ಒಬಿಸಿ ದಾಳ ಉರುಳಿಸಲು ಸಜ್ಜಾದ ಬಿಜೆಪಿ

ಬಿಜೆಪಿ
ಬಿಜೆಪಿ
Published on
ಬೆಂಗಳೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಸಮೀಕರಣಕ್ಕೆ ಬಿಜೆಪಿ ಕಾರ್ಯತಂತ್ರ ಆರಂಭಿಸಿದೆ. 2028ರ ವಿಧಾನಸಭಾ ಚುನಾವಣೆ ವೇಳೆಗೆ ಒಬಿಸಿ ಸಮುದಾಯಗಳಲ್ಲಿ ಜಾಗೃತಿ ಮೂಡಿಸಿ ತನ್ನತ್ತ ಸೆಳೆಯಲು ಮತ್ತು ಕಾಂಗ್ರೆಸ್ ಸರ್ಕಾರ ಮಾಡಿರುವ ಅನ್ಯಾಯದ ಬಗ್ಗೆ ಕಾರ್ಯಾಗಾರಗಳ ಮೂಲಕ ಮನದಟ್ಟು ಮಾಡಿಕೊಡಬೇಕೆಂದು ಬಯಸಿ ತಯಾರಿ ಆರಂಭಿಸಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು, ಅಹಿಂದ ಸಮೀಕರಣದಿಂದ ದೊಡ್ಡ ನಾಯಕನಾಗಿ ಹೊರಹೊಮ್ಮಿದ್ದರು. ಇದೀಗ ಡಿ.ಕೆ.ಶಿವಕುಮಾರ್ ಸಿಎಂ ಆಗುತ್ತಿದ್ದಂತೆ ಆ ಸ್ಥಾನ ತುಂಬುವರು ಯಾರೆಂಬ ಚರ್ಚೆಗಳು ಶುರುವಾಗಿವೆ. ಮತ್ತೊಂದೆಡೆ ಬಿಜೆಪಿ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಸಮುದಾಯಕ್ಕೆ ಏನೆಲ್ಲ ಅನ್ಯಾಯ ಮಾಡಿದ್ದಾರೆ ಮತ್ತು ಕೊಟ್ಟ ಭರವಸೆಗಳನ್ನು ಈಡೇರಿಸದೆ ವಿಲವಾಗಿದ್ದಾರೆ ಎಂದು ಜನರಿಗೆ ಮನದಟ್ಟು ಮಾಡಿಕೊಡಬೇಕು ಎಂದು ಇತರ ಹಿಂದುಳಿದ ವರ್ಗಗಳ ಮತಗಳನ್ನು ಕ್ರೋಡೀಕರಿಸಲು ಬಿಜೆಪಿ ಒಬಿಸಿ ಮೋರ್ಚಾ ಅಖಾಡಕ್ಕೆ ಇಳಿದಿದೆ.
ಕಳೆದ 3 ವರ್ಷದಲ್ಲಿ ಸಿದ್ದರಾಮಯ್ಯ, ಸುಖಾಸುಮ್ಮನೆ ಆಯೋಗಗಳನ್ನು ರಚಿಸಿ ಜನರ ಕಣ್ಣೊರೆಸುವ ಕೆಲಸ ಮಾಡಿದ್ದಾರೆ. ಕಾಂತರಾಜು ಆಯೋಗದ ವರದಿ ಸರಿಯಿಲ್ಲವೆಂದು ಜಯಪ್ರಕಾಶ್ ಹೆಗ್ಡೆ ಅವರಿಂದ ವರದಿ ಪಡೆದುಕೊಂಡರು. ಹೈಕಮಾಂಡ್ ಸೂಚನೆ ಬಂದಿದೆ ಎಂಬ ಕಾರಣಕ್ಕೆ 10 ವರ್ಷದ ಹಳೆಯ ವರದಿ ಎಂದು ಕಸದಬುಟ್ಟಿಗೆ ಎಸೆದರು. ಆ ನಂತರ ಮಧುಸೂದನ್ ನಾಯಕ್ ಆಯೋಗ ರಚನೆ ಮಾಡಿ ವರದಿಯನ್ನು ಕೋಲ್ಡ್ ಸ್ಟೋರೇಜ್ಗೆ ಹಾಕಿ ಅಧಿಕಾರದಿಂದ ಕೆಳಗೆ ಇಳಿದಿದ್ದಾರೆ. ಇವರಿಂದ ಒಬಿಸಿ ಸಮುದಾಯಕ್ಕೆ ನ್ಯಾಯ ಸಿಕ್ಕಲ್ಲ. ಕೇವಲ ಚುನಾವಣೆಗೆ ನಡೆಸಿದ ಕಪಟತನ ಎಂದು ಜನರಿಗೆ ಮನವರಿಕೆ ಮಾಡಿಕೊಡಬೇಕೆಂಬುದು ಬಿಜೆಪಿ ಮಾಸ್ಟರ್‌ಪ್ಲಾನ್.
ವಿಭಾಗ ರಚನೆ:
ರಾಜ್ಯವನ್ನು ಮೈಸೂರು, ಬೆಂಗಳೂರು ನಗರ, ದಾವಣಗೆರೆ, ಶಿವಮೊಗ್ಗ, ಕೋಲಾರ, ವಿಜಯಪುರ, ಬೆಳಗಾವಿ, ಹುಬ್ಬಳಿ-ಧಾರವಾಡ ಸೇರಿ 9 ವಿಭಾಗಗಳನ್ನು ರಚನೆ ಮಾಡಿಕೊಂಡಿದ್ದಾರೆ. ಪ್ರತಿ ವಿಭಾಗದಲ್ಲಿ ಮೊದಲ ಹಂತವಾಗಿ ಸಮುದಾಯದ ಮುಖಂಡರ ಮೂಲಕ ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ಮೇಲೆ ಒತ್ತಡ ಏರುವ ತಂತ್ರಗಾರಿಕೆ ನಡೆದಿದೆ. ಜತೆಗೆ ಶಿಕ್ಷಣ ತಜ್ಞರು, ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕರು, ಸಾಮಾಜಿಕ ಕಾರ್ಯಕರ್ತರು ಸೇರಿ ಒಬಿಸಿ ಸಮುದಾಯದಲ್ಲಿ ಗುರುತಿಸಿಕೊಂಡಿರುವ ಗಣ್ಯರ ಮೂಲಕ ಕಾರ್ಯಾಗಾರ ಏರ್ಪಡಿಸಿ ಸಿದ್ದರಾಮಯ್ಯ ಸರ್ಕಾರ ಒಬಿಸಿಗೆ ಮಾಡಿರುವ ಅನ್ಯಾಯದ ಮಾಹಿತಿ ಹಂಚಿಕೊಳ್ಳುವುದು. ಕಾಂಗ್ರೆಸ್ ಸರ್ಕಾರ ಕೊಟ್ಟ ಭರವಸೆಗಳು ಏನು ಮತ್ತು ಆಗಿರುವ ಅನ್ಯಾಯ ಏನೆಂಬುದನ್ನು ಎಲ್ಲೆಡೆ ತಿಳಿಸುವ ಮೂಲಕ ಒಬಿಸಿಯನ್ನು ಜಾಗೃತ ಮಾಡಲು ಬಿಜೆಪಿ ನಾಯಕರು ವೇದಿಕೆ ಸಜ್ಜುಗೊಳಿಸಿದ್ದಾರೆ.
ನಿರಂತರ ಅನ್ಯಾಯ
ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಅಹಿಂದ ಬಗ್ಗೆ ಮಾತನಾಡುತ್ತಾರೆ. ಆದರೆ ಜಯಪ್ರಕಾಶ್ ಹೆಗಡೆ ವರದಿಯನ್ನು ಏಕೆ ವಿರೋಧಿಸಿದರು. ಮಧುಸೂದನ್ ನಾಯಕ್ ವರದಿಯ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಕಾಂಗ್ರೆಸ್ ಹುಟ್ಟಿದಾಗಿನಿಂದ ಒಬಿಸಿಗೆ ಅನ್ಯಾಯ ಮಾಡುತ್ತಿದೆ. ಒಬಿಸಿಗೆ ನ್ಯಾಯ ಕೊಡಲು ರಚಿಸಿದ ಕಾಕಾ ಕಾಲೇಳ್ಕರ್ ವರದಿಯನ್ನು ಹಾಗೂ ಮಂಡಲ ವರದಿ ಶಿಫಾರಸುಗಳನ್ನು ಕಾಂಗ್ರೆಸ್ ವಿರೋಧಿಸಿತ್ತು ಎಂಬುದು ಶಾಸಕ ವಿ. ಸುನೀಲ್‌ಕುಮಾರ್ ಆರೋಪವಾಗಿದೆ.

ಬೃಹತ್ ಸಮಾವೇಶಕ್ಕೂ ತಯಾರಿ

ಮುಂದಿನ ಅಧಿವೇಶನದಲ್ಲಿ ಮಧುಸೂದನ್ ನಾಯಕ್ ಆಯೋಗದ ವರದಿ ಮಂಡನೆಗೆ ಒತ್ತಾಯಿಸಿ ಪತ್ರಿಕಾಗೋಷ್ಠಿ ಮತ್ತು ಕಾರ್ಯಾಗಾರಗಳನ್ನು ನಡೆಸಲಾಗುತ್ತದೆ. ಒಂದು ವೇಳೆ ವರದಿಯನ್ನು ಬಹಿರಂಗ ಮಾಡದೇ ಇದ್ದರೆ ಒಬಿಸಿ ಸಮುದಾಯದ ಬೃಹತ್ ಸಮಾವೇಶ ನಡೆಸಲೂ ಚಿಂತನೆ ನಡೆದಿದೆ ಎಂದು ಒಬಿಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ವಿಜಯವಾಣಿಗೆ ತಿಳಿಸಿದ್ದಾರೆ.

ಮುಖ್ಯಾಂಶ

ಹಿಂದುಳಿದ ವರ್ಗದ ಚಾಂಪಿಯನ್ ಎನಿಸಿಕೊಂಡ ಸಿದ್ದರಾಮಯ್ಯ ಅವರು ತೆರೆಮರೆಗೆ ಸರಿದರೆ ಸಹಜವಾಗಿ ನಾಯಕತ್ವದ ಹುಡುಕಾಟ ನಡೆಯಲಿದೆ. ಈ ವೇಳೆ ಆ ಅವಕಾಶ ಬಳಸಿಕೊಳ್ಳುವುದು ಬಿಜೆಪಿ ಲೆಕ್ಕಾಚಾರ.
ರಾಜ್ಯದಲ್ಲಿ ಹಿಂದುಳಿದ ವರ್ಗದ ಸಂಖ್ಯೆ ದೊಡ್ಡದಿದೆ ಮತ್ತು ರಾಜ್ಯದ ಉದ್ದಗಲಕ್ಕೂ ವಿಸ್ತರಣೆಯಾಗಿದೆ. ಅದರ ಲಾಭ ಪಕ್ಷಕ್ಕೆ ಆಗಬೇಕು. ಹೀಗಾಗಿ ಹೊಸ ನಾಯಕತ್ವ ಬೆಳೆಸುವ ಇರಾದೆ.
2028ರ ವಿಧಾನಸಭೆ ಚುನಾವಣೆ ಸಹಜವಾಗಿ ಜಾತಿ ಸಮೀಕರಣದ ಮೇಲೆ ನಡೆಯುತ್ತದೆ. ಅದಕ್ಕೆ ಪೂರಕವಾಗಿ ಭೂಮಿಕೆ ಸಜ್ಜುಗೊಳಿಸುವ ಕೆಲಸ ಆರಂಭವಾಗಿದೆ.
ಸಿದ್ದರಾಮಯ್ಯ ಸಿಎಂ ಆಗುವವರೆಗೂ ಹಿಂದುಳಿದ ವರ್ಗದ ಮತ ಕ್ರೋಡೀಕರಣಕ್ಕೆ ಹೆಚ್ಚು ತಲೆಕೆಡಿಸಿಕೊಳ್ಳದ ಬಿಜೆಪಿ ಈಗ ತನ್ನ ದಾಳ ಉರುಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net