ಬೀದರ್: ಸಾರ್ವಜನಿಕರಿಗೆ ಶಾಶ್ವತ ವಾಸಸ್ಥಳ ದೃಢೀಕರಣ ಪ್ರಮಾಣಪತ್ರವನ್ನು ವಿತರಿಸುವ ಉದ್ದೇಶದಿಂದ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಸಹಾಯ ಮತ್ತು ಸೌಲಭ್ಯ ಕೌಂಟರ್ ಪ್ರಾರಂಭಿಸಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಣಾಧಿಕಾರಿ ಡಾ.ಗಿರೀಶ್ ಬದೋಲೆ ತಿಳಿಸಿದ್ದಾರೆ.
ಜಿಲ್ಲೆಯ 181 ಗ್ರಾಮ ಪಂಚಾಯತಿಗಳಲ್ಲಿ ಈ ಸೇವೆ ಸಿಗಲಿದೆ. ಔರಾದ್ ತಾಲೂಕಿನ 21, ಬಸವಕಲ್ಯಾಣ 30, ಭಾಲ್ಕಿ 40, ಬೀದರ್ 32, ಹುಮನಾಬಾದ್ 19, ಹುಲಸೂರ 7, ಚಿಟಗುಪ್ಪ 14, ಕಮಲನಗರ ತಾಲೂಕಿನ 18 ಗ್ರಾಪಂಗಳಲ್ಲಿ ಕೌಂಟರ್ ಆರಂಭಿಸಲಾಗಿದೆ.
ಈವರೆಗೆ ಜಿಲ್ಲಾದ್ಯಂತ ವಿವಿಧ ಗ್ರಾಮ ಪಂಚಾಯಿತಿಗಳಲ್ಲಿ 201 ಅರ್ಜಿ ಸ್ವೀಕೃತವಾಗಿವೆ. ಈ ಸಹಾಯ ಮತ್ತು ಸೌಲಭ್ಯ ಕೌಂಟರ್ಗಳನ್ನು ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ಗಳು ನಿರ್ವಹಿಸುತ್ತಿದ್ದು, ಪಿಡಿಒಗಳು ಉಸ್ತುವಾರಿ ಮಾಡುತ್ತಿದ್ದಾರೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಹಾಯ ಮತ್ತು ಸೌಲಭ್ಯ ಕೌಂಟರ್ಗಳ ಪಂಚಮಿತ್ರ ಸಹಾಯವಾಣಿ ಸಂಖ್ಯೆ 8277506000ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.