ಕಲಬುರಗಿ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿಣಿ ಸಭೆಯಲ್ಲಿ ಪಿಯು ಕಲಾ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದ ಸೃಷ್ಠಿ ಪಾಟೀಲರನ್ನು ಸತ್ಕರಿಸಲಾಯಿತು. ಡಾ.ಸಿದ್ರಾಮಪ್ಪ ಧಂಗಾಪೂರ್, ಕೇದಾರಲಿಂಗಯ್ಯ ಹಿರೇಮಠ್, ಬಸವರಾಜ ಪಾಟೀಲ್ ಇತರರಿದ್ದರು.
ಕಲಬುರಗಿ: ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಶುಕ್ರವಾರ ಜರುಗಿದ ಜಿಲ್ಲಾ ಕೃಷಿಕ ಸಮಾಜದ ಕಾರ್ಯಕಾರಿಣಿ ಸಭೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರ, ಮಳೆ ವಿವರ ಕುರಿತ ಸಮಗ್ರ ಚರ್ಚೆ ನಡೆಯಿತು.
ಕೃಷಿಕ ಸಮಾಜದ ಅಧ್ಯಕ್ಷ ಡಾ.ಸಿದ್ರಾಮಪ್ಪ ಪಾಟೀಲ್ ಧಂಗಾಪೂರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರೂ ಆದ ಸಮಾಜದ ರಾಜ್ಯ ಪ್ರತಿನಿಧಿ ಸಮದ್ ಪಟೇಲ್ ಅವರು ಮುಂಗಾರು ಹಂಗಾಮಿನ ಸಮರ್ಪಕ ನಿರ್ವಹಣೆಯ ಪೂರ್ವಸಿದ್ಧತೆ ಕುರಿತು ಮಾಹಿತಿ ಒದಗಿಸಿದರು.
ಜಿಲ್ಲೆಯಲ್ಲಿ ಬಿತ್ತನೆ ಬೀಜ, ರಸಗೊಬ್ಬರದ ಕೊರತೆಯಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ತಾಲೂಕಿನ ಎಲ್ಲ ಸಹಾಯಕ ಕೃಷಿ ನಿರ್ದೇಶಕರು ಮತ್ತು ಕೃಷಿ ಇಲಾಖೆಯ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಮುಂಗಾರು ಸಂದರ್ಭದಲ್ಲಿ ರೈತಾಪಿ ಜನರಿಗೆ ಬೀಜ, ರಸಗೊಬ್ಬರ ನಿಗದಿತ ಅವಧಿಯಲ್ಲಿ ಸಮರ್ಪಕ ವಿತರಣೆ ಮಾಡಬೇಕು. ಯಾವುದೇ ಹಂತದಲ್ಲೂ ರೈತರಿಗೆ ತೊಂದರೆ ನೀಡಬಾರದು ಎಂದು ಡಾ.ಸಿದ್ರಾಮಪ್ಪ ಧಂಗಾಪೂರ್ ಸೂಚಿಸಿದರು.
ಈ ಸಂದರ್ಭದಲ್ಲಿ ದ್ವೀತಿಯ ಪಿಯು ಕಲಾ ವಿಭಾಗದಲ್ಲಿ ಮೊದಲ ರ್ಯಾಂಕ್ ಪಡೆದ ವಿದ್ಯಾರ್ಥಿನಿ ಸೃಷ್ಠಿ ಮಲ್ಲಿನಾಥ ಪಾಟೀಲ್ ಅವರನ್ನು ಕೃಷಿಕ ಸಮಾಜದ ವತಿಯಿಂದ 10 ಸಾವಿರ ರೂ. ನಗದು ಬಹುಮಾನ ರೂಪದಲ್ಲಿ ನೀಡಿ ಸತ್ಕರಿಸಲಾಯಿತು.
ಕೇದಾರಲಿಂಗಯ್ಯ ಹಿರೇಮಠ್, ಬಸವರಾಜ ರುದ್ರಪ್ಪ ಪಾಟೀಲ್, ಕೃಷಿಕ ಸಮಾಜದ ಪ್ರತಿನಿಧಿಗಳು, ತಾಲೂಕು ಅಧ್ಯಕ್ಷರು, ಕೃಷಿ ಇಲಾಖೆ ಅಧಿಕಾರಿಗಳು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.