_1786381293738.webp?w=480&auto=format%2Ccompress&fit=max)
_1786381293738.webp?w=480&auto=format%2Ccompress&fit=max)
ಹುಣಸೂರು:
ಸಮುದಾಯದ ಸಂಘಟನೆ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವುದೇ ನಮ್ಮೆಲ್ಲರ ಗುರಿಯಾಗಬೇಕಿದೆ ಎಂದು ಶ್ರೀ ಕುಲಾಲ ಗುಂಡ ಬ್ರಹ್ಮಾರ್ಯ ಕುಂಬಾರರ ಸಂಘದ ಜಿಲ್ಲಾಧ್ಯಕ್ಷ ಎಚ್.ಎಸ್.ಪ್ರಕಾಶ್ ತಿಳಿಸಿದರು.
ನಗರದ ವಿಐಕೆ ಕಲ್ಯಾಣ ಮಂಪಟದಲ್ಲಿ ಸೋಮವಾರ ಸಮಾಜದ ವತಿಯಿಂದ ಆಯೋಜಿಸಿದ್ದ ಕುಂಬಾರರ ಜಾಗೃತಿ ಸಮಾವೇಶ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕುಂಬಾರರು ತಳಮಟ್ಟದಿಂದ ಸಂಘಟಿತರಾಗಬೇಕು. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಮೀಸಲಾತಿ ದೊರೆತು ಅವಕಾಶ ಸಿಕ್ಕಿದರೆ ನಾವೆಲ್ಲರೂ ಬೆಂಬಲಿಸಿ ನಮ್ಮ ಸಮಾಜದ ವ್ಯಕ್ತಿಯನ್ನು ಗೆಲ್ಲಿಸಿಕೊಳ್ಳಬೇಕಿದೆ. ಕುಂಬಾರರು ಮೊದಲು ಒಗ್ಗೂಡಬೇಕು. ನಮ್ಮನ್ನು ನಾವು ಕಾಪಾಡಿಕೊಂಡು ಶೋಷಣೆ, ಅನ್ಯಾಯದ ವಿರುದ್ಧ ಹೋರಾಡಲು ರಾಜಕೀಯ ಶಕ್ತಿ ಅಗತ್ಯವಾಗಿದೆ. ಕುಂಬಾರ ಸಮಾಜದ ಉದ್ಯಮಿಗಳು, ನೌಕರರು, ನಿವೃತ್ತ ನೌಕರರು ಮಾರ್ಗದರ್ಶನ ನೀಡುವ ಜತೆಗೆ ಸಂಪೂರ್ಣ ಸಹಾಯ ಸಹಕಾರ ನೀಡಬೇಕು. ನಾವು ಅಸೂಯೆ, ಸ್ವಾರ್ಥ ಬಿಟ್ಟು ಒಗ್ಗಟ್ಟಿನಿಂದ ಸಾಗೋಣ ಎಂದರು.
ಕುಂಬಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಕೆ.ಆರ್.ಸೋಮಶೇಖರ್ ಮಾತನಾಡಿ, ನಮ್ಮದು ಭಕ್ತಿ ಪ್ರಧಾನವಾದ ಶ್ರೇಷ್ಠ ಸಮಾಜ. ಸರ್ವಜ್ಞ, ಕುಂಬಾರ ಗುಂಡಯ್ಯ, ಕೇತಲ ದೇವಿಯಂತಹ ಶ್ರೇಷ್ಠರನ್ನು ಸಮಾಜಕ್ಕೆ ನೀಡಿದ್ದೇವೆ. ರಾಜ್ಯದಲ್ಲಿ 5 ಲಕ್ಷಕ್ಕೂ ಹೆಚ್ಚು ಕುಂಬಾರರಿದ್ದು ಅವರಿಗೆ ಸೂಕ್ತ ಅವಕಾಶ ದೊರೆತಿಲ್ಲ. ರಾಜಕೀಯ ಸ್ಥಾನಮಾನ ಪಡೆಯಲು ಹೋರಾಡಬೇಕಿದೆ. ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಉನ್ನತ ಸ್ಥಾನಗಳಿಗೆ ಆಯ್ಕೆ ಆಗುವಂತೆ ಮಾಡಬೇಕು. ಲಕ್ಮೀಸಾಗರ್ ನಂತರ ನಮ್ಮ ಸಮಾಜಕ್ಕೆ ಸೂಕ್ತ ರಾಜಕೀಯ ಸ್ಥಾನಮಾನ ದೊರೆತಿಲ್ಲ. ನಾವು ಸಂಘಟಿತರಾಗಿ ಹೋರಾಡಿದಾಗ ಮಾತ್ರ ನಮಗೆ ಯಶಸ್ಸು ಸಿಗುತ್ತದೆ ಎಂದರು.
ಸಮಾಜ ಸೇವಕ ಹಾಗೂ ಕುಂಬಾರ ಸಮಾಜದ ಮುಖಂಡ ಎಂ.ಎಸ್.ರಾಮಕೃಷ್ಣ ಮಾತನಾಡಿದರು. ಹುಣಸೂರು ತಾಲೂಕಿನ ಶ್ರೀ ಕುಲಾಲಗುಂಡ ಬ್ರಹ್ಮಾರ್ಯ ಕುಂಬಾರರ ಸಂಘದ ಅಧ್ಯಕ್ಷ ಸಣ್ಣಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜಿಲ್ಲಾ ಕುಂಬಾರರ ಸಂಘದ ಉಪಾಧ್ಯಕ್ಷ ವೆಂಕಟೇಶ್, ನಿರ್ದೇಶಕ ಕುಮಾರ್, ತಾಲೂಕು ಕುಂಬಾರರ ಸಂಘದ ಗೌರವಾಧ್ಯಕ್ಷ ಮಾದಶೆಟ್ಟಿ, ಪ್ರಧಾನ ಕಾರ್ಯದರ್ಶಿ ಟಿ.ಲೋಕೇಶ್, ನಿವೃತ್ತ ಅಧಿಕಾರಿ ಆರ್.ಮಹದೇವಶೆಟ್ಟಿ, ಮಾಜಿ ಅಧ್ಯಕ್ಷ ಟಿ.ಎಸ್.ಪುಟ್ಟಶೆಟ್ಟಿ, ಕೆ.ಚಂದ್ರಶೆಟ್ಟಿ, ಗೋಪಾಲಶೆಟ್ಟಿ, ಉಪಾಧ್ಯಕ್ಷ ಬಸವರಾಜಶೆಟ್ಟಿ, ಖಜಾಂಚಿ ಸತೀಶ, ನಿರ್ದೇಶಕರಾದ ಸಿ.ಪಿ.ಚಂದ್ರು, ಸೋಮಶೆಟ್ಟಿ, ರಾಜಶೆಟ್ಟಿ, ಶಿವಣ್ಣಶೆಟ್ಟಿ, ಲೋಕೇಶ್ ಕೆ.ಎಲ್, ಮಹದೇವಶೆಟ್ಟಿ, ಚೆಸ್ಕಾಂನ ನಾಗರಾಜು, ಪ್ರಾಂಶುಪಾಲ ರಾಮಶೆಟ್ಟಿ, ಲಕ್ಷ್ಮಣ, ಕೆ.ಸಿ.ಸೌಮ್ಯಾ ಇತರರು ಇದ್ದರು.