ಕಾಮೆಡ್-ಕೆ ಪರೀಕ್ಷೆ ಡ್ರೆಸ್‌ಕೋಡ್ ಪ್ರಕಟ: ನೀಟ್‌ಗಿಂತಲೂ ಕಠಿಣ ನಿಯಮ ಜಾರಿ

ಕಾಮೆಡ್-ಕೆ
ಕಾಮೆಡ್-ಕೆ
Published on

ಪ್ರಮುಖ ಮುಖ್ಯಾಂಶಗಳು

  • ತಲೆ, ಕಿವಿಯನ್ನು ಮುಚ್ಚುವ ಬಟ್ಟೆಗಳು ಹಾಗೂ ತುಂಬುದೋಳು ಡ್ರೆಸ್‌ಕೋಡ್ ಗೆ ಅವಕಾಶ ನೀಡುವುದಿಲ್ಲ.
  • ಅರ್ಧ ತೋಳಿನ ಉಡುಪುಗಳು, ಹೆಚ್ಚು ಜೇಬಿಲ್ಲದ ಸರಳ ಉಡುಪುಗಳನ್ನು ಧರಿಸುವಂತೆ ಸೂಚಿಸಲಾಗಿದೆ.
  • ಕಂಪ್ಯೂಟರ್ ಆಧಾರಿತ ಪರೀಕ್ಷೆ ಆಗಿರುವುದರಿಂದ ಅಭ್ಯರ್ಥಿಗಳು ಸೂಕ್ಷ್ಮ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಕೊಂಡೊಯ್ಯದಂತೆ ಎಚ್ಚರಿಕೆ
ಬೆಂಗಳೂರು: ಖಾಸಗಿ ಕಾಲೇಜುಗಳಲ್ಲಿರುವ ಇಂಜಿನಿಯರಿಂಗ್ ಸೀಟುಗಳ ಪ್ರವೇಶಕ್ಕಾಗಿ ದೇಶಾದ್ಯಂತ ಮೇ 9ರಂದು ಕಾಮೆಡ್-ಕೆ ಮತ್ತು ಯೂನಿಗೇಜ್ ಪ್ರವೇಶ ಪರೀಕ್ಷೆ ನಡೆಯುತ್ತಿದೆ.
ಶನಿವಾರ ಬೆಳಗ್ಗೆ 9 ಗಂಟೆಯಿಂದ 12 ಮತ್ತು ಮಧ್ಯಾಹ್ನ 2ರಿಂದ ಸಂಜೆ 5ರವರೆಗೆ ಎರಡು ಅವಧಿಯಲ್ಲಿ ಪರೀಕ್ಷೆ ನಡೆಯುತ್ತಿದೆ. ಕರ್ನಾಟಕದ 43,069 ಅಭ್ಯರ್ಥಿಗಳು ಸೇರಿ ದೇಶಾದ್ಯಂತ 1,30,620 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ದೇಶದ 171 ನಗರಗಳಲ್ಲಿ ಸೆಷನ್-1 ಮತ್ತು 303 ನಗರಗಳಲ್ಲಿ ಸೆಷನ್-2 ಪರೀಕ್ಷೆಗಳು ನಡೆಯಲಿವೆ.
ಅಭ್ಯರ್ಥಿಗಳು ತಾವು ಏನು ಮಾಡಬೇಕು ಮತ್ತು ಮಾಡಬಾರದೆಂದು ಪ್ರವೇಶ ಪತ್ರದಲ್ಲಿಯೇ ತಿಳಿಸಲಾಗಿದೆ. ಪರೀಕ್ಷೆಗೆ ಹಾಜರಾಗುವ ವೇಳೆ ಅಭ್ಯರ್ಥಿಗಳು ಪ್ರವೇಶ ಪತ್ರ, ಪಾಸ್‌ಪೊರ್ಟ್ ಅಳತೆಯ ಎರಡು ೆಟೋ, ಗುರುತಿನ ಚೀಟಿಯನ್ನು ಕೊಂಡೊಯ್ಯಬೇಕು. ಪಾರದರ್ಶಕ ನೀರಿನ ಬಾಟಲ್‌ಗಳನ್ನು ತರಲು ಅವಕಾಶ ನೀಡಲಾಗಿದೆ.
ಅಖಿಲ ಭಾರತ ಮಟ್ಟದ ಪರೀಕ್ಷೆಯಾಗಿರುವುದರಿಂದ ಆಯಾ ರಾಜ್ಯದಲ್ಲಿ ನಿಗದಿ ಮಾಡಿರುವ ಡ್ರೆಸ್‌ಕೋಡ್ ಅನುಸರಿಸಲಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ಮೊದಲು ಸೂಚನೆಗಳನ್ನು ಕಡ್ಡಾಯವಾಗಿ ಓದಿಕೊಂಡು ಪಾಲಿಸುವಂತೆ ಸೂಚಿಸಲಾಗಿದೆ.

ತುಂಬುದೋಳು ವಸಕ್ಕೆ ಅವಕಾಶವಿಲ್ಲ

ನೀಟ್ ಪರೀಕ್ಷೆಯಲ್ಲಿ ಕೆಲವು ಷರತ್ತುಗಳನ್ನು ವಿಧಿಸಿ ತುಂಬುದೋಳು ಉಡುಪುಗಳಿಗೆ ಅವಕಾಶ ಕಲ್ಪಿಸಿತ್ತು. ಆದರೆ, ಕಾಮೆಡ್-ಕೆ ಕಂಪ್ಯೂಟರ್ ಆಧಾರಿತ ಪರೀಕ್ಷೆ ಆಗಿರುವುದರಿಂದ ಅಭ್ಯರ್ಥಿಗಳು ಸೂಕ್ಷ್ಮ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಕೊಂಡೊಯ್ಯದಂತೆ ಎಚ್ಚರಿಕೆ ವಹಿಸಲಾಗಿದೆ. ಆದ್ದರಿಂದ ತಲೆ, ಕಿವಿಯನ್ನು ಮುಚ್ಚುವ ಬಟ್ಟೆಗಳು ಹಾಗೂ ತುಂಬುದೋಳು ಡ್ರೆಸ್‌ಕೋಡ್ ಗೆ ಅವಕಾಶ ನೀಡುವುದಿಲ್ಲ.
ಆದ್ದರಿಂದ ಬಾಲಕ ಮತ್ತು ಬಾಲಕಿಯರು ಅರ್ಧ ತೋಳಿನ ಉಡುಪುಗಳು, ಹೆಚ್ಚು ಜೇಬಿಲ್ಲದ ಸರಳ ಉಡುಪುಗಳನ್ನು ಧರಿಸುವಂತೆ ಸೂಚಿಸಲಾಗಿದೆ. ಶೂ ಧರಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಚಪ್ಪಲಿ ತೊಡುವಂತೆ ಕಾಮೆಡ್-ಕೆ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಎಸ್. ಕುಮಾರ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net