ಬಸವಾದಿ ಶಿವಶರಣರ ಹಿಂದೂ ಸಮಾವೇಶ ಕುರಿತ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ ಬಸವಕಲ್ಯಾಣದಲ್ಲಿ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರ ನೇತೃತ್ವದಲ್ಲಿ ಬುಧವಾರ ಸಂಜೆ ಸಮಾಲೋಚನೆ ನಡೆಯಿತು. ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ, ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಪ್ರಭುದೇವರು ಸ್ವಾಮೀಜಿ, ಬಸವರಾಜ ಧನ್ನೂರ ಇತರರಿದ್ದರು.
ಹೈಕೋರ್ಟ್ ತೀರ್ಪು ಸ್ವಾಗತಿಸಿದ ಡಾ.ಬಸವಲಿಂಗ ಪಟ್ಟದ್ದೇವರು
ಸಮಾಲೋಚನೆ ಸಭೆ
ಬಸವಕಲ್ಯಾಣ: ನಗರದಲ್ಲಿ ಜೂ.28ರಂದು ಆಯೋಜಿಸಿರುವ ಬಸವಾದಿ ಶಿವಶರಣರ ಬೃಹತ್ ಹಿಂದೂ ಸಮಾವೇಶದಲ್ಲಿ ಕನ್ಹೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಪಾಲ್ಗೊಳ್ಳಲು ಕಲಬುರಗಿ ಹೈಕೋರ್ಟ್ ಪೀಠ ಷರತ್ತುಬದ್ಧ ತೀರ್ಪು ನೀಡಿರುವುದು ಸ್ವಾಗತಾರ್ಹ ಎಂದು ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
ನಗರದ ಅನುಭವ ಮಂಟಪ ಪರಿಸರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ಜಿಲ್ಲಾ ಲಿಂಗಾಯತ ಮಠಾಧೀಶರ ಒಕ್ಕೂಟದ ಸಹಯೋಗದಡಿ ಬುಧವಾರ ಸಂಜೆ ಕರೆದಿದ್ದ ಸಮಾಲೋಚನಾ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನ್ಹೇರಿ ಶ್ರೀಗಳು ಮೊದಲಿಂದಲೂ ಬಸವತತ್ವ ಪ್ರಚಾರಕರು ಮತ್ತು ಬಸವ ಪ್ರಸಾರಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಬಂದಿದ್ದರಿಂದ ವಿಜಯಪುರದಿಂದ ಬಹಿಷ್ಕಾರಿಸಲಾಗಿತ್ತು. ಧಾರವಾಡ ಹೈಕೋರ್ಟ್ ಸಹ ಛೀಮಾರಿ ಹಾಕಿದೆ. ಸುಪ್ರೀಂಕೋರ್ಟ್ ಸಹ ಧ್ಯಾನ ಮಾಡಲು ನಿರ್ದೇಶನ ನೀಡಿತ್ತು. ಇದಕ್ಕಿಂತ ಹೆಚ್ಚೇನು ಬೇಕು ಎಂದು ಪ್ರಶ್ನಿಸಿದರು.
ಇಷ್ಟೆಲ್ಲ ಗೊಂದಲದ ಮಧ್ಯೆಯೂ ಕನ್ಹೇರಿ ಶ್ರೀಗಳು ಕಲ್ಯಾಣಕ್ಕೆ ಆಗಮಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಬಸವಕಲ್ಯಾಣಕ್ಕೆ ಬರಬಾರದು. ಇಲ್ಲಿ ಬಸವಭಕ್ತರ ಬಗ್ಗೆ ಮಾತನಾಡಬಾರದು ಎಂಬುದು ನಮ್ಮ ಉದ್ದೇಶವಿತ್ತು. ಈಗ ಸಮಾವೇಶದಲ್ಲಿ ಭಾಷಣ ಮಾಡಕೂಡದು ಎಂಬ ಷರತ್ತುಬದ್ಧ ಕೋರ್ಟ್ ತೀರ್ಪು ನೀಡಿರುವುದನ್ನು ಸ್ವಾಗತಿಸುವುದಾಗಿ ತಿಳಿಸಿದರು.
ಜಾಗತಿಕ ಲಿಂಗಾಯತ ಮಹಾಸಭೆ ಜಿಲ್ಲಾಧ್ಯಕ್ಷ ಬಸವರಾಜ ಧನ್ನೂರ ಮಾತನಾಡಿ, ಕನ್ಹೇರಿ ಶ್ರೀಗಳು ಬಸವ ತತ್ವ ಪ್ರಚಾರಕ ಸ್ವಾಮೀಜಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಬಸವ ಭಕ್ತರಿಗೆ ತಾಲಿಬಾನಿಗಳು ಎಂದು ಅವಮಾನಿಸಿದ್ದರು. ಹೀಗಾಗಿ ಬಸವಕಲ್ಯಾಣ ಪ್ರವೇಶಕ್ಕೆ ನಿಷೇಧ ಹೇರಬೇಕು ಎಂಬುದೇ ನಮ್ಮ ಹೊರಾಟವಾಗಿತ್ತು. ನ್ಯಾಯಾಲಯ ಬಸವಕಲ್ಯಾಣಕ್ಕೆ ಬರಲು ಅನುಮತಿ ನೀಡಿದ್ದರೂ ಸಮಾವೇಶದಲ್ಲಿ ಮಾತನಾಡಲು ರ್ನಿಬಂಧ ಹೇರಿರುವುದು ಸಂತಸದ ವಿಷಯ ಎಂದರು.
ಹುಲಸೂರಿನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ, ಶ್ರೀ ಜಗದ್ಗುರು ಸಿದ್ಧರಾಮೇಶ್ವರ ಸ್ವಾಮೀಜಿ, ಶ್ರೀ ಗುರುಬಸವ ಪಟ್ಟದ್ದೇವರು, ಶ್ರೀ ಬಸವಪ್ರಭು ಸ್ವಾಮೀಜಿ, ಶ್ರೀ ಪ್ರಭುದೇವರು ಸ್ವಾಮೀಜಿ, ಪ್ರಮುಖರಾದ ಬಸವರಾಜ ಶಿವಪುರ, ರವಿ ಕೋಳಕೂರ, ಆಕಾಶ ಖಂಡಾಳೆ ಇತರರಿದ್ದರು.