನು ಹೊಂದುವ ಗುರಿ ಇಟ್ಟುಕೊಂಡಿದೆ (ಹಿಂದಿನ ಗುರಿ ಶೇ. 40 ಇತ್ತು). ಆರಂಭಿಕ ಹಿನ್ನಡೆಯ ಹೊರತಾಗಿಯೂ, ಚೀನಾದಂತಹ ಪ್ರಮುಖ ಮಾರುಕಟ್ಟೆಗಳಲ್ಲಿ ಹಾಗೂ ತಂತ್ರಜ್ಞಾನ ಪ್ರಿಯ ಯುವ ಪೀಳಿಗೆಯಲ್ಲಿ ಈ ಐಷಾರಾಮಿ ಇವಿ ಹೊಸ ಕ್ರೇಜ್ ಸೃಷ್ಟಿಸಲಿದೆ ಎಂಬ ಭರವಸೆಯಲ್ಲಿ ಕಂಪನಿಯಿದೆ. ಅಕ್ಟೋಬರ್‌ನಿಂದ ಗ್ರಾಹಕರಿಗೆ ಇದರ ಡೆಲಿವರಿ ಆರಂಭವಾಗಲಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net