ಔರಾದ್: ತಾಲೂಕು ಆಡಳಿತದಿಂದ ಆ.15ರಂದು ನಡೆಯಲಿರುವ ಸ್ವಾತಂತ್ರ ದಿನಾಚರಣೆಯನ್ನು ಸಂಭ್ರಮ, ಸಡಗರದಿಂದ ಆಚರಿಸಬೇಕು. ಪ್ರತಿಯೊಬ್ಬರೂ ಕಡ್ಡಾಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎಂದು ತಹಸೀಲ್ದಾರ್ ಮಹೇಶ ಪಾಟೀಲ್ ಹೇಳಿದರು.
ಸ್ವಾತಂತ್ರೋತ್ಸವ ದಿನಾಚರಣೆ ನಿಮಿತ್ತ ಪಟ್ಟಣದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಕ್ರೀಡಾಂಗಣದಲ್ಲಿ ಆಯೋಜಿಸುವ ಸ್ವಾತಂತ್ರೋತ್ಸವ ಕಾರ್ಯಕ್ರಮ ಪ್ರಾರಂಭದಿಂದ ಸಮಾಪ್ತಿಯವರೆಗೂ ಕಡ್ಡಾಯ ಶಿಕ್ಷಕರು ಹಾಗೂ ಸರ್ಕಾರಿ ನೌಕರರು ಉಪಸ್ಥಿತರಿರಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಸ್ವಾತಂತ್ರೋತ್ಸವದಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಪಟ್ಟಣದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಕ್ರೀಡಾಂಗಣಕ್ಕೆ ಬರಲು ಸಾರಿಗೆ ವ್ಯವಸ್ಥೆ ಮಾಡಬೇಕು. ಕ್ರೀಡಾಂಗಣದಲ್ಲಿ ನೀರು ಉಪಹಾರ ವ್ಯವಸ್ಥೆ ಮಾಡಲಾಗುವುದು. ಸರಿಯಾಗಿ 9ಕ್ಕೆ ಧ್ವಜಾರೋಹಣ ನೆರವೇರಿಸಲಾಗುವುದು. ಎಲ್ಲರೂ ಸಮಯ ಪಾಲನೆಗೆ ಮಹತ್ವ ನೀಡಬೇಕು. ಕರ್ತವ್ಯಲೋಪ ಎಸಗುವ ಅಥವಾ ಗೈರುಹಾಜರಾಗುವ ಅಧಿಕಾರಿ&ಸಿಬ್ಬಂದಿ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಅನೇಕ ಮುಖಂಡರು ಹಲವು ಸಲಹೆ ಸೂಚನೆಗಳನ್ನು ನೀಡಿದರು. ಸಿಪಿಐ ರಘುವೀರ ಸಿಂಗ್ ಠಾಕೂರ್, ತಾಪಂ ಇಒ ಕಿರಣ ಪಾಟೀಲ್, ಪಪಂ ಮುಖ್ಯಾಧಿಕಾರಿ ರವಿ ಸುಕುಮಾರ, ಬಾಬು ತಾರೆ, ರಾಮಣ್ಣ ವಡೆಯರ, ಅಮೀರ್ ಚಾಚಾ, ರತ್ನದಿಪ್ ಕಸ್ತುರೆ , ಅಶೋಕ ಶೆಂಬೆಳ್ಳಿ ಇತರರಿದ್ದರು.