ಕಲಬುರಗಿ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸಕ್ತ ಸಾಲಿನ ಮಂಡಿಸಿರುವ ರಾಜ್ಯ ಬಜೆಟ್ ರೈತರ ಹಿತ ಕಾಯುವ ನಿಟ್ಟಿನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಿಲ್ಲ. ಕಲಬುರಗಿಯಲ್ಲಿ ಕೈಗಾರಿಕೆ ಸ್ಥಾಪನೆ ಬಗ್ಗೆ ನೀರಿಕ್ಷೆ ಹುಸಿಯಾಗಿಸಿದೆ ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ರಾಜ್ಯಾಧ್ಯಕ್ಷ ಲಿಂಗರಾಜ ಸಿರಗಾಪೂರ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ಬಾರಿ ತೊಗರಿ,ಜೋಳ,ರಾಗಿ,ಭತ್ತ ಸೇರಿದಂತೆ ಇತರೆ ಆಹಾರ ಧಾನ್ಯಗಳ ಖರೀದಿ,ರೈತರ ಬೆಳೆ ಸಾಲ ಮನ್ನಾ, ರೈತರಿಗೆ ಸರ್ಕಾರದಿಂದ ಜೀವ ವಿಮೆ ಬಗ್ಗೆ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಪ್ರಸ್ತಾಪಿಸಿಲ್ಲ.ಇದರಿಂದ ರೈತ ಕುಟುಂಬದವರ ಜೀವನಕ್ಕೆ ಭದ್ರತೆ ಸಿಗದಂತಾಗಿದೆ ಎಂದಿದ್ದಾರೆ.
ಕಲಬುರಗಿಯಲ್ಲಿ ರೇಷ್ಮೆ ಪಾರ್ಕ್ ಸ್ಥಾಪನೆ,ಜವಳಿ ಪಾರ್ಕ್ ಗೆ 75 ಕೋಟಿ ರೂಪಾಯಿ ಅನುದಾನ ಘೋಷಿಸಿರುವುದು ಕೊಂಚ ಸಮಾಧಾನ ತಂದಿದೆ.ಆದರೆ ಕೆ.ಕೆ.ಆರ್.ಡಿ.ಬಿಗೆ ಮತ್ತೆ ಕೇವಲ 5 ಸಾವಿರ ಕೋಟಿ ಅನುದಾನ ನೀಡಲು ಮುಂದಾಗಿರುವುದು ನಿರಾಸೆ ಮೂಡಿಸಿದೆ.ಕಲ್ಯಾಣ ಕರ್ನಾಟಕ ಭಾಗಕ್ಕೆ ಹೆಚ್ಚಿನ ಕೊಡುಗೆ ನೀಡಿಲ್ಲ.ಈ ಭಾಗದ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಬಜೆಟ್ ನೀಡದಿರುವುದು ಬೇಸರ ಮೂಡಿಸಿದೆ.ಈಗಲಾದರೂ ನೂತನ ಕೈಗಾರಿಕೆ ಸ್ಥಾಪನೆಗೆ ಹಾಗೂ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣಕ್ಕೆ ಚಿಂತನೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.