ಬೆಂಗಳೂರು: ಮರದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ವಿಷಯ ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿ ಕೇಂದ್ರ ಮುಖ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ನಾಯಕರು ದೂರು ಸಲ್ಲಿಸಿದ್ದಾರೆ.
ಪ್ರಕೋಷ್ಟಗಳ ರಾಜ್ಯ ಸಂಚಾಲಕ ಎಸ್. ದತ್ತಾತ್ರಿ, ಕಾನೂನು ಪ್ರಕೋಷ್ಟದ ರಾಜ್ಯ ಸಂಚಾಲಕ ವಸಂತಕುಮಾರ್, ನಿವೃತ್ತ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ನೇತೃತ್ವದ ನಿಯೋಗ ಕೆ.ಆರ್. ಸರ್ಕಲ್ ಬಳಿ ಇರುವ ಕೇಂದ್ರ ಚುನಾವಣಾ ಆಯೋಗದ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿ, ಕಾನೂನು ಕ್ರಮಕ್ಕೆ ಒತ್ತಾಯಿಸಿದೆ.
ಕಾಂಗ್ರೆಸ್ ಹೊರಡಿಸಿರುವ ಕರಪತ್ರದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಕುಮ್ಮಕ್ಕಿನಿಂದ ಚುನಾವಣಾ ಆಯೋಗ ಎಸ್‌ಐಆರ್ ಮಾಡುತ್ತಿದೆ. ಜನರ ವೋಟು ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂದು ಸುಳ್ಳು ಆರೋಪಗಳನ್ನು ಉಲ್ಲೇಖ ಮಾಡಲಾಗಿದೆ. ಅಲ್ಲದೆ, ಬಿಎಲ್‌ಒಗಳ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮತದಾರರ ಪಟ್ಟಿಗೆ ಅನ್ಯ ದೇಶದವರನ್ನು ಸೇರಿಸುವ ಪ್ರಯತ್ನ ಮಾಡಲಾಗುತ್ತಿದೆ.
ಹಾಗಾಗಿ ಕರಪತ್ರ ಪ್ರಕಟಿಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇದಲ್ಲದೆ, ಮನೆ ಮನೆಗೆ ಹೋಗಿ ಎನ್ಯುಮುಲೇಷನ್ ಅರ್ಜಿಗಳನ್ನು ವಿತರಿಸುವಂತೆ ಬಿಎಲ್‌ಒಗಳಿಗೆ ಸೂಚನೆ ನೀಡಬೇಕೆಂದು ದೂರಿನಲ್ಲಿ ಕೋರಲಾಗಿದೆ.