

ಶಹಾಬಾದ್: ನಗರದ ಸಹರಾ ಸಭಾಗೃಹದ ಎದುರು ಆಷಾಢ ಬಲಿಗಾಗಿ ಭಾನುವಾರ ಕುರಿಗಳ ವ್ಯಾಪಾರ ಜೋರಾಗಿ ನಡೆಯಿತು. ಮಂಗಳವಾರದಂದು ತಾಲೂಕಿನ ವಿವಿಧ ಗ್ರಾಮದ ದೇವತೆಗಳಿಗೆ "ಯಾವುದೇ ರೋಗಗಳು ಹರಡದಂತೆ, ಮಕ್ಕಳು ಸೌಖ್ಯವಾಗಿರಲು' ಪ್ರಾರ್ಥಿಸಿ ಬಲಿ ಅರ್ಪಿಸುವ ಪದ್ಧತಿ ಹಿಂದಿನಿಂದಲೂ ನಡೆದು ಬಂದಿದೆ. ಅದಕ್ಕಾಗಿ ನೂರಾರು ಜನ ಕುರಿ, ಕೋಳಿ ಖರೀದಿಗೆ ಮುಗಿ ಬಿದ್ದಿದ್ದರು. ಸಾಮಾನ್ಯ ದಿನಗಳಲ್ಲಿ 6 ರಿಂದ 8 ಸಾವಿರ ರೂ. ಮಾರುವ ಕುರಿ, ಇದೀಗ 12 ರಿಂದ 15 ಸಾವಿರ ರೂ.ಗೆ ಮಾರಲ್ಪಡುತ್ತಿವೆ. ಕೋಳಿಗಳು ಸಾಮಾನ್ಯ ದಿನದಲ್ಲಿ 450 ರೂ.ಗೆ ಮಾರಾಟವಾದರೆ, ಇದೀಗ 750 ರಿಂದ 900 ರೂ.ಗೆ ಮಾರಾಟವಾಗುತ್ತಿವೆ. ಬೆಲೆ ಹೆಚ್ಚಾದರು ನಂಬಿಕೆಗೆ ಇಂಬು ಕೊಡುವಂತೆ ಖರೀದಿ ಮಾತ್ರ ಜೋರಾಗಿ ನಡೆದಿದೆ.