ಕಾಂಗ್ರೆಸ್​ ಸರ್ಕಾರದ ಮೂರು ವರ್ಷದ ಸಾಧನೆ ಶೂನ್ಯ

ಮಾಜಿ ಶಾಸಕ ಸುಭಾಷ ಗುತ್ತೇದಾರ್​
ಮಾಜಿ ಶಾಸಕ ಸುಭಾಷ ಗುತ್ತೇದಾರ್​
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಸುಭಾಷ ಗುತ್ತೇದಾರ್​ ಟೀಕೆ
  • ಶಿರಪುರ ಮಾದರಿ ಹೆಸರಿನಲ್ಲಿ ಹಣ ಲೂಟಿ
ಆಳಂದ: ಕಾಂಗ್ರೆಸ್​ ಸರ್ಕಾರ ಸಾಧನಾ ಸಮಾವೇಶ ಯಾವ ಪುರುಷಾರ್ಥಕ್ಕೆ ಆಯೋಜಿಸಿದೆ ? ಮೂರು ವರ್ಷದಲ್ಲಿ ಸರ್ಕಾರ ಹೇಳಿಕೊಳ್ಳುವಂತ ಸಾಧನೆ ಮಾಡಿಲ್ಲ, ಶೂನ್ಯ ಅಭಿವೃದ್ಧಿಯಾಗಿದೆ ಎಂದು ಮಾಜಿ ಶಾಸಕ ಸುಭಾಷ ಗುತ್ತೇದಾರ್​ ದೂರಿದ್ದಾರೆ.
ಈ ಕುರಿತು ಗುರುವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಿಜೆಪಿ ಸರ್ಕಾರದ ಯೋಜನೆಗಳನ್ನು ತಮ್ಮ ಸರ್ಕಾರದ ಯೋಜನೆಗಳು ಎಂಬಂತೆ ಕಾಂಗ್ರೆಸ್​ ಸರ್ಕಾರ ಬಿಂಬಿಸಿಕೊಳ್ಳುತ್ತಿದೆ. ಪರಿಣಾಮಕಾರಿ ಪ್ರತಿಪಕ್ಷವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ನಾವು ಹೋರಾಟ ಮಾಡದಿದ್ದರೆ ವಾಲ್ಮೀಕಿ ಹಗರಣದಲ್ಲಿ ಸಚಿವರು ರಾಜೀನಾಮೆ ನೀಡುತ್ತಿರಲಿಲ್ಲ. ಆಳಂದ ತಾಲೂಕಿನಲ್ಲಿ ಅಂತರ್ಜಲಮಟ್ಟ ತೀವ್ರ ಕುಸಿದಿದೆ. ಕೆರೆ, ಬಾವಿಗಳು ಖಾಲಿಯಾಗಿವೆ. ಜನ-ಜಾನುವಾರುಗಳಿಗೆ ನೀರು ಸಿಗುತ್ತಿಲ್ಲ. ಶಾಸಕರ ಶಿರಪುರ ಮಾದರಿ ನೀರಾವರಿ ಏನಾಗಿದೆ ? ಎಂದು ಪ್ರಶ್ನಿಸಿದ್ದಾರೆ.
ಚುನಾವಣೆ ವೇಳೆ ವಾರಕ್ಕೆ ಎರಡು ಬಾರಿಯಾದರೂ ಆಳಂದ ಪಟ್ಟಣಕ್ಕೆ ನೀರು ಪೂರೈಸುವುದಾಗಿ ಶಾಸಕರು ಭರವಸೆ ನೀಡಿದ್ದರು. ಆದರೆ ಈವರೆಗೂ ಸಾಕಾರವಾಗಿಲ್ಲ. ಸಿಟಿ ಜನರು ಹನಿ ನೀರಿಗೂ ನಿತ್ಯ ಪರದಾಡುತ್ತಿದ್ದಾರೆ. ಶಿರಪುರ ಮಾದರಿ ಕಾಮಗಾರಿ ಮಾಡಿದ ಸ್ಥಳದಲ್ಲಿ ಪ್ರಸ್ತುತ ಒಂದು ಹನಿಯೂ ನೀರಿಲ್ಲ. ಆದರೆ ನಮ್ಮ ಅವಧಿಯಲ್ಲಿ ನಿರ್ಮಿಸಿದ ಕೆರೆಗಳಲ್ಲಿ ಈಗಲೂ ಸಮೃದ್ಧವಾಗಿ ನೀರಿನ ಸಂಗ್ರಹವಿದೆ. ಅದರಿಂದ ಜಾನುವಾರುಗಳಿಗೆ ಹಾಗೂ ಗೃಹಬಳಕೆಗೆ ನೀರು ಲಭ್ಯವಾಗುತ್ತಿದೆ. ಶಿರಪುರ ಮಾದರಿ ಹೆಸರಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆದಿದೆ ಎಂದು ದೂರಿದ್ದಾರೆ.
ಅಮರ್ಜಾ ಅಣೆಕಟ್ಟು ವ್ಯಾಪ್ತಿಯ ಪ್ರದೇಶದ ರೈತರ ಹೊಲಗಳಿಗೆ ಸಮರ್ಪಕ ನೀರು ಬಿಡದಿರುವುದರಿಂದ ಬೆಳೆಗಳು ಒಣಗುತ್ತಿವೆ. ಕಬ್ಬು, ಬಾಳೆ ಹಾಗೂ ತೋಟಗಾರಿಕೆ ಬೆಳೆಗಳು ಹಾಳಾಗುತ್ತಿವೆ. ಅಲ್ಲದೇ ಜಾನುವಾರುಗಳಿಗೂ ಕುಡಿವ ನೀರಿಲ್ಲ. ಜಿಲ್ಲಾಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಕಾಲುವೆಗಳಿಗೆ ನೀರು ಹರಿಸಲು ಸೂಕ್ತ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net