ನಾಲವಾರ: ರಾಜ್ಯಾದ್ಯಂತ ರೈತರ ಬೇಡಿಕೆಗೆ ಅನುಗುಣವಾಗಿ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಕೃಷಿ ಇಲಾಖೆ ಚಾಲನೆ ನೀಡಿದೆ. ರೈತರು ಮಧ್ಯವರ್ತಿಗಳ ಮೊರೆ ಹೋಗದೆ ಕೃಷಿ ಇಲಾಖೆ ಅಧಿಕಾರಿಗಳ ಸಲಹೆಗಳನ್ನು ಪಾಲಿಸಿ ಕೃಷಿಯಲ್ಲಿ ಸಮೃದ್ಧಿ ಹೊಂದಬೇಕು ಎಂದು ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ವೀರಣ್ಣಗೌಡ ಪರಸರೆಡ್ಡಿ ಹೇಳಿದರು. ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಮುಂಗಾರು ಹಂಗಾಮಿನ ಬೀಜ ವಿತರಣೆಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ರೈತಾಪಿ ವರ್ಗ ಅಗತ್ಯ ಸಲಹೆಗಳೊಂದಿಗೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ಯಾವುದೇ ಸಮಸ್ಯೆ ಇದ್ದರೂ ಕೃಷಿ ತಜ್ಞರನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಲ್ಲಿಕಾರ್ಜುನ ಕಂದರ ಮಾತನಾಡಿ, ಸರ್ಕಾರಿ ಅಧಿಕೃತ ಮಾರಾಟಗಾರರಿಂದಲೇ ಖರೀದಿ ಮಾಡಬೇಕು. ರೈತ ಸಂಪರ್ಕ ಕೇಂದ್ರದಲ್ಲಿ ಹೆಸರು ಪ್ರತಿ ಕೆಜಿಗೆ 127 ರೂ. ಇದ್ದು, ಸಾಮಾನ್ಯ ರೈತರಿಗೆ 102 ರೂ., ಎಸ್ಸಿ/ಎಸ್ಟಿ ರೈತರಿಗೆ 89.50 ರೂ. ಇದೆ. ತೊಗರಿ ಪ್ರತಿ ಕೆಜಿಗೆ 132 ರೂ. ದರವಿದ್ದು, ಸಾಮಾನ್ಯ ರೈತರಿಗೆ 107 ರೂ.ಗೆ ಸಿಗಲಿದ್ದು, ಪಜಾ/ ಪಪಂ ರೈತರಿಗೆ 94.50 ರೂ.ಗೆ ದೊರಕಲಿದೆ ಎಂದು ತಿಳಿಸಿದರು. ಕೃಷಿಕ ಸಮಾಜದ ಸದ್ಯಸರಾದ ಅಬ್ದುಲ್ ನಹೀಮ್ ಸೇಠ್, ನಿಂಗಣ್ಣಗೌಡ ಬಿರಾದಾರ, ಮಹಿಪಾಲರೆಡ್ಡಿ, ಶಿವರೆಡ್ಡಿ ಸೊಮರೆಡ್ಡಿ, ಶರಣಗೌಡ ಬೆನಕನಳ್ಳಿ, ಸಾಬಣ್ಣ ಇತರರಿದ್ದರು.