ಮಳೆಗಾಗಿ ಮಕ್ಕಳ ಅಣಕು ಮದುವೆ

ನಗನೂರ ಗ್ರಾಪಂ ವ್ಯಾಪ್ತಿಯ ಗೌಡಗೇರಿಯಲ್ಲಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು ಮಕ್ಕಳ ಅಣಕು ಮದುವೆಯೊಂದಿಗೆ ವರುಣ ದೇವರನ್ನು ಪ್ರಾರ್ಥಿಸಿದ ಅಪರೂಪದ ಸನ್ನಿವೇಶ ಮಂಗಳವಾರ ನಡೆಯಿತು.
ನಗನೂರ ಗ್ರಾಪಂ ವ್ಯಾಪ್ತಿಯ ಗೌಡಗೇರಿಯಲ್ಲಿ ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದ ಗ್ರಾಮಸ್ಥರು ಮಕ್ಕಳ ಅಣಕು ಮದುವೆಯೊಂದಿಗೆ ವರುಣ ದೇವರನ್ನು ಪ್ರಾರ್ಥಿಸಿದ ಅಪರೂಪದ ಸನ್ನಿವೇಶ ಮಂಗಳವಾರ ನಡೆಯಿತು.
Published on

ಪ್ರಮುಖ ಮುಖ್ಯಾಂಶಗಳು

  • ಗೌಡಗೇರಿ ಗ್ರಾಮಸ್ಥರಿಂದ ವಿಶೇಷ ಪೂಜೆ
  • ಹಿರಿಯರು ಹಾಕುವ ಅಕ್ಷತೆ ಸಮೃದ್ಧಿಯ ಸಂಕೇತ
ಕೆಂಭಾವಿ: ಪಟ್ಟಣ ಸೇರಿ ವಲಯದ ಹಲವು ಗ್ರಾಮಗಳಲ್ಲಿ ಮುಂಗಾರು ಮಳೆ ಕೈ ಕೊಟಿದ್ದರಿಂದ ರೈತರು ದೇವರ ಮೊರೆ ಹೋಗುತ್ತಿರುವುದು ಸಾಮಾನ್ಯವಾಗಿದೆ.
ಅದರಂತೆ ನಗನೂರ ಗ್ರಾಪಂ ವ್ಯಾಪ್ತಿಯ ಗೌಡಗೇರಿ ಗ್ರಾಮದಲ್ಲಿ ಮಳೆಗಾಗಿ ವಿಶೇಷವಾಗಿ ಪ್ರಾರ್ಥಿಸಿದ ಗ್ರಾಮಸ್ಥರು ಮಕ್ಕಳ ಅಣಕು ಮದುವೆ ಮಾಡುವ ವರುಣ ದೇವನನ್ನು ಧರೆಗೆ ಇಳಿಯುವಂತೆ ಬೇಡಿಕೊಂಡ ಅಪರೂಪದ ಸನ್ನಿವೇಶ ಮಂಗಳವಾರ ನಡೆಯಿತು.
ಕಲ್ಯಾಣ ಕರ್ನಾಟಕ ಭಾಗದ ಗ್ರಾಮಾಂತರ ಪ್ರದೇಶಗಳಲ್ಲಿ ಕಾರಹುಣ್ಣಿಮೆ ಮರುದಿನ ಚಿಕ್ಕ ಮಕ್ಕಳು ಸೇರಿ ಮಾಡುವ ಈ ಅಣಕು ಮದುವೆ ನೋಡುವುದೇ ಒಂದು ಚಂದ ಅನ್ನುತ್ತಾರೆ ಗ್ರಾಮಸ್ಥರು. ಮಕ್ಕಳು ತಮಗೆ ತಿಳಿದ ರೀತಿಯಲ್ಲಿ ಮದುವೆ ಆಗಿ ನಂತರ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಿರಿಯರಿಂದ ಅಕ್ಷತೆ ಹಾಕಿಸಿಕೊಳ್ಳುವುದರ ಮೂಲಕ ಆಶೀರ್ವಾದ ಪಡೆಯುವುದು ಮೊದಲಿನಿಂದಲೂ ಬಂದ ವಾಡಿಕೆ.
ವರ್ಷಕ್ಕಾಗಿ ಮುಗ್ದ ಮನಸ್ಸುಗಳ ಪ್ರಾರ್ಥನೆ
ಜನಪದ ನಂಬಿಕೆಯ ಪ್ರಕಾರ ಮಕ್ಕಳು ಮಗ್ದರು, ದೇವರ ಸಮಾನ. ಮಳೆ ಬಾರದೆ ರೈತರು ತೊಂದರೆ ಅನುಭವಿಸಿದಾಗ ಅಥವಾ ಮುಂಗಾರು ಮಳೆ ಒಲಿಸಿಕೊಳ್ಳಲು ಇಂಥ ಅಣಕು ಮಕ್ಕಳ ಮದುವೆಗಳಿಗೆ ಅಪಾರ ನಂಬಿಕೆಯಿದ್ದು, ಇದು ಹಲವು ಬಾರಿ ಸತ್ಯವೂ ಆಗಿ ವರುಣ ಧರೆಗಿಳಿದ ಉದಾಹರಣೆ ಕೂಡ ಇವೆ ಎನ್ನುತ್ತಾರೆ ಗ್ರಾಮದ ಹಿರಿಯರು.
ಮಕ್ಕಳು ಬೀದಿಯಲ್ಲಿ ಸಾಂಕೇತಿಕವಾಗಿ ಅಣಕು ಮದುವೆ ಮಾಡಿಕೊಂಡು ಬರುವಾರ ಹಿರಿಯರು ಅವರಿಗೆ ಹಾಕುವ ಅಕ್ಷತೆ ಕೇವಲ ಆಶೀರ್ವಾದವಾಗದೆ ಅಕ್ಕಿ ಸಮೃದ್ಧಿಯ ಸಂಕೇತವಾಗಿದ್ದು ಮಳೆ ಬೆಳೆ ಸಮೃದ್ಧಿಯಾಗಲಿ ಎಂಬುದೆ ಈ ಧರ್ಮಾಚರಣೆಯ ಮೂಲ ಉದ್ದೇಶವಾಗಿದೆ.
ಒಟ್ಟಾರೆ ಮಳೆಗಾಗಿ ಪ್ರಾರ್ಥಿಸಿ ಈಗಾಗಲೇ ಹಲವು ಧಾರ್ಮಿಕ ಚಟುವಟಿಕೆಗಳ ನಡೆಯುತ್ತಿದ್ದು ಗೌಡಗೇರಿ ಗ್ರಾಮದಲ್ಲಿ ನಡೆದ ಈ ಅಣಕು ಮಕ್ಕಳ ಮದುವೆ ಮಳೆ ತರಲಿ, ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಹಿರಿಯರು ಹಾರೈಸಿದರು. ರೇಖಾ, ಭವಾನಿ, ಬಸಮ್ಮ, ಸಚಿನ ಸೇರಿ ಹಲವು ಮಕ್ಕಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net