ಸಿಇಟಿ: ಮೂರು ಸಾವಿರ ಸರ್ಕಾರಿ ಕೋಟಾ ಸೀಟು ಹೆಚ್ಚಳ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ
Published on

ಪ್ರಮುಖ ಮುಖ್ಯಾಂಶಗಳು

  • ಈ ಬಾರಿ ಒಟ್ಟಾರೆ ಸೀಟುಗಳಲ್ಲಿ 6 ಸಾವಿರ ಮತ್ತು ಕೆಇಎ ಮೂಲಕ ಭರ್ತಿ ಮಾಡುವ ಸೀಟುಗಳಿಗೆ ಮೂರು ಸಾವಿರ ಸೀಟುಗಳು ಹೆಚ್ಚಳ
  • ಮ್ಯಾನೇಜ್‌ಮೆಂಟ್ ಕೋಟಾ ಸೀಟುಗಳಲ್ಲಿಯೂ ಎರಡು ಸಾವಿರ ಹೆಚ್ಚಳವಾಗಿದ್ದು, ಖಾಸಗಿ ಕಾಲೇಜುಗಳ ಸೀಟುಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ
  • 2026-27ನೇ ಸಾಲಿನ ಸೀಟುಗಳಲ್ಲಿ ಒಟ್ಟು 1,59,151 ಸೀಟುಗಳಿದ್ದು, 75,041 ಕೆಇಎ ಮೂಲಕ ಹಾಗೂ 32,769 ಕಾಮೆಡ್-ಕೆ ಮತ್ತು 51,294 ಸೀಟುಗಳು ಮ್ಯಾನೇಜ್‌ಮೆಂಟ್ ಕೋಟಾದಡಿ ಭರ್ತಿಗೆ ಲಭ್ಯ
  • 2025-26ನೇ ಸಾಲಿನಲ್ಲಿ ಒಟ್ಟಾರೆ 1,53,916 ಸೀಟುಗಳು ಲಭ್ಯವಾಗಿದ್ದವು. ಇದರಲ್ಲಿ ಕೆಇಎ ಮೂಲಕ ಭರ್ತಿಗೆ 72,506, ಕಾಮೆಡ್-ಕೆನಲ್ಲಿ 32,231 ಮತ್ತು ಮ್ಯಾನೇಜ್‌ಮೆಂಟ್ ಕೋಟಾದಡಿ 49,141 ಸೀಟುಗಳಿದ್ದವು.
ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯು ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಕರಡು ಸೀಟ್ ಮ್ಯಾಟ್ರಿಕ್ಸ್ ಅನ್ನು ಪ್ರಕಟಿಸಿದೆ. ಸರ್ಕಾರಿ ಕೋಟಾ ಸೀಟುಗಳಲ್ಲಿ ಕಳೆದ ವರ್ಷಕ್ಕಿಂತ ಮೂರು ಸಾವಿರ ಸೀಟುಗಳ ಸಂಖ್ಯೆ ಹೆಚ್ಚಳವಾಗಿದೆ.
ಕೆ-ಸಿಇಟಿ ಮೂಲಕ ಖಾಸಗಿ ಕಾಲೇಜುಗಳಲ್ಲಿ ಸೀಟು ಪಡೆಯಲಿರುವ ಅಭ್ಯರ್ಥಿಗಳಿಗೆ ಇದು ಖುಷಿಯ ವಿಚಾರವಾಗಿದೆ. 2025-26ನೇ ಸಾಲಿನಲ್ಲಿ ಒಟ್ಟಾರೆ 1,53,916 ಸೀಟುಗಳು ಲಭ್ಯವಾಗಿದ್ದವು. ಇದರಲ್ಲಿ ಕೆಇಎ ಮೂಲಕ ಭರ್ತಿಗೆ 72,506, ಕಾಮೆಡ್-ಕೆನಲ್ಲಿ 32,231 ಮತ್ತು ಮ್ಯಾನೇಜ್‌ಮೆಂಟ್ ಕೋಟಾದಡಿ 49,141 ಸೀಟುಗಳಿದ್ದವು. ಈ ಬಾರಿ ಒಟ್ಟಾರೆ ಸೀಟುಗಳಲ್ಲಿ 6 ಸಾವಿರ ಮತ್ತು ಕೆಇಎ ಮೂಲಕ ಭರ್ತಿ ಮಾಡುವ ಸೀಟುಗಳಿಗೆ ಮೂರು ಸಾವಿರ ಸೀಟುಗಳು ಹೆಚ್ಚಳವಾಗಿವೆ. ಮ್ಯಾನೇಜ್‌ಮೆಂಟ್ ಕೋಟಾ ಸೀಟುಗಳಲ್ಲಿಯೂ ಎರಡು ಸಾವಿರ ಹೆಚ್ಚಳವಾಗಿದ್ದು, ಖಾಸಗಿ ಕಾಲೇಜುಗಳ ಸೀಟುಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
2026-27ನೇ ಸಾಲಿನ ಸೀಟುಗಳಲ್ಲಿ ಒಟ್ಟು 1,59,151 ಸೀಟುಗಳಿದ್ದು, 75,041 ಕೆಇಎ ಮೂಲಕ ಹಾಗೂ 32,769 ಕಾಮೆಡ್-ಕೆ ಮತ್ತು 51,294 ಸೀಟುಗಳು ಮ್ಯಾನೇಜ್‌ಮೆಂಟ್ ಕೋಟಾದಡಿ ಭರ್ತಿಗೆ ಲಭ್ಯವಿವೆ ಎಂದು ಉನ್ನತ ಶಿಕ್ಷಣ ಇಲಾಖೆಯು ಪ್ರಕಟಿಸಿರುವ ಕರಡು ಸೀಟ್ ಮ್ಯಾಟ್ರಿಕ್ಸ್‌ನಲ್ಲಿ ಲಭ್ಯವಿದೆ.
ಈ ವರ್ಷ ಮ್ಯಾಟ್ರಿಕ್ಸ್‌ನಲ್ಲಿ ಇಂಜಿನಿಯರಿಂಗ್ ಸೀಟುಗಳ ವ್ಯತ್ಯಾಸದ ಬಗ್ಗೆ ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, ಕೆಲವು ಕಾಲೇಜುಗಳು ಇನ್ನೂ ಸೀಟ್ ಮ್ಯಾಟ್ರಿಕ್ಸ್ ಅನ್ನು ಅಪ್‌ಲೋಡ್ ಮಾಡಿಲ್ಲ ಮತ್ತು ಕೆಲವು ಕಾಲೇಜುಗಳು ಇನ್ನೂ ಎಐಸಿಟಿಇಯಿಂದ ಅನುಮೋದನೆ ಪಡೆಯಬೇಕಾಗಿದೆ. ಅದರ ನಂತರ ಲಭ್ಯವಿರುವ ಒಟ್ಟು ಸೀಟುಗಳು ಹೆಚ್ಚಾಗಬಹುದು ಎಂದು ತಿಳಿಸಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ (ಸಿಎಸ್‌ಇ) ಕೋರ್ಸ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಸೀಟುಗಳು ಲಭ್ಯವಿದೆ. ಆದರೆ, ಡಾ. ಸಡಗೋಪನ್ ಸಮಿತಿ ವರದಿಯನ್ನು ಅನುಷ್ಠಾನ ಮಾಡಿರುವುದರಿಂದ ಸೀಟುಗಳಲ್ಲಿ ವ್ಯತ್ಯಾಸವಾಗಬಹುದು. ಸದ್ಕಕ್ಕೆ ಕರಡು ಆಗಿರುವುದರಿಂದ ಅಂತಿಮ ಸೀಟ್ ಮ್ಯಾಟ್ರಿಕ್ಸ್ ಅನ್ನು ಆಪ್ಷನ್ ಎಂಟ್ರಿ ವೇಳೆಗೆ ಅಂತಿಮಗೊಳ್ಳಲಿದೆ ಎಂದು ಪ್ರತಿಕ್ರಿಯಿಸಿದರು.
ಕಳೆದ ವರ್ಷ ಒಟ್ಟು 2,75,677 ವಿದ್ಯಾರ್ಥಿಗಳು ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ-2025) ಕ್ಕೆ ಅರ್ಹತೆ ಪಡೆದಿದ್ದರು. ಕಳೆದ ವರ್ಷ 2.74 ಲಕ್ಷ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅರ್ಹತೆ ಪಡೆದಿದ್ದರು.
ಈ ವರ್ಷ ಒಟ್ಟು 3.09 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಒಟ್ಟು 2.92 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಿಇಟಿ ಕೌನ್ಸೆಲಿಂಗ್‌ಗೆ ಅರ್ಹತೆ ಪಡೆದಿದ್ದಾರೆ. ಈ ಪೈಕಿ ಇಂಜಿನಿಯರಿಂಗ್ ಕೋರ್ಸು ಪ್ರವೇಶಕ್ಕೆ 2,82,603 ವಿದ್ಯಾರ್ಥಿಗಳಿದ್ದಾರೆ.

85 ಸಾವಿರ ಸೀಟು ಹಂಚಿಕೆಯಾಗಿತ್ತು

2025-26ನೇ ಸಾಲಿನಲ್ಲಿ ಆರಂಭದಲ್ಲಿ ಕೆಇಎ ಮೂಲಕ ಭರ್ತಿಗೆ 72,506 ಸೀಟುಗಳು ಲಭ್ಯವಾಗಿದ್ದರೂ ಪ್ರಕ್ರಿಯೆ ಮುಗಿಯುವಷ್ಟರಲ್ಲಿ 85,020 ಸೀಟುಗಳು ಲಭ್ಯವಾಗಿದ್ದವು. ಆದರೆ, ಈ ಬಾರಿ ಏನಾಗಲಿದೆ ಎಂದು ತಿಳಿಯಬೇಕಿದೆ.
"

ಕರಡು ಸೀಟು ಪ್ರಕಟವಾಗಿದ್ದು, ಇನ್ನೂ ಕೆಲವು ಕಾಲೇಜುಗಳು ಸೀಟ್ ಮ್ಯಾಟ್ರಿಕ್ಸ್ ನೀಡಬೇಕಿದೆ. ಮತ್ತಷ್ಟು ಸೀಟು ಹೆಚ್ಚಳವನ್ನು ನಿರೀಕ್ಷಿಸಲಾಗಿದೆ. ಅಂತಿಮ ಸೀಟ್ ಮ್ಯಾಟ್ರಿಕ್ಸ್‌ನಲ್ಲಿ ಸೀಟು ವಿವರಗಳ ನಿಖರತೆ ತಿಳಿಯಲಿದೆ.

— ಎಚ್. ಪ್ರಸನ್ನ, ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net