ವಿದ್ಯುತ್‌ಗೆ ಅರ್ಜಿ ಸಲ್ಲಿಸಲು ಆ.15ರವರೆಗೂ ಅವಕಾಶ

ವಿಧಾನಸೌಧ
ವಿಧಾನಸೌಧ
Published on
ಬೆಂಗಳೂರು: ವಸತಿ ಕಟ್ಟಡ ಮತ್ತು ಕೃಷಿ ಚಟುವಟಿಕೆಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರಕ್ಕೆ ವಿನಾಯಿತಿ ನೀಡಿ ಒಮ್ಮೆ ಹೊಸ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಆಗಸ್ಟ್ 15ರವರೆಗೂ ವಿಸ್ತರಣೆ ಮಾಡಿ ಸರ್ಕಾರ ಆದೇಶಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಮತ್ತು ಮಹಾನಗರ ಪಾಲಿಕೆ, ಪುರಸಭೆ ಸೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಿಸಿರುವ 2400 ಚದರಡಿ ವಿಸ್ತೀರ್ಣದ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣ ಪತ್ರ ವಿನಾಯಿತಿ ಒಮ್ಮೆ ವಿದ್ಯುತ್ ಸಂಪರ್ಕಕ್ಕೆ ಅವಕಾಶ ಕಲ್ಪಿಸಿತ್ತು.
ಜೂನ್ 22ರಂದು ಹೊರಡಿಸಿದ್ದ ಆದೇಶದಲ್ಲಿ 15 ದಿನಗಳ ಕಾಲಾವಕಾಶ ಮಾತ್ರ ನೀಡಲಾಗಿತ್ತು. ಆದರೆ, ಇದೀಗ ಆಗಸ್ಟ್ 15ರ ವರೆಗೂ ವಿಸ್ತರಣೆ ಮಾಡಿ ಹೊಸದಾಗಿ ಇಂಧನ ಇಲಾಖೆ ಆದೇಶ ಹೊರಡಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿನ ಕೋಳಿ ಸಾಕಾಣಿಕೆ ಕೇಂದ್ರಗಳು ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಿಗೂ ವಿದ್ಯುತ್ ಸಂಪರ್ಕಕ್ಕಾಗಿ ಸ್ವಾಧೀನಾನುಭವ ಪ್ರಮಾಣ ಪತ್ರ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಮೇ 31ರ ಒಳಗಾಗಿ ಶಾಶ್ವತ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಿರುವ ಅಥವಾ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯದೆ ಕಟ್ಟಡ ನಿರ್ಮಿಸಿರುವ ಹಾಗೂ ಯಾವುದೇ ವಿದ್ಯುತ್ ಸಂಪರ್ಕ ಪಡೆದೆ ಕಟ್ಟಡ ಪೂರ್ಣಗೊಂಡಿರುವ ಪ್ರಕರಣಗಳಿಗೆ ಮಾತ್ರ ಅನ್ವಯ ಈ ಆದೇಶ ಆಗಲಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆ, ರಾಜ್ಯದಲ್ಲಿನ ಮಹಾನಗರ ಪಾಲಿಕೆಗಳ ವ್ಯಾಪ್ತಿ, ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 2400 ಚದರ ಅಡಿಗಳವರೆಗೆ (+ ಶೇ.20 ಹೆಚ್ಚುವರಿ ವ್ಯತ್ಯಾಸದ ಮಿತಿಯೊಂದಿಗೆ) ಅಳತೆಯ ನಿವೇಶನಗಳಲ್ಲಿ ನಿರ್ಮಿಸಲಾಗಿರುವ ವಸತಿ ಕಟ್ಟಡಗಳಿಗೆ ಅನ್ವಯ ಆಗಲಿದೆ.
ಅಂದರೇ ಜಿ+3 ಅಂತಸ್ತಿನ ಅಥವಾ ಸ್ಟಿಲ್ಟ್ ಪಾರ್ಕಿಂಗ್+ 4ಮಹಡಿಗಳನ್ನು ಹೊಂದಿರುವ ವಸತಿ ಕಟ್ಟಡಗಳು ಮೇ 31ರ ಒಳಗೆ ಪೂರ್ಣಗೊಂಡು ವಿದ್ಯುತ್ ಸಂಪರ್ಕಕ್ಕಾಗಿ ಕಾಯುತ್ತಿರುವರಿಗೆ ಅನ್ವಯ ಆಗಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ರೈತರು ವಾಸಿಸುವ ಮನೆ, ತೋಟದ ಮನೆ, ಕೃಷಿ ಉಪಕರಣಗಳನ್ನು ಇಡುವ ಮನೆ, ದನದ ಕೊಟ್ಟಿಗೆ, ರೇಷ್ಮೆ ಗೂಡಿನ ಮನೆ ಇವುಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ಪ್ರಮಾಣ ಪತ್ರ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ. ವಿದ್ಯುತ್ ಸರಬರಾಜು ಕಂಪನಿಗಳು ವಿದ್ಯುತ್ ಸಂಪರ್ಕ ನೀಡಲು ಅನುಸರಿಸಬೇಕಾದ ಸಾಮಾನ್ಯ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ ಎಂದು ಇಂಧನ ಇಲಾಖೆ ಮಾಹಿತಿ ನೀಡಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net