ಉಷ್ಣ ವಿದ್ಯುತ್ ಉತ್ಪಾದನೆ ಹೆಚ್ಚಳಕ್ಕೆ ಕಲ್ಲಿದ್ದಲು ಸಂಗ್ರಹ

ವಿಧಾನಸೌಧ
ವಿಧಾನಸೌಧ
Published on
ಬೆಂಗಳೂರು: ಮಳೆ ಕೊರತೆ ಹಿನ್ನೆಲೆ ಶಾಖೋತ್ಪನ್ನ ವಿದ್ಯುತ್ ಉತ್ಪಾದನೆ ಹೆಚ್ಚಿಸಲು ಅಗತ್ಯ ಕಲ್ಲಿದ್ದಲು ಸಂಗ್ರಹಿಸಲು ಕರ್ನಾಟಕ ವಿದ್ಯುತ್ ನಿಗಮ (ಕೆಪಿಸಿಎಲ್) ಕಾರ್ಯಪ್ರವೃತ್ತವಾಗಿದೆ. ಈ ಮೂಲಕ ರಾಜ್ಯಕ್ಕೆ ಅಗತ್ಯ ಇರುವ ವಿದ್ಯುತ್ ಪೂರೈಕೆ ಮಾಡಲು ಕೆಪಿಸಿಎಲ್ ಸಿದ್ಧತೆ ನಡೆಸಿದೆ.
ಕೆಪಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್ ನೇತೃತ್ವದಲ್ಲಿ ನಿಗಮ ಹಿರಿಯ ಅಧಿಕಾರಿಗಳು ಮಹಾರಾಷ್ಟ್ರದ ನಾಗಪುರದಲ್ಲಿರುವ ವೆಸ್ಟರ್ನ್ ಕೋಲ್ ಫೀಲ್ಡ್ ಲಿ.ನ (ಡಬ್ಲ್ಯುಸಿಎಲ್) ಬಾರಂಜ್ ಕ್ಯಾಪ್ಟಿವ್ ಕಲ್ಲಿದ್ದಲು ಗಣಿಗಳಿಗೆ ಭೇಟಿ ನೀಡಿದ್ದರು. ಅಲ್ಲಿ ಡಬ್ಲ್ಯುಸಿಎಲ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಹೇಮಂತ್ ಶರತ್ ಪಾಂಡೆ ಅವರನ್ನು ಭೇಟಿಯಾಗಿ, ಕೆಪಿಸಿಎಲ್ ವತಿಯಿಂದ ನಿರ್ವಹಿಸುತ್ತಿರುವ ಆರ್‌ಟಿಪಿಎಸ್‌ಗೆ ಹೆಚ್ಚುವರಿ ಕಲ್ಲಿದ್ದಲು ರೇಕ್‌ಗಳನ್ನು ಒದಗಿಸುವಂತೆ ಮನವಿ ಮಾಡಿದರು. ಇದಕ್ಕೆ ಸಮ್ಮತಿಸಿದ ಅಧಿಕಾರಿಗಳು, ಪ್ರಸ್ತುತ ಪ್ರತಿದಿನ ನೀಡುತ್ತಿರುವ ಕಲ್ಲಿದ್ದಲು ಜತೆಗೆ 4,000 ಮೆಟ್ರಿಕ್ ಟನ್ ಹೆಚ್ಚುವರಿ ಕಲ್ಲಿದ್ದಲು ಒದಗಿಸಲು ಸಮ್ಮತಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅದೇ ರೀತಿ ಬಳ್ಳಾರಿ ಉಷ್ಣ ವಿದ್ಯುತ್ ಸ್ಥಾವರದ ಘಟಕ 1 ಮತ್ತು 2ಕ್ಕೆ ಮೀಸಲಾದ ಬಾರಂಜ್ ಕ್ಯಾಪ್ಟಿವ್ ಕಲ್ಲಿದ್ದಲು ಗಣಿಯಿಂದ ಪ್ರಸ್ತುತ ಪ್ರತಿನಿತ್ಯ ಬರುತ್ತಿರುವ 16 ಸಾವಿರ ಮೆಟ್ರಿಕ್ ಟನ್ ಕಲ್ಲಿದ್ದಲನ್ನು 25 ಸಾವಿರ ಮೆಟ್ರಿಕ್ ಟನ್‌ಗೆ ಹೆಚ್ಚಿಸಲು ವ್ಯವಸ್ಥೆ ಮಾಡಲಾಗಿದೆ. ಕಲ್ಲಿದ್ದಲು ಉತ್ಪಾದನೆ, ತೂಕ ಮಾಪನ ಹಾಗೂ ಕಲ್ಲಿದ್ದಲು ಸಾಗಣೆ ವ್ಯವಸ್ಥೆಯನ್ನು ಎಂಡಿ ರಾಜೇಂದ್ರ ಚೋಳನ್ ನೇತೃತ್ವದ ನಿಯೋಗ ಪರಿಶೀಲನೆ ನಡೆಸಿತು. ರಾಯಚೂರು ಉಷ್ಣ ವಿದ್ಯುತ್ ಸ್ಥಾವರಕ್ಕೆ ಪ್ರಸ್ತುತ ಪೂರೈಕೆ ಆಗುತ್ತಿರುವ ಕಲ್ಲಿದ್ದಲು ಜತೆಗೆ ಪ್ರತಿನಿತ್ಯ 1 ರಿಂದ 2 ಕೋಲ್ ರೇಕ್ ಹೆಚ್ಚುವರಿ ಒದಗಿಸುವಂತೆ ಕೋಲ್ ಇಂಡಿಯಾ ಲಿಮಿಟೆಡ್ ಜತೆಗೂ ಮಾತುಕತೆ ನಡೆಸಲಾಗಿದೆ. ಬೇಡಿಕೆಗೆ ತಕ್ಕಂತೆ ಕಲ್ಲಿದ್ದಲು ಪೂರೈಸಲು ಕೋಲ್ ಇಂಡಿಯಾ ಲಿ. ಅಧಿಕಾರಿಗಳು ಸಮ್ಮತಿಸಿದ್ದಾರೆ ಎಂದು ರಾಜೇಂದ್ರ ಚೋಳನ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net