ಶಹಾಬಾದ್: ವಾಡಿ ಕ್ರಾಸ್ನಿಂದ ಬಸವೇಶ್ವರ ವೃತ್ತದವರೆಗಿನ ರಸ್ತೆಯಲ್ಲಿರುವ ವಿದ್ಯುತ್ ಬೀದಿ ದೀಪಗಳು ಕೆಟ್ಟು ಹೋಗಿದ್ದು, ಜನರು ಕತ್ತಲಲ್ಲಿಯೇ ಓಡಾಡಬೇಕಾಗಿದ ಸ್ಥಿತಿ ನಿರ್ಮಾಣವಾಗಿದೆ. ವಾಡಿ ಕ್ರಾಸ್ನಿಂದ ಬಸವೇಶ್ವರ ವೃತ್ತದವರೆಗೆ ರಸ್ತೆ ನಿರ್ಮಿಸಿ, ಅವಶ್ಯಕತೆ ಇದ್ದಲ್ಲಿ ರಸ್ತೆ ವಿಭಜಕಗಳನ್ನು ನಿರ್ಮಿಸಿ, ವಿದ್ಯುತ್ ಕಂಬಗಳನ್ನು ಹಾಕಲಾಗಿತ್ತು. ರಸ್ತೆ ವಿಭಜಕ ಇರದ ರಸ್ತೆಯಲ್ಲಿ ಎರಡು ಬದಿಯಲ್ಲಿ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿತ್ತು. ಕೆಲ ತಿಂಗಳ ಹಿಂದೆಯೇ ಉದ್ಘಾಟಿಸಲಾಗಿತ್ತು. ಇದೀಗ ಕೆಲವು ದೀಪಗಳು ಬಂದ್ ಆಗಿದ್ದು, ಕತ್ತಲಲ್ಲಿಯೇ ವಾಹನಗಳ ಸಂಚಾರ ನಡೆಯುತ್ತಿದೆ. ಬಸವೇಶ್ವರ ವೃತ್ತದಿಂದ ಅಜಿನಿ ಹಳ್ಳದವರೆಗಿನ ರಸ್ತೆಯಲ್ಲಿರುವ ವಿದ್ಯುತ್ ದೀಪಗಳು ಕೆಟ್ಟು ಹೋಗಿದ್ದು, ಕತ್ತಲಲ್ಲಿಯೇ ಜನರ ಸಂಚರಿಸುವಂತಾಗಿದೆ. ಒಂದು ವರ್ಷ ಲೋಕೋಪಯೋಗಿ ಇಲಾಖೆ ನಿರ್ವಹಣೆ ಮಾಡಬೇಕಿದ್ದು, ಇತ್ತ ಈವರೆಗೂ ಕಣ್ಣು ಹಾಯಿಸಿಲ್ಲ. ಈಗಲಾದರೂ ಸಂಬಂಧಪಟ್ಟವರು ಗಮನಹರಿಸಿ ವಿದ್ಯುತ್ ದೀಪ ದುರಸ್ತಿಗೆ ಮುಂದಾಗಬೇಕಿದೆ ಎಂಬುದು ಸ್ಥಳಿಯರ ಒತ್ತಾಯವಾಗಿದೆ.