ತಟ್ಟೆಯೊಂದಿಗೆ ಶಾಸಕರೆದುರು ಮಕ್ಕಳ ಗೋಳು

ಬಸವಕಲ್ಯಾಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್​ ನಂತರದ ಬಾಲಕರ ವಸತಿನಿಲಯದ ವಿದ್ಯಾರ್ಥಿಗಳು ಊಟದ ತಟ್ಟೆಯೊಂದಿಗೆ ಮಂಗಳವಾರ ರಾತ್ರಿ ಶಾಸಕ ಶರಣು ಸಲಗರ ಎದುರು ಅಳಲು ತೋಡಿಕೊಂಡರು.
ಬಸವಕಲ್ಯಾಣದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್​ ನಂತರದ ಬಾಲಕರ ವಸತಿನಿಲಯದ ವಿದ್ಯಾರ್ಥಿಗಳು ಊಟದ ತಟ್ಟೆಯೊಂದಿಗೆ ಮಂಗಳವಾರ ರಾತ್ರಿ ಶಾಸಕ ಶರಣು ಸಲಗರ ಎದುರು ಅಳಲು ತೋಡಿಕೊಂಡರು.
Published on

ಪ್ರಮುಖ ಮುಖ್ಯಾಂಶಗಳು

  • ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್​ನಲ್ಲಿ ಕಳಪೆ ಊಟ
  • ಬಾಡಿದ ತರಕಾರಿ, ನೀರಿನಂಥ ಬ್ಯಾಳಿ ಹ್ಯಾಂಗ್​ ಉಣಬೇಕ್ರಿ?
ಬಸವಕಲ್ಯಾಣ: ಬಾಡಿದ ತರಕಾರಿ, ಬಡಿಸಿದ ಊಟದ ತಟ್ಟೆಯೊಂದಿಗೆ ವಿದ್ಯಾರ್ಥಿಗಳು ಮಂಗಳವಾರ ತಡರಾತ್ರಿ ಶಾಸಕರ ಕಚೇರಿಗೆ ಆಗಮಿಸಿ ವಸತಿನಿಲಯದಲ್ಲಿನ ಅವ್ಯವಸ್ಥೆ ಬಗ್ಗೆ ಅಳಲು ತೋಡಿಕೊಂಡರು.
ಸರಿಯಾಗಿ ಊಟ ಸಿಗುತ್ತಿಲ್ಲ. ಸಂಬಂಧಿತರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ನಗರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮೆಟ್ರಿಕ್​ ನಂತರದ ಬಾಲಕರ ವಸತಿನಿಲಯ ವಿದ್ಯಾರ್ಥಿಗಳು, ಸಂಜೆ ತಂದಿದ್ದ ತರಕಾರಿ ಹ್ಯಾಂಗ್​ ಬಾಡಿದೆ ನೋಡಿ, ಮಧ್ಯಾಹ್ನ ಮಾಡಿದ ಪಲ್ಯಾ, ಉಪ್ಪಿಟ್ಟಿನಲ್ಲಿ ಖಾರವಿಲ್ಲ. ನೀರಿನಂತಹ ಬ್ಯಾಳಿ ಹ್ಯಾಂಗ್​ ಉಣಬೇಕು ಹೇಳಿ ಸರ್​ ಎಂದು ಶಾಸಕ ಶರಣು ಸಲಗರ ಅವರನ್ನು ಕೇಳಿದರು.
ನಾವು ಕಲಿಯಲು ಬಂದಿದ್ದೇವೆ. ಆದರೆ ಹಾಸ್ಟೆಲ್​ನಲ್ಲಿ ಕನಿಷ್ಠ ಗುಣಮಟ್ಟದ ಊಟ ಸಿಗುತ್ತಿಲ್ಲ. ಕೂಡಲೇ ಸಂಬಂಧಿತ ಅಧಿಕಾರಿಗಳು ವಸತಿನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಕೋರಿದರು.
ಕಳಪೆ ಆಹಾರ ಗಮನಿಸಿ ದೂರವಾಣಿಯಲ್ಲಿ ಅಧಿಕಾರಿಗಳನ್ನು ಸಂಪರ್ಕಿಸಿದ ಶಾಸಕ ಸಲಗರ, ಹಾಸ್ಟಲ್​ ವಿದ್ಯಾರ್ಥಿಗಳಿಗೆ ಇಂತಹ ಊಟ ಕೊಡುತ್ತೀರಾ? ನಿಮ್ಮ ಮಕ್ಕಳಿಗೆ ಹೀಗೆ ಕೊಡ್ತೀರಾ? ನೀವು ಇಂಥದ್ದೇ ಊಟ ಮಾಡ್ತೀರಾ? ನಾಚಿಕೆ ಆಗಬೇಕು ಎಂದು ತರಾಟೆಗೆ ತೆಗೆದುಕೊಂಡರು.
ತಕ್ಷಣವೇ ಹಾಸ್ಟೆಲ್​ ವ್ಯವಸ್ಥೆ ಸುಧಾರಿಸಬೇಕು. ಬೆಳಗ್ಗೆ ಹಾಸ್ಟೆಲ್​ನಲ್ಲಿ ನಾನು ಊಟ ಮಾಡುವೆ. ವ್ಯವಸ್ಥೆ ಸುಧಾರಿಸದಿದ್ದರೆ ಸಂಬಂಧಿತರ ವಿರುದ್ಧ ಶಿಸ್ತು ಕ್ರಮಕ್ಕೆ ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ಎಚ್ಚರಿಕೆ ನೀಡಿದರು.
ಎಂಎಲ್​ಎ ಕಚೇರಿಯಲ್ಲಿ
ಭೋಜನ ಮಾಡಿದ ಮಕ್ಕಳು
ೇತ್ರದ ಶಾಸಕನಾಗಿ ನಿಮ್ಮೆಲ್ಲರ ಯೋಗೇಮ ನೋಡಿಕೊಳ್ಳುವುದು ನನ್ನ ಕೆಲಸ. ಇನ್ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲಾಗುವುದು. ಇದೊಂದು ಸಲ ಕ್ಷಮೆ ಇರಲಿ ಎಂದು ಶರಣು ಸಲಗರ ವಿದ್ಯಾರ್ಥಿಗಳಲ್ಲಿ ಕೇಳಿಕೊಂಡರು. ಇಂದು ರಾತ್ರಿ ನಮ್ಮಲ್ಲೇ ಊಟ ಮಾಡಿ ಹೋಗುವಂತೆ ಹೇಳಿದರಲ್ಲದೆ ಆಪ್ತ ಸಹಾಯಕರನ್ನು ಕರೆಯಿಸಿ ಮಕ್ಕಳಿಗೆ ಗುಣಮಟ್ಟದ ಊಟದ ವ್ಯವಸ್ಥೆ ಮಾಡುವಂತೆ ಸೂಚಿಸಿದರು. ಹೀಗಾಗಿ ವಿದ್ಯಾರ್ಥಿಗಳು ಊಟ ಮಾಡಿ ತಡರಾತ್ರಿ ಹಾಸ್ಟೆಲ್​ಗೆ ತೆರಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net