ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ಸೈನ್ಸ್ ಶಿಕ್ಷಕರು: ಟಿಇಟಿ, ಬಿ.ಇಡಿ ಕಡ್ಡಾಯವಲ್ಲ

ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ಸೈನ್ಸ್ ಶಿಕ್ಷಕರು
ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್ ಸೈನ್ಸ್ ಶಿಕ್ಷಕರು
Published on

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಣ ಇಲಾಖೆಯಲ್ಲಿ ಭರ್ತಿಯಾಗದ ಹಾಗೂ ಬೋಧಕರಿಲ್ಲದ ಒಟ್ಟು 2,500 ಹುದ್ದೆಗಳನ್ನು ಗುರುತಿಸಿ ಅವುಗಳನ್ನು ‘ಕಂಪ್ಯೂಟರ್ ಸೈನ್ಸ್ ಟೀಚರ್’ ವೃಂದವಾಗಿ ರೂಪಿಸಿದೆ.
  • ವಿದ್ಯಾರ್ಹತೆ: ಬಿಎಸ್‌ಸಿ ಇನ್ ಕಂಪ್ಯೂಟರ್ ಸೈನ್ಸ್, ಬಿಸಿಎ, ಬಿಐಟಿ, ಬಿಇ-ಸಿಎಸ್, ಬಿಟೆಕ್-ಸಿಎಸ್ ಪದವಿ
  • ಬಿ.ಇಡಿ ಮತ್ತು ಟಿಇಟಿ ಅರ್ಹತೆ ಪಡೆಯಲು ಐದು ವರ್ಷಗಳ ಸಮಯವನ್ನು ನೀಡಿದೆ. ಹೀಗಾಗಿ ಈ ಅಭ್ಯರ್ಥಿಗಳ ನೇಮಕಾತಿಗೆ ಟಿಇಟಿ ಹಾಗೂ ಬಿ.ಇಡಿ ಕಡ್ಡಾಯವಲ್ಲ
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ನೀಡುವ ಗುರಿ ಹೊಂದಿರುವ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಒಂದೊಂದೇ ಪ್ರಕ್ರಿಯೆಗಳನ್ನು ಕೈಗೊಳ್ಳುತ್ತಿದೆ. ಕಂಪ್ಯೂಟರ್ ಸೈನ್ಸ್ ಬೋಧನೆಗಾಗಿ ಪ್ರತ್ಯೇಕ ಶಿಕ್ಷಕ ವೃಂದದ ರಚನೆಯನ್ನು ಘೋಷಿಸಿದ್ದ ಸರ್ಕಾರ ಇದೀಗ ಕರಡು ಅಧಿಸೂಚನೆಯನ್ನು ಹೊರಡಿಸಿದೆ.
ಶಿಕ್ಷಣ ಇಲಾಖೆಯಲ್ಲಿ ಭರ್ತಿಯಾಗದ ಹಾಗೂ ಬೋಧಕರಿಲ್ಲದ ಒಟ್ಟು 2,500 ಹುದ್ದೆಗಳನ್ನು ಗುರುತಿಸಿ ಅವುಗಳನ್ನು ‘ಕಂಪ್ಯೂಟರ್ ಸೈನ್ಸ್ ಟೀಚರ್’ ವೃಂದವಾಗಿ ರೂಪಿಸಿದೆ. ಈ ಹುದ್ದೆಗಳ ವೃಂದ ನೇಮಕಾತಿ ಸಂಬಂಧಿಸಿದಂತೆ ಪ್ರತ್ಯೇಕ ನಿಯಮಗಳನ್ನು ರೂಪಿಸಿದೆ. ಈ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಿದ್ದು, ಇದಕ್ಕಾಗಿ ಅಗತ್ಯ ವಿದ್ಯಾರ್ಹತೆಯ ಮಾನದಂಡಗಳನ್ನು ಸ್ಪಷ್ಟಪಡಿಸಿದೆ.

ಶಿಕ್ಷಕರ ಅರ್ಹತೆಗಳೇನು?

ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ನೇಮಕಾತಿ) (ತಿದ್ದುಪಡಿ) ನಿಯಮಗಳು- 2026 ಎಂದು ಈ ನಿಯಮಗಳನ್ನು ಕರೆಯಲಾಗಿದೆ. ಪದವೀಧರ ಪ್ರಾಥಮಿಕ ಶಿಕ್ಷಕರ (6ರಿಂದ 8ನೇ ತರಗತಿ) ತಿದ್ದುಪಡಿಯಾಗಿ ಈ ಹೊಸ ವೃಂದದ ಶಿಕ್ಷಕರನ್ನು ಸೇರ್ಪಡೆ ಮಾಡಲಾಗಿದೆ.
ಬಿಇ, ಬಿ.ಟೆಕ್ ಹಂತದಲ್ಲಿ ಕಂಪ್ಯೂಟರ್ ಸೈನ್ಸ್ ಅಧ್ಯಯನ ಮಾಡಿರುವ ಅಭ್ಯರ್ಥಿಗಳು ಈ ಶಿಕ್ಷಕ ಹುದ್ದೆಗಳಿಗೆ ಅರ್ಹರಾಗಿದ್ದಾರೆ. ಜತೆಗೆ, ಪ್ರೌಢ ಹಾಗೂ ಪಿಯು ಹಂತದಲ್ಲಿ ಕನ್ನಡ ಭಾಷೆಯನ್ನು ಅಧ್ಯಯನ ಮಾಡಿರಬೇಕು ಎಂದು ತಿಳಿಸಲಾಗಿದೆ. ಈ ನಿಯಮಗಳಿಗೆ ಆಕ್ಷೇಪಣೆಗಳಿದ್ದರೆ ಏಳು ದಿನಗಳ ಒಳಗಾಗಿ ಸಲ್ಲಿಸುವಂತೆ ಸೂಚಿಸಿದೆ.

ವಿದ್ಯಾರ್ಹತೆ ಏನು?

ಬಿಎಸ್‌ಸಿ ಇನ್ ಕಂಪ್ಯೂಟರ್ ಸೈನ್ಸ್, ಬಿಸಿಎ, ಬಿಐಟಿ, ಬಿಇ-ಸಿಎಸ್, ಬಿಟೆಕ್-ಸಿಎಸ್ ಪದವಿ ಹೊಂದಿರಬೇಕು. ಇದರ ಜತೆಗೆ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಅಧ್ಯಯನ ಮಾಡಿರತಕ್ಕದ್ದು ಎಂದು ವಿದ್ಯಾರ್ಹತೆ ನಿಗದಿ ಮಾಡಲಾಗಿದೆ.

ನೇಮಕಾತಿಯಲ್ಲಿ ವಿನಾಯಿತಿ:

ಶಾಲಾ ಶಿಕ್ಷಣ ಇಲಾಖೆಗೆ ಇದೇ ಮೊದಲ ಬಾರಿಗೆ ಕಂಪ್ಯೂಟರ್ ಸೈನ್ಸ್ ಶಿಕ್ಷಕರ ನೇಮಕಾತಿಯನ್ನು ಮಾಡಿಕೊಳ್ಳಲಾಗುತ್ತಿದೆ. ಹಲವು ವಿನಾಯ್ತಿಗಳನ್ನು ನೀಡಲಾಗಿದೆ. ಬಿ.ಇಡಿ ಮತ್ತು ಟಿಇಟಿ ಅರ್ಹತೆ ಪಡೆಯಲು ಐದು ವರ್ಷಗಳ ಸಮಯವನ್ನು ನೀಡಿದೆ. ಹೀಗಾಗಿ ಈ ಅಭ್ಯರ್ಥಿಗಳ ನೇಮಕಾತಿಗೆ ಟಿಇಟಿ ಹಾಗೂ ಬಿ.ಇಡಿ ಕಡ್ಡಾಯವಲ್ಲ ಎಂದು ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net