2.80 ಲಕ್ಷ ರೂ.ಮೌಲ್ಯದ ಹತ್ತಿ ಬೀಜ ವಶ

ಶಹಾಪುರದ ಮೈಲಾರಲಿಂಗೇಶ್ವರ ಅಗ್ರೋ ಏಜೆನ್ಸಿಯ ಗೋದಾಮುಗೆ ಮಂಗಳವಾರ ಭೇಟಿ ನೀಡಿದ ಕೃಷಿ ಮತ್ತು ಪೊಲೀಸ್​ ಅಧಿಕಾರಿಗಳು ಪರಿಶೀಲಿಸಿದರು.
ಶಹಾಪುರದ ಮೈಲಾರಲಿಂಗೇಶ್ವರ ಅಗ್ರೋ ಏಜೆನ್ಸಿಯ ಗೋದಾಮುಗೆ ಮಂಗಳವಾರ ಭೇಟಿ ನೀಡಿದ ಕೃಷಿ ಮತ್ತು ಪೊಲೀಸ್​ ಅಧಿಕಾರಿಗಳು ಪರಿಶೀಲಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ರಸಗೊಬ್ಬರ ಮಾರಾಟ ಮಳೆಗೆಗಳ ಮೇಲೆ ದಿಢೀರ್​ ದಾಳಿ
  • ಎರಡು ಅಂಗಡಿಗಳ ಪರವಾನಗಿ ಅಮಾನತು
ಯಾದಗಿರಿ: ಗುರುಮಠಕಲ್​ನ ಮಲ್ಲಾಪುರದಲ್ಲಿ ಮತ್ತು ಶಹಾಪುರ ನಗರದಲ್ಲಿ ಅನಧಿಕೃತವಾಗಿ ಹತ್ತಿ ಬೀಜ ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ ಕೃಷಿ ಇಲಾಖೆ ತಂಡ ದಿಢೀರ್​ ದಾಳಿ ಮಾಡಿ 2.80 ಲಕ್ಷ ರೂ. ಮೌಲ್ಯದ ಹತ್ತಿ ಬೀಜ ವಶಪಡಿಸಿಕೊಂಡು ಮಾಲೀಕರ ವಿರುದ್ಧ ದೂರು ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ ಬೀಜ ಮತ್ತು ರಸಗೊಬ್ಬರ ಕಾಳಸಂತೆಯಲ್ಲಿ ಮಾರಾಟ, ಕೃತಕ ಅಭಾವ ಸೃಷಿ ಮಾಡಿದ್ದರ ಬಗ್ಗೆ ರೈತರು, ರೈತ ಸಂಟನೆಗಳು ಬೀದಿಗಿಳಿದು ಹೋರಾಟ ಮಾಡುತ್ತಿರುವುದನ್ನು ಎಚ್ಚರಗೊಂಡ ಕೃಷಿ ಇಲಾಖೆ ಜಿಲ್ಲೆಯಿಂದ ವಿವಿಧೆಡೆ ಮಂಗಳವಾರ ದಾಳಿ ನಡೆಸಿ ಮಾರಾಟಗಾರರಿಗೆ ಬಿಸಿ ಮುಟ್ಟಿಸಿದ್ದಾರೆ.
ಗುರುಮಠಕಲ್​ ತಾಲೂಕಿನ ಮಲ್ಲಾಪುರದಲ್ಲಿ ಶ್ರೀನಿವಾಸ ನರಸಪ್ಪ ಬಂಟು ಎಂಬುವವರು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ 1.20 ಲಕ್ಷ ರೂ.ಮೌಲ್ಯದ 53.72ಕೆಜಿ ಬಿ.ಟಿ.ಹತ್ತಿ ಬೀಜವನ್ನು ಜಪ್ತಿ ಮಾಡಿದ ಕೃಷಿ ಮತ್ತು ಪೊಲೀಸ್​ ಅಧಿಕಾರಿಗಳು ಇದಕ್ಕೆ ಸಂಬಂಧಿಸಿದಂತೆ ಶ್ರೀನಿವಾಸ ಬಂಟು ಎಂಬುವವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಅದೇ ರೀತಿ ಶಹಾಪುರ ನಗರದ ಬಸ್​ ನಿಲ್ದಾಣದ ಬಳಿ ಕಾರ್​ನಲ್ಲಿ ಅನಧಿಕೃತವಾಗಿ ವ್ಯವಹಾರ ನಡೆಸಿದ್ದ ಗುರುಲಿಂಗಪ್ಪ ನೂಲಿ ಎಂಬುವವನ್ನು ವಶಕ್ಕೆ ಪಡೆದ ಕೃಷಿ ಮತ್ತು ಪೊಲೀಸ್​ ಅಧಿಕಾರಿಗಳು, ಅಲ್ಲಿದ್ದ 1.67ಲಕ್ಷ ರೂ.ಮೌಲ್ಯದ 8.37ಕೆಜಿ ಹತ್ತಿ ಬೀಜಗಳನ್ನು ಜಪ್ತಿ ಮಾಡಿದ್ದಾರೆ. ಈ ಕುರಿತು ಶಹಾಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಹಾಪುರ ನಗರದಲ್ಲಿ ನಿಯಮ ಉಲ್ಲಂಸಿ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಶ್ರೀ ಮೈಲಾರಲಿಂಗೇಶ್ವರ ಅಗ್ರೋ ಏಜೆನ್ಸಿ ಮತ್ತು ಶ್ರೀ ಸಾಯಿ ಫರ್ಟಿಲೈರ್ಜಸ್​ ಅಂಗಡಿಗಳ ಮೇಲೆ ದಾಳಿ ಇಟ್ಟ ಅಧಿಕಾರಿಗಳ ತಂಡ ಆ ಎರಡು ಅಂಗಡಿಗಳ ಮಾರಾಟದ ಪರವಾನಿಗೆ ಅಮಾನತಿನಲ್ಲಿರಿಸಿದ್ದಾರೆ. ಜಿಲ್ಲೆಯ ವಿವಿಧೆಡೆ ರಸಗೊಬ್ಬರ ಸಂಗ್ರಹಿಸಿರುವ ಗೋದಾಮುಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಅಲ್ಲಿನ ಸ್ಟಾಕ್​ ಪರಿಶೀಲಿಸಿದರು.
ಸಮರ್ಪಕವಾಗಿ ರಸಗೊಬ್ಬರ ವಿತರಣೆ ಮಾಡುವಲ್ಲಿ ತಾರತಮ್ಯ ಎಸಗಿರುವ 175 ಮಳಿಗೆಗಳಿಗೆ ಮಾರಾಟ ತಡೆ ಆದೇಶ ನೀಡಲಾಗಿದೆ. ಅಲ್ಲದೆ 98 ಮಳಿಗೆಗಳಿಗೆ ಕಾರಣ ಕೇಳಿ ನೋಟಿಸ್​ ಜಾರಿ ಮಾಡಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ರತೇಂದ್ರನಾಥ ಸೂಗೂರ ತಿಳಿಸಿದ್ದಾರೆ. ರೈತರು ಅಧಿಕೃತ ಮಾರಾಟಗಾರರಿಂದಲ್ಲೇ ಹತ್ತಿ ಬಿತ್ತನೆ ಬೀಜ ಖರೀದಿಸಿ ಕಡ್ಡಾಯವಾಗಿ ರಶೀದಿ ಪಡೆಯಬೇಕು ಮತ್ತು ಯಾವುದೇ ಗ್ರಾಮ, ನಗರಗಳಲ್ಲಿ ಅನಧಿಕೃತವಾಗಿ ಮತ್ತು ಅನುಮಾನಾಸ್ಪದವಾಗಿ ಮಾರಾಟ ಮಾಡುವುದು ಕಂಡು ಬಂದರೆ ತಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net