ಡಿಸಿಸಿ ಬ್ಯಾಂಕ್​ ಸಾರ್ವಜನಿಕ ಪ್ರಾಧಿಕಾರ

ಬಿ.ವೆಂಕಟ್​ಸಿಂಗ್
ಬಿ.ವೆಂಕಟ್​ಸಿಂಗ್
Published on

ಪ್ರಮುಖ ಮುಖ್ಯಾಂಶಗಳು

  • ಮಾಹಿತಿ ಆಯೋಗ ಕಲಬುರಗಿ ಪೀಠದ ಮಹತ್ವದ ತೀರ್ಪು
ಕಲಬುರಗಿ: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​ ಸಾರ್ವಜನಿಕ ಪ್ರಾಧಿಕಾರ ಎಂದು ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ಬಿ.ವೆಂಕಟ್​ಸಿಂಗ್​ ಮಹತ್ವದ ತೀರ್ಪು ನೀಡಿದ್ದಾರೆ.
ರಾಜಕುಮಾರ ಆಳಂದ ಎನ್ನುವವರು ಮಾಹಿತಿ ಹಕ್ಕು ಅಧಿನಿಯಮ 6(1) ರಡಿ ತಾವು ಕಲಬುರಗಿ, ಯಾದಗಿರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್​ ಆಳಂದ ಶಾಖೆಗೆ 2022ರ ಜ.25ರಂದು ಬರೆದ ಪತ್ರದ ಬಗ್ಗೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ನೀಡುವಂತೆ ಕೋರಿದ್ದರು. ಮೇಲ್ಮನವಿದಾರರು ಕೋರಿದ ಮಾಹಿತಿಗೆ ಸಂಬಂಧಿಸಿದಂತೆ ಕಲಬುರಗಿ-ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್​ನ ಆಳಂದ ಶಾಖೆ ವ್ಯವಸ್ಥಾಪಕರು ಹಾಗೂ ಪ್ರಥಮ ಮೇಲ್ಮನವಿ ಪ್ರಾಧಿಕಾರವಾದ ಕಲಬುರಗಿ-ಯಾದಗಿರ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್​ ಪ್ರಧಾನ ಕಚೇರಿ ಸಾರ್ವಜನಿಕ ಮಾಹಿತಿ ಅಧಿಕಾರಿ ಪತ್ರ ಬರೆದು, ತಮ್ಮ ಬ್ಯಾಂಕ್​ ಸರ್ಕಾರದಿಂದ ಯಾವುದೇ ರೀತಿಯಲ್ಲಿ ಗಣನೀಯ ಪ್ರಮಾಣದ ಆರ್ಥಿಕ ನೆರವು ಪಡೆದಿಲ್ಲ. ಹೀಗಾಗಿ ತಮ್ಮ ಬ್ಯಾಂಕ್​ ಸಾರ್ವಜನಿಕ ಪ್ರಾಧಿಕಾರವಲ್ಲ. ತಾವು ಮಾಹಿತಿ ಹಕ್ಕು ಅಧಿನಿಯಮ 2005ರಡಿ ವ್ಯಾಪ್ತಿಗೆ ಬರುವುದಿಲ್ಲ ಎಂದು ಸಮರ್ಥಿಸಿಕೊಂಡಿದ್ದರು.
ಬ್ಯಾಂಕ್​ ಬರೆದ ಪತ್ರದಿಂದ ತೃಪ್ತರಾಗದ ಮೇಲ್ಮನವಿದಾರ ರಾಜಕುಮಾರ ಅವರು ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದಲ್ಲಿ ದ್ವೀತಿಯ ಮೇಲ್ಮನವಿ ಸಲ್ಲಿಸಿದ್ದರು. ದ್ವೀತಿಯ ಮೇಲ್ಮನವಿ ವಿಚಾರಣೆ ಕೈಗೆತ್ತಿಕೊಂಡ ಆಯೋಗ, 2026ರ ಜು.30ರಂದು ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್​ ಸಾರ್ವಜನಿಕ ಪ್ರಾಧಿಕಾರ ಎಂದು ಘೋಷಿಸಿ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ಆಯುಕ್ತ ಬಿ.ವೆಂಕಟ್​ಸಿಂಗ್​ ಮಹತ್ವದ ತೀರ್ಪು ನೀಡಿ ಆದೇಶಿಸಿದ್ದಾರೆ.
ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್​ ಸರ್ಕಾರದಿಂದ ಗಣನೀಯ ಪ್ರಮಾಣದಲ್ಲಿ ಆರ್ಥಿಕ ನೆರವು ಪಡೆಯುತ್ತಿಲ್ಲವಾದರೂ ಬ್ಯಾಂಕ್​ ವ್ಯವಹಾರ, ಸರ್ಕಾರದ ನಿಯಮ- ನಿರ್ದೇಶನಗಳ ಸೂಚನೆ ಮೇರೆಗೆ ನಡೆಸುತ್ತಿದೆ. ಆದ್ದರಿಂದ ಬ್ಯಾಂಕ್​ ಸಾರ್ವಜನಿಕ ಪ್ರಾಧಿಕಾರವಾಗಿದೆ. ಬ್ಯಾಂಕ್​ಗೆ ಸರ್ಕಾರದಿಂದ ಷೇರು ಬಂಡವಾಳ ಬಿಡುಗಡೆ ಆಗಿದೆ. ಬ್ಯಾಂಕ್​ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಸರ್ಕಾರದಿಂದ ನೇಮಿಸಲ್ಪಟ್ಟವರಾಗಿರುತ್ತಾರೆ. ಬ್ಯಾಂಕ್​ನಲ್ಲಿ ಅಕ್ರಮ ಜರುಗಿದರೆ ಸಹಕಾರ ಇಲಾಖೆ ವತಿಯಿಂದ ಅಧಿಕಾರಿಗಳ ತಂಡ ರಚಿಸಿ ತನಿಖೆಗೊಳಪಡಿಸಿ, ಅದರಲ್ಲಿ ಆರೋಪ ಸಾಬೀತಾದಲ್ಲಿ ಈ ಬ್ಯಾಂಕ್​ ಸೂಪರ್​ಸೀಡ್​ ಮಾಡುವ ಅಧಿಕಾರ ಸರ್ಕಾರ ಹೊಂದಿದೆ. ಬ್ಯಾಂಕ್​ಗೆ ಸರ್ಕಾರದಿಂದ ಅಧಿಕಾರೇತರ ಒಬ್ಬ ಸದಸ್ಯ ಹಾಗೂ ಅಧಿಕಾರಿಯೊಬ್ಬರನ್ನು ಆಡಳಿತ ಮಂಡಳಿಗೆ ಸದಸ್ಯರೆಂದು ನಾಮಕರಣ ಮಾಡುತ್ತಿದೆ. ನಬಾರ್ಡ್​ನಿಂದ ರೈತರಿಗೆ ವಿತರಿಸಲು ಪ್ರತಿವಾದಿ ಬ್ಯಾಂಕ್​ ಸಾಲ ಪಡೆದು ರೈತರಿಗೆ ವಿತರಿಸುವ ಸಾಲದ ಬಡ್ಡಿ ಸರ್ಕಾರವೇ ಪಾವತಿ ಮಾಡುತ್ತಿದೆ. ಸರ್ಕಾರ ರೈತರ ಸಾಲ ಮನ್ನಾ ಮಾಡಿದರೆ ಈ ಸಾಲ ಬ್ಯಾಂಕ್​ಗೆ ಸರ್ಕಾರವೇ ಪಾವತಿ ಮಾಡುತ್ತಿದೆ. ಹೀಗಾಗಿ ಎಲ್ಲ ಅಂಶಗಳು ಸೇರಿ ಕರ್ನಾಟಕ ಮಾಹಿತಿ ಆಯೋಗದಲ್ಲಿ ದಾಖಲಾದ ಪ್ರಕರಣದ ವಿಚಾರಣೆ ನಡೆಸಿ 2026ರ ಫೆ.9ರಂದು ಹೊರಬಿದ್ದ ತೀರ್ಪು ಆಧರಿಸಿ ಪ್ರತಿವಾದಿ ಕಲಬುರಗಿ&ಯಾದಗಿರ ಡಿಸಿಸಿ ಬ್ಯಾಂಕ್​ ಸಾರ್ವಜನಿಕ ಪ್ರಾಧಿಕಾರ ಎಂದು ೂಷಿಸಲಾಗಿದೆ.
ಜುಲೈನಲ್ಲಿ 767 ಪ್ರಕರಣ ವಿಚಾರಣೆಗೆ ಕೈಗೆತ್ತಿಕೊಂಡಿದ್ದು ಅದರಲ್ಲಿ ಒಟ್ಟು 526 ಪ್ರಕರಣ ವಿಲೇವಾರಿ ಮಾಡಲಾಗಿದೆ. ಜತೆಗೆ ಮಾಹಿತಿ ನೀಡಲು ರ್ನಿಲಕ್ಷ$್ಯವಹಿಸಿದ ಪ್ರತಿವಾದಿ ಅಧಿಕಾರಿಗಳಿಗೆ ಜುಲೈನಲ್ಲಿ 60 ಸಾವಿರ ರೂ.ದಂಡ ವಿಧಿಸಲಾಗಿದೆ. ಆರು ಜನ ಮೇಲ್ಮನವಿದಾರರಿಗೆ 27 ಸಾವಿರ ರೂ. ಪರಿಹಾರ ನೀಡಲು ಆದೇಶಿಸಲಾಗಿದೆ. ಪಂಚಾಯತ್​ರಾಜ್​ ಇಂಜನಿಯರಿಂಗ್​ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜಕುಮಾರ್​ಗೆ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ತಲಾ 10 ಸಾವಿರ ರೂ. ದಂಡ ವಿಧಿಸಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net