ರಾಜ್ಯದಲ್ಲಿ ವಾಡಿಕೆಗಿಂತ ಮುನ್ನ ಚಳಿ ಶುರು: ಈ ಬಾರಿ ಶೀತಗಾಳಿ ಆತಂಕ?

cold weather
cold weather
Published on

ಪ್ರಮುಖ ಮುಖ್ಯಾಂಶಗಳು

  • cold weather
  • karnataka
  • winter
ಬೆಂಗಳೂರು: ರಾಜ್ಯದಲ್ಲಿ(cold weather) ನಿಧಾನವಾಗಿ ಚಳಿ ಆವರಿಸಿಕೊಳ್ಳುತ್ತಿದೆ. ಮಧ್ಯರಾತ್ರಿ ಮತ್ತು ಮುಂಜಾನೆ ಅವಧಿಯಲ್ಲಿ ತೀವ್ರವಾಗಿ ಥಂಡಿ ಅನುಭವವಾಗುತ್ತಿದೆ.
‘ಮೊಂಥ’ ಚಂಡಮಾರುತ ಮುಗಿದ ಬಳಿಕ ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ದಾವಣಗೆರೆ, ಧಾರವಾಡ, ಬೀದರ್, ಮತ್ತು ಬೆಳಗಾವಿ ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಜಾನೆ ಅವಧಿಯಲ್ಲಿ ಮಂಜು ಆವರಿಸಿಕೊಳ್ಳುತ್ತಿದೆ. ರಾತ್ರಿ ವೇಳೆ ತಂಪಾದ ಗಾಳಿ ಬೀಸುತ್ತಿದೆ. ವಿಜಯಪುರ ಸೇರಿ ಕೆಲ ಜಿಲ್ಲೆಗಳಲ್ಲಿ ಈಗಾಗಲೇ ಗರಿಷ್ಠ ಮತ್ತು ಕನಿಷ್ಠ ತಾಪಮಾನವೂ ಕುಸಿತವಾಗಿದೆ.
ಕೆಲ ಜಿಲ್ಲೆಗಳಲ್ಲಿ ಹಗಲು ಮತ್ತು ರಾತ್ರಿ ವೇಳೆ ತಂಪಾದ ಗಾಳಿ ಬೀಸುತ್ತಿದೆ. ಮೋಡ ಮುಸುಕಿದ ವಾತಾವರಣ ಇದ್ದಾಗ ಹಗಲಿನಲ್ಲೂ ಚಳಿ ಅನುಭವಾಗುತ್ತದೆ. ಹಲವು ಜಿಲ್ಲೆಗಳಲ್ಲಿ ಮುಂಜಾನೆ ದಟ್ಟ ಮಂಜು ಆವರಿಸುತ್ತಿರುವುದರಿಂದ ವಾಹನ ಸವಾರರಿಗೆ ರಸ್ತೆ ಕಾಣಿಸದಂತಾಗಿದೆ. ಬೆಳಗ್ಗೆ, ಸಂಜೆ ವಾಯುವಿಹಾರಕ್ಕೆ ಹೋಗುವವರು ಸ್ವೆಟರ್, ಟೋಪಿ ಧರಿಸಿ ಓಡಾಡುತ್ತಿರುವ ದೃಶ್ಯ ಕಂಡುಬರುತ್ತಿದೆ.
ಕೋಲ್ಡ್‌ವೇವ್ ಆತಂಕ?
ಈ ಬಾರಿ ದಕ್ಷಿಣ ಕರ್ನಾಟಕದ ಜಿಲ್ಲೆಗಳಗಿಂತ ಉತ್ತರ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳಲ್ಲಿ ಶೀತಗಾಳಿ (ಕೋಲ್ಡ್‌ವೇವ್) ಬೀಸುವ ಸಾಧ್ಯತೆ ಇದೆ. ಕನಿಷ್ಠ ತಾಪಮಾನ ತೀವ್ರವಾಗಿ ಉಷ್ಣಾಂಶ ಕುಸಿತವಾದರೆ ಮೈ ನಡುಗುವ ಚಳಿ ಉಂಟಾಗುತ್ತದೆ. ಈ ಬಾರಿ ವಾಡಿಕೆ ಅಥವಾ ವಾಡಿಕೆಗಿಂತ ಅಧಿಕವಾಗಿ ಕೊರೆಯುವ ಚಳಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಈಗಾಗಲೇ ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ. ಸಾಮಾನ್ಯವಾಗಿ ನವೆಂಬರ್ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಚಳಿಗಾಲ ಶುರುವಾಗುತ್ತದೆ.ಆದರೆ, ರಾಜ್ಯದಲ್ಲಿ ವಾಡಿಕೆಗಿಂತ ಮುನ್ನವೇ ಚಳಿ ಶುರುವಾಗಿದೆ. ಡಿಸೆಂಬರ್, ಜನವರಿಯಲ್ಲಿ ಇದರ ತೀವ್ರತೆ ಇನ್ನಷ್ಟು ಹೆಚ್ಚಿರಲಿದೆ. ಅಲ್ಲದೆ, ಈ ಬಾರಿ ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿಯೂ ಥಂಡಿ ಜಾಸ್ತಿ ಇರಲಿದೆ.
ಶುಚಿ ಆಹಾರ ಸೇವಿಸಿ:
ಚಳಿ ಹೆಚ್ಚಳ ಹಿನ್ನೆಲೆಯಲ್ಲಿ ವಾಯುವಿಹಾರ, ವ್ಯಾಯಾಮಕ್ಕೆ ಹೋಗುವವರು ತುಂಬ ಎಚ್ಚರಿಕೆಯಿಂದ ಇರಬೇಕು. ಉಸಿರಾಟದ ಸಮಸ್ಯೆ ಎದುರಿಸುತ್ತಿರುವವರು, ಎಲಬು-ಕೀಲು ನೋವಿನಿಂದ ಬಳಲುತ್ತಿರುವವರು ಈ ಅವಧಿಯಲ್ಲಿ ಹೊರಹೋಗದಿರುವುದು ಉತ್ತಮ. ವಿಶೇಷವಾಗಿ ಮಕ್ಕಳ ಮತ್ತು ಹಿರಿಯ ನಾಗರಿಕರು ತಮ್ಮ ಆರೋಗ್ಯದ ಬಗ್ಗೆ ಗಮನಹರಿಸಬೇಕೆಂದು ಎನ್ನುತ್ತಾರೆ ವೈದ್ಯರು. ಚಳಿಗಾಲದಲ್ಲಿ ಶೀತ, ನೆಗಡಿ, ಕೆಮ್ಮು ಮತ್ತು ಜ್ವರ ಸೇರಿ ಇತರ ಕಾಯುಲೆಗಳು ಎದುರಾಗಲಿವೆ. ಕಾಲಿನ ಹಿಮ್ಮಡಿ, ತುಟಿ ಸೇರಿ ಕೈಕಾಲಿನ ಚರ್ಮ ಒಣಗಲಿದೆ. ಈ ಬಗ್ಗೆ ಜನರು ಅಗತ್ಯ ಮುನ್ನಚ್ಚರಿಕಾ ಕ್ರಮ ತೆಗೆದು ಕೈಗೊಳ್ಳಬೇಕು. ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಿಕೊಳ್ಳುವ ಜತೆಗೆ ಕುದಿಸಿ ಆರಿಸಿದ ನೀರು, ಬಿಸಿ ಹಾಗೂ ಶುಚಿಯಾದ ಆಹಾರ ಸೇವಿಸಬೇಕು. ಫ್ರೀಡ್ಜ್‌ನಲ್ಲಿ ಹೆಚ್ಚು ಹೊತ್ತು ಇಟ್ಟ ಆಹಾರವನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು. ದೂಳಿನಿಂದ ದೂರವಿದ್ದು, ಚೆನ್ನಾಗಿ ಒಣಗಿಸಿದ ಬಟ್ಟೆಯನ್ನು ಮೈ ತುಂಬಾ ಧರಿಸುವುದು ಸೂಕ್ತ.
ಮೋಡ ಕವಿದ ವಾತಾವರಣ:
ತಮಿಳುನಾಡು,ಆಂಧ್ರಪ್ರದೇಶ ಕರಾವಳಿ ತೀರದಲ್ಲಿ ಮೇಲ್ಮೈ ಸುಳಿಗಾಳಿ ಹಾಗೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ನ.9ರವರೆಗೆ ಮೋಡ ಕವಿದ ವಾತಾವರಣದೊಂದಿಗೆ ಸಾಧಾರಣ ಮಳೆಯಾಗಲಿದೆ. ಕರಾವಳಿ, ಮಲೆನಾಡು ಸೇರಿ ದಕ್ಷಿಣ ಕರ್ನಾಟಕದ ವ್ಯಾಪ್ತಿಯ ಎಲ್ಲ ಜಿಲ್ಲೆಗಳಲ್ಲಿ ನ.5ರಿಂದ ನ.9ರವರೆಗೆ ಹಗುರ ಮಳೆಯಾಗಲಿದೆ. ಉತ್ತರ ಕರ್ನಾಟಕ ವ್ಯಾಪ್ತಿಯ ಕೆಲ ಜಿಲ್ಲೆಗಳಲ್ಲಿ ಮಾತ್ರ ಸಾಧಾರಣ ವರ್ಷಧಾರೆ ಇರಲಿದೆ.
ರಾಜ್ಯದಲ್ಲಿ ಈ ಬಾರಿ ತುಸು ಚಳಿ ಚಳಿ ಜಾಸ್ತಿ ಇರಲಿದೆ. ಮುಂಜಾನೆ ಅವಧಿಯಲ್ಲಿ ಈಗಾಗಲೇ ಮಂಜು ಮುಸುಕುತ್ತಿದೆ. ಬಂಗಾಳಕೊಲ್ಲಿಯ ಈಶಾನ್ಯ ಭಾಗ, ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶ ಕರಾವಳಿ ಸಮೀಪದ ವಾಯುಭಾರ ಕುಸಿತವಾಗಿದೆ. ಇದು ಸೈಕ್ಲೋನ್ ಆಗಿ ರೂಪುಗೊಳ್ಳುವುದಿಲ್ಲ.
ಡಾ.ಶ್ರೀನಿವಾಸರೆಡ್ಡಿ, ಹಿರಿಯ ಹವಾಮಾನ ತಜ್ಞ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net