ರಂಗಭೂಮಿಗೆ ಬೌದ್ಧಧರ್ಮ ತತ್ವ ಸವಾಲಿನ ಕೆಲಸ

ಕಲಬುರಗಿ ರಂಗಾಯಣದಲ್ಲಿ ನಡೆದ ಬೌದ್ಧ ನಾಟಕ ಉಪನ್ಯಾಸ, ಸಂವಾದ ಕಾರ್ಯಕ್ರಮದಲ್ಲಿ ಬಸವರಾಜ ಹೂಗಾರ, ಡಾ.ಸುಜಾತಾ ಜಂಗಮಶೆಟ್ಟಿ, ಡಾ.ಈಶ್ವರ ಇಂಗನ್​, ಪ್ರಭಾಕರ ಜೋಶಿ, ಡಾ.ಶ್ರೀಶೈಲ್​ ನಾಗರಾಳ ಇತರರಿದ್ದರು.
ಕಲಬುರಗಿ ರಂಗಾಯಣದಲ್ಲಿ ನಡೆದ ಬೌದ್ಧ ನಾಟಕ ಉಪನ್ಯಾಸ, ಸಂವಾದ ಕಾರ್ಯಕ್ರಮದಲ್ಲಿ ಬಸವರಾಜ ಹೂಗಾರ, ಡಾ.ಸುಜಾತಾ ಜಂಗಮಶೆಟ್ಟಿ, ಡಾ.ಈಶ್ವರ ಇಂಗನ್​, ಪ್ರಭಾಕರ ಜೋಶಿ, ಡಾ.ಶ್ರೀಶೈಲ್​ ನಾಗರಾಳ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡ ಸಂಸ್ಕೃತಿ ಜೆಡಿ ಹೂಗಾರ ಅನಿಸಿಕೆ
  • ರಂಗಾಯಣದಲ್ಲಿ ಬೌದ್ಧ ನಾಟಕ ಸಂವಾದ
ಕಲಬುರಗಿ: ಬೌದ್ಧ ಧರ್ಮ ವೈಚಾರಿಕ ಹಾಗೂ ತತ್ವಶಾಸಿಯ ವಿಷಯಗಳನ್ನು ಸೃಜನಶೀಲ ಕೃತಿಯಾಗಿ ರಂಗಭೂಮಿಗೆ ತರುವುದು ಅತ್ಯಂತ ಸವಾಲಿನ ಕೆಲಸ. ಈ ಹಿನ್ನೆಲೆಯಲ್ಲಿ ಲೇಖಕ ಡಾ.ಈಶ್ವರ ಇಂಗನ್​ ಅವರು ಬೌದ್ಧ ಧರ್ಮದ ತತ್ವ ಒಳಗೊಂಡ ಹತ್ತು ನಾಟಕಗಳನ್ನು ರಚಿಸಿರುವುದು ಕನ್ನಡ ರಂಗಭೂಮಿಯಲ್ಲಿ ಅಪರೂಪದ ಪ್ರಯತ್ನ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ಬಸವರಾಜ ಹೂಗಾರ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ರಂಗಾಯಣ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಡಿ ಗುರುವಾರ ಆಯೋಜಿಸಿದ್ದ ಡಾ.ಈಶ್ವರ ಇಂಗನ್​ ಅವರ 10 ಬೌದ್ಧ ನಾಟಕಗಳ ಕುರಿತ ಉಪನ್ಯಾಸ ಮತ್ತು ಸಂವಾದ ಉದ್ಘಾಟಿಸಿ ಮಾತನಾಡಿದ ಅವರು, ಬೌದ್ಧ ತತ್ವಗಳನ್ನು ಇಷ್ಟೊಂದು ಬೃಹತ್​ ಪ್ರಮಾಣದಲ್ಲಿ ನಾಟಕ ರೂಪಕ್ಕೆ ತಂದ ಕೀರ್ತಿ ಇಂಗನ್​ ಅವರಿಗೆ ಸಲ್ಲುತ್ತದೆ ಎಂದರು.
ಕಲಬುರಗಿ ರಂಗಾಯಣ ಮಾಜಿ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ಇಂಗನ್​ ನಾಟಕಗಳು ಚಾರಿತ್ರಿಕ ಅಂಶಗಳನ್ನು ತಾತ್ವಿಕವಾಗಿ ವಿಶ್ಲೇಷಿಸುತ್ತ ಪ್ರಚಲಿತ ಸಂಗತಿಗಳಿಗೆ ಸ್ಪಂದಿಸುವ ರೀತಿಯಲ್ಲಿ ಮೂಡಿಬಂದಿವೆ ಎಂದು ಹೇಳಿದರು.
ಹಿರಿಯ ಸಾಹಿತಿ ಡಾ.ಶ್ರೀಶೈಲ ನಾಗರಾಳ ಮಾತನಾಡಿ, ನಾಟಕ ಎಂಬುದು ಅಭಿನಯ, ಸಂಭಾಷಣೆ, ನೃತ್ಯ, ಸಂಗೀತ ಮತ್ತು ರಂಗಸಜ್ಜಿಕೆ ಸಮ್ಮಿಳಿತಗೊಂಡ ಅತ್ಯಂತ ಸಂಕೀರ್ಣ ಕಲೆ. ಇಂತಹ ಸಂಕೀರ್ಣ ಮಾಧ್ಯಮದಲ್ಲೂ ಈ 10 ಬೌದ್ಧ ನಾಟಕಗಳು ಅದ್ಭುತವಾಗಿ ಸಾಹಿತ್ಯಿಕ ರೂಪ ಪಡೆದಿರುವುದು ಹೆಮ್ಮೆಯ ಸಂಗತಿ ಎಂದರು.
ರಂಗಾಯಣ ನಿರ್ದೇಶಕಿ ಡಾ.ಸುಜಾತಾ ಜಂಗಮಶೆಟ್ಟಿ ಮಾತನಾಡಿದರು. ಲೇಖಕ ಡಾ.ಈಶ್ವರ ಇಂಗನ್​ ಮಾತನಾಡಿ, ಬೌದ್ಧ ವಿಹಾರದ ಗ್ರಂಥಾಲಯದಲ್ಲಿದ್ದ ಬುದ್ಧನ ಜೀವನ ಚರಿತ್ರೆ ಹಾಗೂ ಬೌದ್ಧ ಮಹಿಳೆಯರ ಕಥೆಗಳು ಈ ನಾಟಕಗಳ ರಚನೆಗೆ ಪ್ರೇರಣೆ. ಪ್ರೊ.ಎಚ್​.ಟಿ. ಪೋತೆ ಸಹಕಾರ ಹಾಗೂ ಮಿತ್ರರ ಸಲಹೆಯಂತೆ 10 ನಾಟಕಗಳನ್ನು ಪೂರ್ಣಗೊಳಿಸಿದೆ ಎಂದು ತಿಳಿಸಿದರು.
ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ಸಂಸ್ಥೆ ಮುಖ್ಯಸ್ಥ ಪ್ರೊ.ಎಚ್​.ಟಿ. ಪೋತೆ, ರಂಗಾಯಣ ಆಡಳಿತಾಧಿಕಾರಿ ಸಿದ್ರಾಮ ಸಿಂಧೆ, ಎಂ.ಬಿ. ಕಟ್ಟಿ, ಡಾ.ಶೈಲಜಾ ಬಾಗೇವಾಡಿ, ಸಂತೋಷ ಕಂಬಾರ, ನಾರಾಯಣ ಕುಲಕರ್ಣಿ, ಅರುಣ ಜೋಳದಕೂಡ್ಲಿಗಿ, ಡಾ.ಸೂರ್ಯಕಾಂತ ಸುಜ್ಯಾತ, ಪ್ರೊ.ವಸಂತ ನಾಸಿ ಇತರರಿದ್ದರು.
"

ಇಂದಿನ ದಿನಗಳಲ್ಲಿ ಬೌದ್ಧ ಮತ್ತು ವಚನ ಸಾಹಿತ್ಯ ಆಧಾರಿತ ವೈಚಾರಿಕ ಹಾಗೂ ಪ್ರಗತಿಪರ ನಾಟಕಗಳು ಜನಸಾಮಾನ್ಯರನ್ನು ತಲುಪುವ ಅಗತ್ಯವಿದೆ. ಯುವ ರಂಗಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವ ಇಂಗನ್​ ಅವರ ಕಾಳಜಿ ಶ್ಲಾನೀಯ.

— > ಡಾ.ಸುಜಾತಾ ಜಂಗಮಶೆಟ್ಟಿ ನಿರ್ದೇಶಕಿ, ರಂಗಾಯಣ ಕಲಬುರಗಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net