ಶಹಾಪುರ: ದೋರನಹಳ್ಳಿ ಗ್ರಾಮಕ್ಕೆ ಖಾನಾಪುರ ಜೆಸ್ಕಾಂ ವಿದ್ಯುತ್ ಕೇಂದ್ರದಿಂದ ಆಗುತ್ತಿರುವ ನಿರಂತರ ವಿದ್ಯುತ್ ವ್ಯತ್ಯಯ ಹಾಗೂ ತಾಂತ್ರಿಕ ಸಮಸ್ಯೆ ಹಿನ್ನೆಲೆಯಲ್ಲಿ ಶಿರವಾಳ ವಿದ್ಯುತ್ ಕೇಂದ್ರದಿಂದ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣ್ ಶೆಟ್ಟಿ ಬಣ) ತಾಲೂಕು ಟಕವು ಜೆಸ್ಕಾಂ ಅಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿತು.
ಗ್ರಾಮದಲ್ಲಿ ಪದೇಪದೆ ವಿದ್ಯುತ್ ಕಡಿತ ಉಂಟಾಗುತ್ತಿರುವುದರಿಂದ ರೈತರು, ವಿದ್ಯಾರ್ಥಿಗಳು, ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಕೃಷಿ ಪಂಪ್ಸೆಟ್ಗಳ ಕಾರ್ಯಾಚರಣೆಗೆ ಅಡಚಣೆ ಉಂಟಾಗುತ್ತಿದ್ದು, ರೈತರ ಕೃಷಿ ಚಟುವಟಿಕೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ದೋರನಹಳ್ಳಿ ಗ್ರಾಮ ಹೊಸ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಪೂರೈಕೆ ಅಗತ್ಯವಾಗಿದೆ. ಆದರೆ ಖಾನಾಪುರ ವಿದ್ಯುತ್ ಕೇಂದ್ರದಿಂದ ಪೂರೈಕೆಯಾಗುತ್ತಿರುವ ವಿದ್ಯುತ್ನಿಂದ ಪದೇಪದೆ ವ್ಯತ್ಯಯವಾಗುತ್ತಿರುವುದರಿಂದ ಗ್ರಾಮಸ್ಥರು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಕರವೇ ಮುಖಂಡರು ವಿವರಿಸಿದರು.
ಶಿರವಾಳ ಜೆಸ್ಕಾಂ ವಿದ್ಯುತ್ ಕೇಂದ್ರವು ದೋರನಹಳ್ಳಿ ಗ್ರಾಮಕ್ಕೆ ಸಮೀಪದಲ್ಲಿದ್ದು, ಅಲ್ಲಿಂದ ವಿದ್ಯುತ್ ಸಂಪರ್ಕ ಕಲ್ಪಿಸಿದಲ್ಲಿ ಉತ್ತಮ ಹಾಗೂ ನಿರಂತರ ವಿದ್ಯುತ್ ಸರಬರಾಜು ಸಾಧ್ಯವಾಗಲಿದೆ. ಈ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿ ಶ್ರೀ ಸೂಕ್ತ ಕ್ರಮ ಕೈಗೊಳ್ಳುವಂತೆ ಜೆಸ್ಕಾಂ ಅಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ರೇವಣಸಿದ್ದಯ್ಯ ಡೆಂಗಿಮಠ, ನಾಗು ಅವಂಟಿ, ಶ್ರೀದೇವಿ ಜಂಬಲದನ್ನಿ, ಗೌಡಪ್ಪ ಕೋರಿ, ಶರಣು ಭೀಗುಡಿ, ಮಾರುತಿ ಚಂಡು, ಮಲ್ಲು ಇಬ್ರಾಹಿಂಪುರ ಇತರರಿದ್ದರು.