

ಬೆಂಗಳೂರು: ರಾಜ್ಯ ಸರ್ಕಾರದಲ್ಲಿ 319 ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳು ಸೇರಿದಂತೆ ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿ ಸುಗ್ಗಿ ಶುರುವಾಗಿದೆ. ಆದರೆ, ಅರ್ಜಿ ಸಲ್ಲಿಸುವಾಗ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಿಗದೆ ಹಿಂದುಳಿದ ವರ್ಗಗಳ (ಒಬಿಸಿ) ಅಭ್ಯರ್ಥಿಗಳಿಗೆ ಸಂಕಷ್ಟ ಸಿಲುಕಿದ್ದಾರೆ.
ಕುಟುಂಬದ ಆದಾಯವನ್ನು ಪರಿಗಣಿಸುವಾಗ ಅಭ್ಯರ್ಥಿಯಾಗಲೀ, ಅಭ್ಯರ್ಥಿಯ ಪತಿ/ಪತ್ನಿಯ ಆದಾಯವನ್ನು ಲೆಕ್ಕ ಹಾಕದೇ ಕೇವಲ ಅಭ್ಯರ್ಥಿಯ ತಂದೆ-ತಾಯಿಯ ಅದಾಯವನ್ನು ಮಾತ್ರ ಲೆಕ್ಕ ಹಾಕಬೇಕೆಂದು 2013ರಲ್ಲಿ ಸುಪ್ರೀಂಕೋರ್ಟ್ ಸುರಿಂದರ್ ಸಿಂಗ್ ವಿರುದ್ಧ ಸ್ಟೇಟ್ ಎಲೆಕ್ಟಿಸಿಟಿ ಬೋರ್ಡ್ ಆ್ ಪಂಜಾಬ್ ಪ್ರಕರಣದಲ್ಲಿ ತೀರ್ಪನ್ನು ನೀಡಿದೆ. ಹೈಕೋರ್ಟ್ ಸಹ ಇದೇ ತೀರ್ಪನ್ನು ಉಲ್ಲೇಖಿಸಿ ಯೋಗೇಶ್ವರಿ ವಿರುದ್ಧ ಕರ್ನಾಟಕ ರಾಜ್ಯ ಹಾಗೂ ಇತರರು ಪ್ರಕರಣದಲ್ಲಿ ತೀರ್ಪನ್ನು ನೀಡಿದೆ.
ಸುಪ್ರೀಂಕೋರ್ಟ್, ಹೈಕೋರ್ಟ್ ತೀರ್ಪುಗಳು ಕಾನೂನುಗಳಾಗಿದ್ದು ಅವುಗಳ ಅನುಸರಣೆ ಕಡ್ಡಾಯವಾಗಿರುತ್ತದೆ. ತೀರ್ಪಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಅಧಿಕೃತ ಸುತ್ತೋಲೆ ಅಥವಾ ಆದೇಶ ಹೊರಡಿಸದ ಕಾರಣ ಸರ್ಕಾರಿ ಸೇವೆಯಲ್ಲಿರುವ ಅಭ್ಯರ್ಥಿಗಳಿಗೆ ಅವರ ವೈಯಕ್ತಿಕ ವೇತನದ ಆದಾಯ ಹಾಗೂ ಅವರ ತಂದೆ-ತಾಯಿಯರ ಆದಾಯವನ್ನು ಲೆಕ್ಕ ಹಾಕಿ ಆದಾಯದ ಮಿತಿ 8 ಲಕ್ಷ ರೂ. ಮೀರುವುದರಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ನೀಡಲು ಸಾಧ್ಯವಿಲ್ಲ ಎಂಬ ಕಾರಣ ನೀಡಿ ಅರ್ಜಿಯನ್ನು ತಿರಸ್ಕರಿಸುತ್ತಿದ್ದಾರೆ.