ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಪಶುಸಂಗೋಪನಾ ಇಲಾಖೆ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಕುರಿ, ಮೇಕೆ ತರಬೇತಿ ಕಾರ್ಯಕ್ರಮಕ್ಕೆ ಡಾ.ದಯಾನಂದ ಚಾಲನೆ ನೀಡಿದರು. ಡಾ.ಶರಣಬಸಪ್ಪ ನಿಂಗದಹಳ್ಳಿ, ಡಾ.ವಿಜಯಕುಮಾರ ತೆಲಗಾರ, ಕೆ.ಸುರೇಶ, ಚನ್ನಪ್ಪ ಯಟಗಲ್ ಇತರರಿದ್ದರು.
ಕಲಬುರಗಿ: ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶು ವೈದ್ಯಕಿಯ ಸೇವಾ ಇಲಾಖೆ, ಪಶುಪಾಲನಾ ಮತ್ತು ಪಶು ವೈದ್ಯಕಿಯ ತರಬೇತಿ ಕೇಂದ್ರ ಹಾಗೂ ಕೇಂದ್ರ ಕಾರಾಗೃಹ ಸಹಯೋಗದೊಂದಿಗೆ ಕಲಬುರಗಿ ಕೇಂದ್ರ ಕಾರಾಗೃಹದ 51 ಜನ ಕಾರಾಗೃಹದ ಬಂದಿಗಳಿಗೆ ಫೆಬ್ರವರಿ 25 ಹಾಗೂ 26 ರಂದು ಕೇಂದ್ರ ಕಾರಾಗೃಹದಲ್ಲಿ ಹಮ್ಮಿಕೊಳ್ಳಲಾಗಿದ್ದ ವೈಜ್ಞಾನಿಕ ಕುರಿ ಮತ್ತು ಮೇಕೆ ತರಬೇತಿ ಸಾಕಾಣಿಕೆ ತರಬೇತಿ ಕಾರ್ಯಕ್ರಮಕ್ಕೆ ಕಲಬುರಗಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ದಯಾನಂದ ಗುರುವಾರ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಬಂದಿಗಳ ಮನ@ ಪರಿವರ್ತನೆ ಹಾಗೂ ಸ್ವಾವಲಂಭಿ ಬದುಕಿಗಾಗಿ ಪಶುಪಾಲನೆ ಇಲಾಖೆಯಿಂದ ಕುರಿ ಮತ್ತು ಮೇಕೆ ಸಾಕಾಣಿಕೆಗೆ ವೈಜ್ಞಾನಿಕ ತರಬೇತಿ ನೀಡಲಾಗುತ್ತಿದ್ದು, ಬಂದಿಗಳು ಈ ತರಬೇತಿಯ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಮುಖ್ಯ ಪಶು ವೈದ್ಯಾಧಿಕಾರಿ ಡಾ.ಶರಣಬಸಪ್ಪ ನಿಂಗದಹಳ್ಳಿ ಹಾಗೂ ಡಾ.ವಿಜಯಕುಮಾರ ತೆಲಗಾರ ಮಾತನಾಡಿ, ಕರ್ನಾಟಕದಲ್ಲಿ 5 ತಳಿಯ ಕುರಿಗಳು, ದೇಶಿಯ ತಳಿಯ ಮೇಕೆಗಳನ್ನು ಸಾಕಲಾಗುತ್ತಿದೆ. ಕುರಿ ಸಾಕಾಣಿಕೆಯು ವರ್ಷವಿಡೀ ನೀಡುವ ಉದ್ಯೋಗ ಇದಾಗಿದೆ. ಕುರಿ ಸಾಕಾಣಿಕೆಯು ಕಡಿಮೆ ಶ್ರಮ ಅಧಿಕ ಲಾಭವನ್ನು ತಂದುಕೊಡಲಿದ್ದು, ಈ ತರಬೇತಿ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆವಹಿಸಿದ್ದ ಕಲಬುರಗಿ ಕೇಂದ್ರ ಕಾರಾಗೃಹದ ಅಧೀಕ್ಷಕ ಕೆ.ಸುರೇಶ್ ಮಾತನಾಡಿದರು. ಈ ತರಬೇತಿಯಲ್ಲಿ ಭಾಗವಹಿಸಿದ ಬಂದಿಗಳಿಗೆ ಕುರಿ ಮತ್ತು ಮೇಕೆ ಸಾಕಾಣಿಕೆಯ ವೈಜ್ಞಾನಿಕ ತರಬೇತಿಯ ಕೈಪಿಡಿ ಹಾಗೂ ಹಣ್ಣುಗಳನ್ನು ವಿತರಿಸಲಾಯಿತು. ಈ ಸಂಸ್ಥೆಯ ಅಧೀಕ್ಷಕ ರಾಕೇಶ್ ಕಾಂಬಳೆ, ವೈದ್ಯಾಧಿಕಾರಿ ಹಾಗೂ ಸಹಾಯಕ ಅಧೀಕ್ಷಕ ಚನ್ನಪ್ಪ ಯಟಗಲ್, ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ್ ಡಾಂಗೆ, ಜೈಲರ್ ಸಾಗರ್ ಪಾಟೀಲ ಇತರರಿದ್ದರು. ಶಿಕ್ಷಕ ನಾಗರಾಜ ಮುಲಗೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
"
ಕುರಿ ಸಾಕಾಣಿಕೆ ಒಂದು ಅತ್ಯುತ್ತಮ ಲಾಭದಾಯಕ ಕೃಷಿ ಉಪ ಕಸಬು ಆಗಿದೆ. ಕಡಿಮೆ ಹೂಡಿಕೆ ಮತ್ತು ಹೆಚ್ಚು ಲಾಭ ಪಡೆಯಬಹುದಾಗಿದೆ. ಬಂದಿಗಳು ಈ ವೈಜ್ಞಾನಿಕ ತರಬೇತಿ ಪಡೆದು ಸ್ವಾವಲಂಬಿ ಬದುಕು ಕಟ್ಟಿಕೊಂಡು ಸಮಾಜದಲ್ಲಿ ತಲೆಎತ್ತಿ ನಿಲ್ಲಬೇಕು.