ಔರಾದ್ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಸಿಇಒ ಡಾ.ಗಿರೀಶ್ಬದೋಲೆ ಮಾತನಾಡಿದರು. ಸಹಾಯಕ ನಿರ್ದೇಶಕ ಜಯಪ್ರಕಾಶ, ತಾಪಂ ಇಒ ಕಿರಣ ಪಾಟೀಲ್, ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಎಡಿಪಿಸಿ ದೀಪಕ ಕಡಿಮನಿ ಇದ್ದರು.
ಔರಾದ್: ತೆಲಂಗಾಣ ಹಾಗೂ ಮಹಾರಾಷ್ಟ್ರ ಗಡಿಯಲ್ಲಿನ ತಾಂಡಾಗಳ ಕೂಲಿಕಾರ್ಮಿಕರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಡೆಯಲು ವಿಬಿ-&ಜಿ ರಾಮ್ ಜಿ ಯೋಜನೆಯಡಿ ಹೆಚ್ಚು ಉದ್ಯೋಗ ಸೃಷ್ಟಿಸಿ ಕೂಲಿಕಾರ್ಮಿಕರಿಗೆ ಕೆಲಸ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್ ಬದೋಲೆ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗಡಿ ಭಾಗದ ತಾಂಡಾಗಳಲ್ಲಿ ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯ ಕೂಲಿಕಾರ್ಮಿಕರಿಗೆ ಕೆಲಸ ದೊರೆಯುವಂತೆ ಕಾಮಗಾರಿಗಳನ್ನು ಕೈಗೊಳ್ಳಬೇಕು. ಗ್ರಾಮದಲ್ಲಿಯೇ ನಿರಂತರ ಉದ್ಯೋಗ ಲಭ್ಯವಾದರೆ ಕಾರ್ಮಿಕರ ವಲಸೆಯನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯವಾಗುತ್ತದೆ ಎಂದರು.
ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಸಮುದಾಯ ಕಾಮಗಾರಿಗಳನ್ನು ಗುರುತಿಸಿ ಅನುಷ್ಠಾಗೊಳಿಸುವ ಮೂಲಕ ಹೆಚ್ಚು ಮಾನವ ದಿನಗಳನ್ನು ಸೃಜಿಸಬೇಕು. ಕಾಮಗಾರಿಗಳ ಬೇಡಿಕೆ ಇರುವ ಕಡೆ ತಕ್ಷಣ ಕೆಲಸ ಆರಂಭಿಸಿ, ಕೂಲಿಕಾರ್ಮಿಕರಿಗೆ ನಿರಂತರ ಉದ್ಯೋಗ ಕಲ್ಪಿಸಬೇಕು. ಅರ್ಹ ಫಲಾನುಭವಿಗಳ ಜಾಬ್ ಕಾರ್ಡ್ಗಳನ್ನು ಮಾಡಿಸಬೇಕು. ಅರ್ಹ ಕೂಲಿಕಾರ್ಮಿಕರಿಂದ ಉದ್ಯೋಗದ ಬೇಡಿಕೆ ಪಡೆದು, ಅವರಿಗೆ ಸಮಯಕ್ಕೆ ಸರಿಯಾಗಿ ಕೆಲಸ ಒದಗಿಸುವ ಮೂಲಕ ಯೋಜನೆಯ ಪ್ರಯೋಜನವನ್ನು ಸಮರ್ಪಕವಾಗಿ ತಲುಪಿಸಬೇಕು ಎಂದು ಹೇಳಿದರು.
ಜಿಪಂ ಸಹಾಯಕ ನಿರ್ದೇಶಕ(ಆಡಳಿತ) ಜಯಪ್ರಕಾಶ, ತಾಪಂ ಇಒ ಕಿರಣ ಪಾಟೀಲ್, ಸಹಾಯಕ ನಿರ್ದೇಶಕ(ಗ್ರಾ.ಉ)ಶಿವಕುಮಾರ ಘಾಟೆ, ಎಡಿಪಿಸಿ ದೀಪಕ ಕಡಿಮನಿ, ತಾಂತ್ರಿಕ ಸಂಯೋಜಕ ಆನಂದ ಕಾಳಗಾಪುರೆ ಇತರ ಅಧಿಕಾರಿಗಳು ಇದ್ದರು.