ಬಾರ್ ಲೈಸೆನ್ಸ್ ಖರೀದಿಗೆ ಒಲ್ಲೆ ಎಂದ ಬಿಡ್‌ದಾರರು: 579 ಪೈಕಿ 128 ಪರವಾನಗಿ ಹರಾಜು-bar license

ಮದ್ಯದ ಸನ್ನದು
ಮದ್ಯದ ಸನ್ನದು
Published on

ಬೆಂಗಳೂರು: ರಾಜ್ಯಾದ್ಯಂತ ಒಟ್ಟು 579 ಮದ್ಯದ ಸನ್ನದುಗಳನ್ನು ಮುಂದಿನ 5 ವರ್ಷಗಳ ಅವಧಿಗೆ ಇ-ಹರಾಜು ಮೂಲಕ ಹಂಚಿಕೆಗೆ ಬಿಡ್‌ದಾರರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜು.24 ರಿಂದ ಜು.31ವರೆಗೆ ಅಬಕಾರಿ ಇಲಾಖೆ, 483 ವೈನ್‌ಶಾಪ್ (ಸಿಎಲ್-2ಎ) ಮತ್ತು 96 ಬಾರ್ ಆ್ಯಂಡ್ ರೆಸ್ಟೋರೆಂಟ್ (ಸಿಎಲ್9-ಎ) ಸೇರಿ 579 ಬಾರ್ ಲೈಸೆನ್ಸ್‌ಗಳನ್ನು ಹಂಚಿಕೆ ಮಾಡಲು ಆನ್‌ಲೈನ್‌ನಲ್ಲಿ ಇ-ಹರಾಜು ಪ್ರಕ್ರಿಯೆ ನಡೆಸಿತ್ತು. ಆದರೆ, ಈ ಹರಾಜು ಪ್ರಕ್ರಿಯೆಯಲ್ಲಿ 579 ಲೈಸೆನ್ಸ್‌ಗಳ ಪೈಕಿ 128 ಲೈಸೆನ್ಸ್‌ಗಳು ಮಾತ್ರ ಹರಾಜು ಆಗಿವೆ. ಉಳಿದ ಲೈಸೆನ್ಸ್‌ಗಳು ಬಿಡ್ ಆಗಿಲ್ಲ.
ಕೆಲ ಜಿಲ್ಲೆಗಳಲ್ಲಿ ಲೈಸೆನ್ಸ್‌ಗಳ ಖರೀದಿಗೆ ಬಿಡ್ಡಿಂಗ್‌ದಾರರು ನಿರಾಸಕ್ತಿ ತೋರಿದ್ದಾರೆ. ಲೈಸೆನ್ಸ್ ಮಾರಾಟದಿಂದ 700 ಕೋಟಿ ರೂ.ಆದಾಯ ಗುರಿ ಇಟ್ಟುಕೊಂಡಿದ್ದ ಇಲಾಖೆಗೂ ಭಾರಿ ನಿರಾಸೆ ಮೂಡಿಸಿದೆ.
1987ರಲ್ಲಿ ನಿಗದಿಯಾಗಿದ್ದ ವೈನ್‌ಶಾಪ್(ಸಿಎಲ್2) ಹಾಗೂ ಬಾರ್ ಆಂಡ್ ರೆಸ್ಟೋರೆಂಟ್ (ಸಿಎಲ್-9) ಕೋಟಾದಡಿ ಬಾಕಿ ಉಳಿದ, ಸ್ಥಗಿತಗೊಂಡ, ಮುಟ್ಟುಗೋಲು ಹಾಕಿಕೊಂಡ, ನವೀಕರಿಸದ, ಪ್ರಾರಂಭವಾಗದ, ಹಿಂಪಡೆದ, ರದ್ದುಗೊಳಿಸಿದ ಸನ್ನದುನ್ನು ‘ಸಿಎಲ್-2ಎ’ ಹಾಗೂ ‘ಸಿಎಲ್-9ಎ’ ಎಂದು ವರ್ಗೀಕರಿಸಿ 579 ಪರವಾನಗಿಗಳನ್ನು ಹರಾಜು ಪಟ್ಟಿಗೆ ಸೇರಿಸಲಾಗಿತ್ತು.
ಬಿಡ್‌ನಲ್ಲಿ ಭಾಗಿಯಾಗುವ ಬಿಡ್‌ದಾರನು ಎಷ್ಟೂ ಬೇಕಾದರೂ ಲೈಸೆನ್ಸ್ ಖರೀದಿಸಲು ಅವಕಾಶ ನೀಡಲಾಗಿತ್ತು. ಪ್ರತಿ ಸನ್ನದು ಅರ್ಜಿಗೆ 50 ಸಾವಿರ ರೂ.ಅರ್ಜಿ ಶುಲ್ಕ ನಿಗದಿಪಡಿಸಲಾಗಿತ್ತು. ಹರಾಜಿನಲ್ಲಿ ಭಾಗವಹಿಸಲು ವ್ಯಕ್ತಿ ಅಥವಾ ಏಕವ್ಯಕ್ತಿ ಮಾಲೀಕತ್ವ ಸಂಸ್ಥೆಗಳು,ಕಾನೂನು ಅಡಿ ನೋಂದಾಯಿಸಲಾದ ಟ್ರಸ್ಟ್, ಸೊಸೈಟಿ, ಪಾಲುದಾರಿಕೆ ಸಂಸ್ಥೆ, ಸೀಮಿತ ಪಾಲುದಾರಿಕೆ ಒಡಂಬಡಿಕೆ ಅಥವಾ ಕಂಪನಿಗಳು ಕೂಡ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಯಶಸ್ವಿ ಬಿಡ್‌ದಾರರಿಗೆ ಮುಂದಿನ 5 ವರ್ಷದ ಅವಧಿವರೆಗೆ ಲೈಸೆನ್ಸ್ ಮಂಜೂರಾತಿ ಮಾಡಲಾಗಿದೆ.
ಬೆಂಗಳೂರಲ್ಲೇ ಅಧಿಕ ಲೈಸೆನ್ಸ್:
ಬೆಂಗಳೂರು 182, ದಕ್ಷಿಣ ಕನ್ನಡ 30, ತುಮಕೂರು 24, ಧಾರವಾಡ 19, ಮಂಡ್ಯ 15, ಕೋಲಾರ 15, ಕಲಬುರಗಿ 15, ಶಿವಮೊಗ್ಗ 15, ಮೈಸೂರು ಗ್ರಾಮಾಂತರ 14, ಹಾವೇರಿ 14, ಉತ್ತರ ಕನ್ನಡ 14, ಹಾಸನ 13, ಮೈಸೂರು ನಗರ 13, ಚಿಕ್ಕಮಗಳೂರು 12, ದಾವಣಗೆರೆ 12, ಬಳ್ಳಾರಿ 12, ಚಿತ್ರದುರ್ಗ 12, ಚಿಕ್ಕಬಳ್ಳಾಪುರ 11, ಬೆಂ.ಗ್ರಾಮಾಂತರ 11, ಬೀದರ್ 11, ಬೆಳಗಾವಿ ದಕ್ಷಿಣ 11, ಬೆಳಗಾವಿ ಉತ್ತರ 10, ವಿಜಯನಗರ 10, ರಾಯಚೂರು 9, ಕೊಡಗು 9, ಬಾಗಲಕೋಟೆ 8, ವಿಜಯಪುರ 8, ಗದಗ 8, ಉಡುಪಿ 8, ಚಾಮರಾಜನಗರ 7, ಯಾದಗಿರಿ 6 ಮತ್ತು ಕೊಪ್ಪಳ 6 ಲೈಸೆನ್ಸ್‌ಗಳು ಹರಾಜಿಗೆ ಸಿದ್ಧವಾಗಿದ್ದವು.
ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ನಗರಪಾಲಿಕೆ, ಮಹಾನಗರ ಪಾಲಿಕೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ(ಜಿಬಿಎ) ವಿಭಿನ್ನ ಸನ್ನದು ಶುಲ್ಕ ನಿಗದಿಪಡಿಸಲಾಗಿತ್ತು. ಪರವಾನಗಿಯ ಮೂಲ ಬೆಲೆ 1 ಕೋಟಿ ರೂ.ನಿಂದ 1.5 ಕೋಟಿ ರೂ.ವರೆಗೆ ಇತ್ತು. ಒಂದೊಂದು ಪಾಲಿಕೆಯಲ್ಲಿ ಒಂದೊಂದು ಮೂಲ ಬೆಲೆ ನಿಗದಿಪಡಿಸಲಾಗಿತ್ತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net