ಭಾಲ್ಕಿ ತಾಲೂಕಿನ ವಾಂಜರಖೇಡ ಗ್ರಾಮದ ಮತಗಟ್ಟೆಗೆ ಜಿಲ್ಲಾಧಿಕಾರಿ ಶಿಲ್ಪಾ ಶಮಾರ್ ಭೇಟಿ ನೀಡಿ ಎಸ್ಐಆರ್ ಪ್ರಕ್ರಿಯೆ ಕುರಿತು ಮಾಹಿತಿ ಪಡೆದರು. ತಹಸೀಲ್ದಾರ್ ಮಲ್ಲಿಕಾರ್ಜುನ ವಡ್ಡನಕೇರೆ ಇತರರಿದ್ದರು.
ಭಾಲ್ಕಿ ತಾಲೂಕಿನ ವಿವಿಧೆಡೆ ಜಿಲ್ಲಾಧಿಕಾರಿ ಶಿಲ್ಪಾ ಶಮಾರ್ ಭೇಟಿ
ಭಾಲ್ಕಿ: ನಗರ ಸೇರಿ ತಾಲೂಕಿನ ಗಡಿಭಾಗದ ವಿವಿಧ ಮತಗಟ್ಟೆಗಳಿಗೆ ಬುಧವಾರ ಜಿಲ್ಲಾಧಿಕಾರಿ ಶಿಲ್ಪಾ ಶಮಾರ್ ಭೇಟಿ ನೀಡಿ ಮತದಾರರ ಸಮಗ್ರ ಪಟ್ಟಿಯ ತೀವ್ರ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆ ಪರಿಶೀಲಿಸಿದರು. ಕೊಂಗಳಿ, ವಾಂಜರಖೇಡ ಗ್ರಾಮದ ಮತಗಟ್ಟೆಗಳಿಗೆ ಭೇಟಿ ನೀಡಿ ಮತಗಟ್ಟೆ ಅಧಿಕಾರಿಗಳಿಂದ ಎಸ್ಐಆರ್ ಪ್ರಗತಿಯ ಮಾಹಿತಿ ಪಡೆದರು.
ನಂತರ ನಗರದ ತಹಸಿಲ್ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕ್ಷೇತ್ರದಲ್ಲಿ ಮತಗಟ್ಟೆ ಅಧಿಕಾರಿಗಳು ಮತದಾರರ ಮನೆ ಮನೆಗಳಿಗೆ ಭೇಟಿ ನೀಡಿ ಗಣತಿ ನಮೂನೆಗಳನ್ನು ವಿತರಿಸಿ ಶೀಘ್ರದಲ್ಲಿಯೇ ಶೇ.100 ಪ್ರಗತಿ ಸಾಧಿಸಬೇಕು. ಪ್ರತಿಯೊಬ್ಬ ವ್ಯಕ್ತಿಗೂ ನಮೂನೆಗಳು ತಲುಪಬೇಕು. ಯಾವುದೇ ಅರ್ಹ ವ್ಯಕ್ತಿಯು ಮತಪಟ್ಟಿಯಿಂದ ಅಳಿಸಿ ಹೋಗದಂತೆ ಎಚ್ಚರ ವಹಿಸಬೇಕು. ಪಾರದರ್ಶಕತೆ ಮತ್ತು ವಿಶ್ವಾರ್ಹತೆ ಕಾಪಾಡುವ ಉದ್ದೇಶದಿಂದ ಪರಿಷ್ಕರಣೆ ಪ್ರಕ್ರಿಯೆಯ ಪ್ರತಿಯೊಂದು ಹಂತದ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಳ್ಳಬೇಕು ಎಂದರು.
ವಿಬಿಜಿ ರಾಮ್ಜಿ ಯೋಜನೆ ಅನುಷ್ಠಾನಗೊಂಡಿದ್ದು, ಗ್ರಾಮೀಣ ಬಡ ಕಾರ್ಮಿಕರು ನಗರಗಳಿಗೆ ವಲಸೆ ಹೋಗದಂತೆ ಯೋಜನೆಯಡಿ ಎನ್ಎಂಆರ್ ಜನರೇಟ್ ಮಾಡಿ ಕಾರ್ಮಿಕರಿಗೆ ಕೂಲಿ ಕೆಲಸ ನೀಡಿ ಎಂದು ಗ್ರಾಪಂ ಸಿಬ್ಬಂದಿಗೆ ಸೂಚಿಸಿದರು.
ಭಾಲ್ಕಿ ಕ್ಷೇತ್ರದಲ್ಲಿ ಎಸ್ಐಆರ್ ಪ್ರಕ್ರಿಯೆ ಉತ್ತಮ ಪ್ರಗತಿಯಲ್ಲಿದೆ. ಈಗಾಗಲೇ ಶೇ.80 ಪರಿಷ್ಕರಣೆ ಪೂರ್ಣಗೊಂಡಿದ್ದು, ಹಲವು ಮತಗಟ್ಟೆಗಳು ಶೇ.100 ಸಾಧನೆ ಮಾಡಿವೆ. ಉಳಿದ ಎಸ್ಐಆರ್ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ ಅರ್ಹ ಮತದಾರರು ಮತಪಟ್ಟಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು.