ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರ ನಿರಾಕರಣೆ: ಕಾರಣವೇನು? ಕಾಂಗ್ರೆಸ್​ ನೀಯೋಗ ಭೇಟಿ! Thawar Chand Gehlot

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಕಾಂಗ್ರೆಸ್​ ಸರ್ಕಾರ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಡುವೆ ಭಾಷಣ ಜಟಾಪಟಿ
  • ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರಿಂದ ನಿರಾಕರಣೆ
  • ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಲಿರುವ ಕಾಂಗ್ರೆಸ್​ ನಿಯೋಗ
ಬೆಂಗಳೂರು: ರಾಜ್ಯ ಕಾಂಗ್ರೆಸ್​ ಸರ್ಕಾರ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ( Thawar Chand Gehlot ) ನಡುವೆ ಮತ್ತೊಂದು ಸುತ್ತಿನ ಜಟಾಪಟಿ ಆರಂಭವಾಗುವ ಲಕ್ಷಣಗಳು ಕಂಡುಬಂದಿವೆ. ಅದಕ್ಕೆ ಕಾರಣ ನಾಳೆಯಿಂದ ಆರಂಭವಾಗುವ ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲು ರಾಜ್ಯಪಾಲರು ನಿರಾಕರಿಸಿರುವುದು. ಹೀಗಾಗಿ, ಕಾಂಗ್ರೆಸ್​ ನಿಯೋಗ ರಾಜಭವನಕ್ಕೆ ತೆರಳಲಿದೆ ಎಂಬ ಮಾಹಿತಿ ಬಂದಿದೆ.
ಅಂದಹಾಗೆ, ನಾಳೆಯಿಂದ (ಜ.22) ವಿಧಾನಸಭೆಯ ಜಂಟಿ ಅಧಿವೇಶನ ಆರಂಭವಾಗಲಿದೆ. ಮೊದಲ ದಿನ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡುವುದು ವಾಡಿಕೆ. ಆದರೆ, ಈ ಬಾರಿ ಭಾಷಣ ಮಾಡಲು ರಾಜ್ಯಪಾಲರು ನಿರಾಕರಿಸಿದ್ದಾರೆಂದು ತಿಳಿದುಬಂದಿದೆ. ಹೀಗಾಗಿ, ಕಾನೂನು ಸಚಿವರ ನೇತೃತ್ವದ ಉನ್ನತ ಮಟ್ಟದ ನಿಯೋಗ ಇಂದು ಸಂಜೆ 5.45 ಗಂಟೆಗೆ ರಾಜಭವನಕ್ಕೆ ತೆರಳಿ, ರಾಜ್ಯಪಾಲರ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಭಾಷಣ ತಿರಸ್ಕರಿಸಲು ಕಾರಣವೇನು?

ಜಂಟಿ ಅಧಿವೇಶನದಲ್ಲಿ ಮಾತನಾಡಲು ರಾಜ್ಯ ಸರ್ಕಾರ ಸಿದ್ಧಪಡಿಸಿರುವ ರಾಜ್ಯಪಾಲರ ಭಾಷಣದಲ್ಲಿ ಸರ್ಕಾರದ ಸಾಧನೆಗಳಿಗಿಂತ ಹೆಚ್ಚಾಗಿ, ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಹಾಗೂ ಆರೋಪಗಳಿಗೆ ಸೀಮಿತವಾಗಿದೆ ಎಂಬುದು ರಾಜಭವನದ ವಾದ. ಈ ಕಾರಣಕ್ಕೆ ಭಾಷಣ ಓದಲು ರಾಜ್ಯಪಾಲರು ನಿರಾಕರಿಸಿದ್ದಾರೆ ಎನ್ನಲಾಗಿದೆ. ಈ ಒಂದು ನಡೆ ಮತ್ತೊಮ್ಮೆ ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ನಡುವಿನ ವಾಗ್ವಾದಕ್ಕೆ ಕಾರಣವಾಗಲಿದೆ.

ಇದೇ ಮೊದಲೇನಲ್ಲ

ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಜಟಾಪಟಿ ಇದೇ ಮೊದಲೇನಲ್ಲ. ಈ ಹಿಂದೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ)ದಲ್ಲಿ ನಡೆದಿದೆ ಎಂದು ಆರೋಪಿಸಲಾದ ಭೂಮಿ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ಅಕ್ರಮವಾಗಿ ಸೈಟ್‌ಗಳು ನೀಡಲಾಗಿದೆ ಎಂಬ ಆರೋಪದ ಮೇಲೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ತನಿಖೆಗೆ ಮತ್ತು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಇದರಿಂದ ರಾಜ್ಯ ಸರ್ಕಾರ ಮತ್ತು ರಾಜಭವನದ ನಡುವೆ ತೀವ್ರ ಗುದ್ದಾಟ ನಡೆದಿತ್ತು. ಸರ್ಕಾರದ ಸಚಿವ ಸಂಪುಟ, ರಾಜ್ಯಪಾಲರ ನಿರ್ಧಾರವನ್ನು ವಿರೋಧಿಸಿ, ಆದೇಶ ಹಿಂಪಡೆಯಲು ಆಗ್ರಹಿಸಿತು. ಆದರೆ, ರಾಜ್ಯಪಾಲರು ಅದನ್ನು ತಿರಸ್ಕರಿಸಿದರು. ಇದು ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಕಿತ್ತಾಟಕ್ಕೆ ಕಾರಣವಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net