ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಲು ನಿರಾಕರಿಸಿದ ರಾಜ್ಯಪಾಲರ ವಿರುದ್ಧ ಕ್ರಮ ಜರುಗಿಸಬಹುದಾ? ಕಾನೂನು ಏನು ಹೇಳುತ್ತೆ? Thawar Chand Gehlot

ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​
ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​
Published on

ಪ್ರಮುಖ ಮುಖ್ಯಾಂಶಗಳು

  • ವಿಧಾನಸಭೆಯ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್ ನಿರಾಕರಣೆ
  • ರಾಜ್ಯ ಕಾಂಗ್ರೆಸ್​ ಸರ್ಕಾರ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಡುವೆ ಭಾಷಣ ಜಟಾಪಟಿ
  • ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಲಿರುವ ಕಾಂಗ್ರೆಸ್​ ನಿಯೋಗ
ಬೆಂಗಳೂರು: ನಾಳೆಯಿಂದ ಆರಂಭವಾಗುವ ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲ ಥಾವರ್​ ಚಂದ್​ ಗೆಹ್ಲೋಟ್​ ( Thawar Chand Gehlot ) ನಿರಾಕರಿಸಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್​ ನಿಯೋಗ ರಾಜಭವನಕ್ಕೆ ತೆರಳಲಿದೆ ಎಂಬ ಮಾಹಿತಿಯೂ ಸಿಕ್ಕಿದೆ. ರಾಜ್ಯಾಪಾಲರು ಭಾಷಣ ಮಾಡಲು ನಿರಾಕರಿಸಿರುವುದರಿಂದ ಜನರಲ್ಲಿ ಒಂದು ಪ್ರಶ್ನೆ ಮೂಡಿದೆ. ಅದೇನೆಂದರೆ, ರಾಜ್ಯಪಾಲರ ಮೇಲೆ ಕ್ರಮ ತೆಗೆದುಕೊಳ್ಳಬಹುದಾ ಅನ್ನೋದು. ಈ ವಿಚಾರದಲ್ಲಿ ಕಾನೂನು ಏನು ಹೇಳುತ್ತೆ ಎಂದು ನಾವೀಗ ತಿಳಿದುಕೊಳ್ಳೋಣ.
ಮೊದಲಿಗೆ ರಾಜ್ಯಪಾಲರು ಭಾಷಣ ನಿರಾಕರಿಸಲು ಕಾರಣ ಏನು ಅನ್ನೋದನ್ನು ತಿಳಿದುಕೊಳ್ಳೋಣ. ಜಂಟಿ ಅಧಿವೇಶನದಲ್ಲಿ ಮಾತನಾಡಲು ರಾಜ್ಯ ಸರ್ಕಾರ ಸಿದ್ಧಪಡಿಸಿರುವ ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದ ಸಾಧನೆಗಳಿಗಿಂತ ಹೆಚ್ಚಾಗಿ, ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಹಾಗೂ ಆರೋಪಗಳಿಗೆ ಸೀಮಿತವಾಗಿದೆ ಎಂಬುದು ರಾಜಭವನದ ವಾದ. ಈ ಕಾರಣಕ್ಕೆ ಭಾಷಣ ಓದಲು ರಾಜ್ಯಪಾಲರು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಒಂದು ನಡೆ ಮತ್ತೊಮ್ಮೆ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ವಾಗ್ವಾದಕ್ಕೆ ಕಾರಣವಾಗಲಿದೆ.

ರಾಜ್ಯಪಾಲರ ವಿರುದ್ಧ ಕ್ರಮ ತೆಗೆದುಕೊಳ್ಳಬಹುದಾ?

ಅಂದಹಾಗೆ, ರಾಜ್ಯಪಾಲರು ಭಾಷಣ ಓದಲು ನಿರಾಕರಿಸಿದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಲು ಸಂವಿಧಾನದ 361ನೇ ವಿಧಿ ಅಡ್ಡಿಯಾಗುತ್ತದೆ. ಈ ವಿಧಿಯ ಅಡಿಯಲ್ಲಿ ರಾಜ್ಯಪಾಲರಿಗೆ ಅಧಿಕಾರಾವಧಿಯಲ್ಲಿ ಕಾನೂನು ರಕ್ಷಣೆ ಇರುತ್ತದೆ. ರಾಜ್ಯಪಾಲರ ಈ ನಡೆ ಸಂವಿಧಾನಾತ್ಮಕ ಬಿಕ್ಕಟ್ಟಿಗೆ ಕಾರಣವಾಗುತ್ತದೆಯೇ ಹೊರತು ಶಿಕ್ಷಾರ್ಹ ಅಪರಾಧವಾಗುವುದಿಲ್ಲ.

ಇದೇ ಮೊದಲೇನಲ್ಲ

ಇತ್ತೀಚಿನ ವರ್ಷಗಳಲ್ಲಿ ರಾಜ್ಯಪಾಲರು ಸರ್ಕಾರದ ಭಾಷಣದಲ್ಲಿರುವ ಕೆಲವು ಅಂಶಗಳು "ತಪ್ಪು ಮಾಹಿತಿಯಿಂದ ಕೂಡಿದೆ" ಅಥವಾ "ಸಂವಿಧಾನ ವಿರೋಧಿಯಾಗಿದೆ" ಎಂದು ಹೇಳಿ ಆ ಭಾಗಗಳನ್ನು ಬಿಟ್ಟು ಓದಿದ ಅಥವಾ ಭಾಷಣವನ್ನೇ ಓದದೆ ಹೊರನಡೆದ ಘಟನೆಗಳು ನಡೆದಿವೆ. ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇರಳ ಸರ್ಕಾರದಲ್ಲಿ ಇಂತಹ ಘಟನೆಗಳು ನಡೆದಿವೆ. ಈ ರೀತಿ ಆದಾಗ ಸರ್ಕಾರಗಳು ವಿಧಾನಸಭೆಯಲ್ಲಿ ರಾಜ್ಯಪಾಲರು ಬಿಟ್ಟುಬಿಟ್ಟ ಭಾಗಗಳನ್ನೂ ಸೇರಿಸಿ "ಮೂಲ ಭಾಷಣವನ್ನೇ" ಕಡತಕ್ಕೆ ಸೇರಿಸುವ ನಿರ್ಣಯವನ್ನು ಅಂಗೀಕರಿಸುತ್ತವೆ.
ಬ್ರಿಟಿಷ್​ ಸಂಪ್ರದಾಯ
ಅಂದಹಾಗೆ, ಸಂವಿಧಾನದ 163ನೇ ವಿಧಿಯಂತೆ, ರಾಜ್ಯಪಾಲರು ಮಂತ್ರಿಮಂಡಲದ ಸಲಹೆ ಮತ್ತು ಸೂಚನೆಯ ಮೇರೆಗೆ ಕಾರ್ಯನಿರ್ವಹಿಸಬೇಕು. ಭಾರತವು ಬ್ರಿಟಿಷ್ ಸಂಸದೀಯ ವ್ಯವಸ್ಥೆಯನ್ನು ಅನುಸರಿಸುತ್ತಿರುವುದರಿಂದ, ಬ್ರಿಟಿಷ್ ರಾಜ/ರಾಣಿ ಹೇಗೆ ಸರ್ಕಾರ ನೀಡಿದ ಭಾಷಣವನ್ನೇ ಓದುತ್ತಾರೋ, ಅದೇ ರೀತಿ ರಾಜ್ಯಪಾಲರು ಕೂಡ ಸರ್ಕಾರದ ಭಾಷಣವನ್ನೇ ಓದಬೇಕು ಎಂಬುದು ನಿಯಮ ನಮ್ಮಲ್ಲಿ ಇದೆ.

ಹೈಕೋರ್ಟ್​ ತೀರ್ಪುಗಳೇನು?

ಇದೇ ರೀತಿಯ ವಿವಾದ ಹಿಂದೊಮ್ಮೆ ಪಶ್ಚಿಮ ಬಂಗಾಳದಲ್ಲಿ ಸಂಭವಿಸಿತ್ತು. 1966ರಲ್ಲಿ ರಾಜ್ಯಪಾಲರ ವಿರುದ್ಧ ಪಶ್ವಿಮ ಬಂಗಾಳ ಸರ್ಕಾರ ಹೈಕೋರ್ಟ್​ ಮೆಟ್ಟಿಲೇರಿತ್ತು. ಈ ವೇಳೆ ವಿಚಾರಣೆ ನಡೆಸಿದ ಹೈಕೋರ್ಟ್​, ರಾಜ್ಯಪಾಲರು ಭಾಷಣ ಮಾಡಲು ನಿರಾಕರಿಸುವಂತಿಲ್ಲ, ಅದು ಅವರ ಸಂವಿಧಾನಾತ್ಮಕ ಕರ್ತವ್ಯ ಎಂದು ತೀರ್ಪಿನಲ್ಲಿ ಹೇಳಿತು. ಒಂದು ವೇಳೆ ರಾಜ್ಯಪಾಲರು ಭಾಷಣದ ಕೆಲವು ಭಾಗಗಳನ್ನು ಬಿಟ್ಟು ಓದಿದರೆ ಅಥವಾ ಓದದೆ ಹೊರನಡೆದರೆ, ಅದನ್ನು "ಕಾರ್ಯವಿಧಾನದ ಅನಿಯಮಿತತೆ" ಎಂದು ಪರಿಗಣಿಸಬಹುದೇ ಹೊರತು "ಅಕ್ರಮ" ಎಂದು ಕರೆಯಲಾಗದು ಎಂದು ನ್ಯಾಯಾಲಯ ಹೇಳಿದೆ. ಇದೇ ರೀತಿ, 1967ರಲ್ಲಿ ರಾಜಸ್ಥಾನ ಹೈಕೊರ್ಟ್​ ಕೂಡ ತೀರ್ಪು ನೀಡಿದೆ. ರಾಜ್ಯಪಾಲರು ಭಾಷಣದ ಕೆಲವು ಭಾಗಗಳನ್ನು ಓದಿದರೂ ಸಹ, ಇಡೀ ಭಾಷಣವನ್ನು ಓದಲಾಗಿದೆ ಎಂದು ಪರಿಗಣಿಸಬಹುದು ಎಂದು ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net