ನೀರಿನ ಸಮಸ್ಯೆ ಪರಿಹರಿಸಲು ಎಚ್ಚರ ವಹಿಸಿ

ಬೀದರ್​ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಕುಡಿಯುವ ನೀರಿನ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ.ಗಿರೀಶ್​ ಬದೋಲೆ, ಜಿಲ್ಲಾ ಎಸ್​ಪಿ ಪ್ರದಿಪ್​ ಗುಂಟಿ, ಮಹಾನಗರ ಪಾಲಿಕೆ ಆಯುಕ್ತ ಮುಕುಲ್​ ಜೈನ್​ ಇತರರಿದ್ದರು.
ಬೀದರ್​ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸಂಜೆ ಆಯೋಜಿಸಿದ್ದ ಕುಡಿಯುವ ನೀರಿನ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿದರು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಪಂ ಸಿಇಒ ಡಾ.ಗಿರೀಶ್​ ಬದೋಲೆ, ಜಿಲ್ಲಾ ಎಸ್​ಪಿ ಪ್ರದಿಪ್​ ಗುಂಟಿ, ಮಹಾನಗರ ಪಾಲಿಕೆ ಆಯುಕ್ತ ಮುಕುಲ್​ ಜೈನ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳಿಗೆ ಸಚಿವ ಈಶ್ವರ ಖಂಡ್ರೆ ಸೂಚನೆ
  • ಬೀದರ್​ನಲ್ಲಿ ಪರಿಶೀಲನಾ ಸಭೆ
ಬೀದರ್​: ಮುಂಗಾರು ಹಂಗಾಮು ಆರಂಭಗೊಳ್ಳುವ ತನಕ (ಜೂನ್​ 15ರವರೆಗೆ) ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳು ಎಚ್ಚರದಿಂದ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಸಂಜೆ ಕುಡಿಯುವ ನೀರಿನ ಪರಿಶೀಲನಾ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 38 ಗ್ರಾಮ ಪಂಚಾಯಿತಿಯ 68 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, 19 ಕಡೆಗಳಲ್ಲಿ ಟ್ಯಾಂಕರ್​ನಿಂದ ಹಾಗೂ 59 ಕಡೆಗಳಲ್ಲಿ ಬಾಡಿಗೆ ಬೋರವೆಲ್​ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಜಿಲ್ಲೆಗೆ 4 ಕೋಟಿ ರೂ. ಬಿಡುಗಡೆಯಾಗಿದೆ. ಔರಾದ್​ ತಾಲೂಕಿನ 22 ಗ್ರಾಮಗಳಲ್ಲಿ ಹಾಗೂ ಭಾಲ್ಕಿ ತಾಲೂಕಿನ 18 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಜಿಲ್ಲೆಯ ಯಾವುದೇ ನಗರ ಪ್ರದೇಶದಲ್ಲಿ ನೀರಿನ ಸಮಸ್ಯೆ ಇಲ್ಲ ಎಂದರು.
ಕಾರಂಜಾ ಜಲಾಶಯದಲ್ಲಿ ಸದ್ಯ 5 ಟಿಎಂಸಿ ನೀರು ಸಂಗ್ರಹವಿದ್ದು, ಹೀಗಾಗಿ ನಗರ ಪ್ರದೇಶದಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಬರದಂತೆ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಮುಖ್ಯಾಧಿಕಾರಿಗಳಿಗೆ ಸೂಚಿಸಲಾಗಿದೆ. ಮುಂದಿನ 20 ದಿನಗಳಲ್ಲಿ ಅಥವಾ ಜೂನ 7ರವರೆಗೆ ಮುಂಗಾರು ಮಳೆ ಬರುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಅಧಿಕಾರಿಗಳು ಜೂ.15ರ ವರೆಗೆ ಕುಡಿಯುವ ನೀರಿನ ಕುರಿತು ಯಾವುದೇ ಸಮಸ್ಯೆ ಆಗದಂತೆ ಎಚ್ಚರ ವಹಿಸಬೇಕು ಎಂದು ಹೇಳಿದರು.
ಈಗಾಗಲೇ ಭಾಲ್ಕಿ ತಾಲೂಕಿನ 120 ಹಳ್ಳಿಗಳಿಗೆ ಶಾಶ್ವತ ನೀರು ಮಲ್ಟಿ ವಿಲೇಜ್​ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಇದರಿಂದ 110 ರಿಂದ 120 ಹಳ್ಳಿಗಳಿಗೆ ನೀರಿನ ವ್ಯವಸ್ಥೆ ಕಲ್ಪಿಸಲಿದೆ. ಜಿಲ್ಲೆಯಲ್ಲಿ ಜೆಜೆಎಂ ವತಿಯಿಂದ ಕುಡಿಯುವ ನೀರಿನ ಕೆಲಸ ನಡೆಯುತ್ತಿದೆ. ಕೆಲವು ಕಡೆಗಳಲ್ಲಿ ಪೈಪ್​ ಲೈನ್​ ಕಿತ್ತು ಹೋಗಿದೆ. ತಪಾಸಣೆ ಮಾಡಿ ತನಿಖೆ ಕೈಗೊಳ್ಳುತ್ತೇವೆ ಎಂದ ಅವರು ಕೇಂದ್ರ ಸರ್ಕಾರ ಜಲ ಜೀವನ ಮಿಷನ್​ ಯೋಜನೆಗಾಗಿ ಇನ್ನು 20 ಸಾವಿರ ಕೋಟಿ ರು ಬರಬೇಕಾಗಿದೆ ಎಂದರು.
15&20 ದಿನದಲ್ಲಿ ವಿಮಾನಯಾನ ಸೇವೆ ಆರಂಭ: ಈಗಾಗಲೇ ಸರ್ಕಾರ ಮಟ್ಟದಲ್ಲಿ ವಿಮಾನಯಾನ ಸೇವೆಗಾಗಿ ಅನುಮೋದನೆ ನೀಡಿದ್ದು, ಇನ್ನೊಮ್ಮೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಯಾವ ದಿನಾಂಕದಿಂದ ಬುಕಿಂಗ್​ ಆರಂಭಿಸಲಾಗುವುದು ಎಂಬ ಬಗ್ಗೆ ಮಾಹಿತಿ ನೀಡುತ್ತಾರೆ. ಹೀಗಾಗಿ 15 ರಿಂದ 20 ದಿನದೊಳಗಾಗಿ ವಿಮಾನಯಾನ ಸೇವೆ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ವಿಮಾನಯಾನ ಸೇವೆಯ ಅಗ್ರಿಮೆಂಟ್​ 3 ವರ್ಷದ ಅವಧಿಯವರೆಗೆ ಮಾಡಿಕೊಳ್ಳುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ.ಗಿರೀಶ್​ ಬದೋಲೆ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪ್ರದಿಪ್​ ಗುಂಟಿ, ಮಹಾನಗರ ಪಾಲಿಕೆ ಆಯುಕ್ತ ಮುಕುಲ್​ ಜೈನ್​ ಇದ್ದರು.
ಶಾಶ್ವತ ನೀರಿಗಾಗಿ ರು 7 ಸಾವಿರ ಕೋಟಿ ಯೋಜನೆ
ಬೀದರ್​ ಹಾಗೂ ಕಲಬುರಗಿ ಜಿಲ್ಲೆಯ ಕೆಲ ಹಳ್ಳಿಗಳಿಗೆ ಶಾಶ್ವತ ಕುಡಿಯುವ ನೀರಿನ ಯೋಜನೆಗಾಗಿ ನಾರಾಯಣಪುರ ಜಲಾಶಯದಿಂದ ನೀರು ಸರಬರಾಜು ಮಾಡಲು 7 ಸಾವಿರ ಕೋಟಿ ರೂ. ಯೋಜನೆ ಸಿದ್ದಪಡಿಸಲಾಗುತ್ತಿದ್ದು, ಇದರಿಂದ ಮುಂದಿನ 25 ವರ್ಷಗಳವರೆಗೆ ಕುಡಿಯುವ ನೀರಿನ ಸಮಸ್ಯೆಯೆ ಉದ್ಭವಿಸುವುದಿಲ್ಲ. ಬೀದರ್​ ಜಿಲ್ಲೆಯ 120 ಹಳ್ಳಿಗಳು ಹಾಗೂ ಕಲಬುರಗಿಯ 250 ಹಳ್ಳಿಗಳಿಗೆ ಈ ಯೋಜನೆಯ ಲಾಭ ಸಿಗಲಿದೆ. ಸರ್ಕಾರದ ಮಟ್ಟದಲ್ಲಿ ಇದಕ್ಕೆ ಅನುಮೋದನೆ ಸಿಕ್ಕರೆ ಯೋಜನೆಯ ಕಾಮಗಾರಿ ಆರಂಭಿಸಲಾಗುವುದು ಎಂದು ಈಶ್ವರ ಖಂಡ್ರೆ ತಿಳಿಸಿದರು.
135 ಕೋಟಿ ರೂ. ಬೆಳೆ ಹಾನಿ ಪರಿಹಾರ
ಕಳೆದ ಹಂಗಾಮಿನಲ್ಲಿ ಅತಿವೃಷ್ಟಿ ಆಲಿಕಲ್ಲು ಮಳೆಯಿಂದ ರೈತರ ಬೆಳೆ ಹಾನಿಯಾಗಿದ್ದು, ಅದಕ್ಕೆ ರಾಜ್ಯ ಸರ್ಕಾರದಿಂದ 100 ಕೋಟಿ ರೂ. ಈಗಾಗಲೇ ರೈತರ ಖಾತೆಗೆ ಜಮೆಯಾಗಿದೆ. ಸರ್ಕಾರದಿಂದ ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಿದ್ದರಿಂದ ಹೆಚ್ಚುವರಿ ಅನುದಾನ ಕೂಡ ಸರ್ಕಾರ ಮಂಜೂರು ಮಾಡಿದೆ. ಇನ್ನು 142 ಕೋಟಿ ರೂ. ಹೆಚ್ಚಿನ ಅನುದಾನ ಬರಬೇಕಾಗಿದೆ ಮುಂದಿನ 15&20 ದಿನಗಳಲ್ಲಿ ರೈತರ ಖಾತೆಗೆ ಜಮೆಯಾಗಬಹುದು ಎಂದು ಸಚಿವ ಖಂಡ್ರೆ ತಿಳಿಸಿದರು.
"

ರಾಜ್ಯ ಸರ್ಕಾರ ಘೋಷಿಸಿದಂತೆ ರೈತರ ಟನ್​ ಕಬ್ಬಿಗೆ 50 ರೂ. ಹಣ ರೈತರ ಖಾತೆಗೆ ಜಮೆ ಮಾಡಿದೆ. ಹೀಗಾಗಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ರೈತರ ಕಬ್ಬಿನ ಬಾಕಿ ಬಿಲ್​ ಕೋಡಬೇಕು. ರೈತರ ಕಬ್ಬಿ ಬಿಲ್​ ಬಾಕಿ ಇಟ್ಟುಕೊಂಡ ಕಾರ್ಖಾನಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು.

— > ಈಶ್ವರ ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net