ಬಸವಕಲ್ಯಾಣದ ಬಸವ ಧರ್ಮ ಪೀಠದ ಮಹಾಮನೆಯ ಆವರಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ 5ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ಉಚಿತ ವಸತಿ ನಿಲಯ ಪ್ರವೇಶ ಆರಂಭದ ಕರಪತ್ರ ಬಿಡುಗಡೆ ಮಾಡಲಾಯಿತು. ಶ್ರೀ ಸಿದ್ಧ್ದರಾಮೇಶ್ವರ ಸ್ವಾಮೀಜಿ, ಪೂಜ್ಯ ಲಾವಣ್ಯದೇವಿ ಮಾತಾಜಿ, ಸಂಗಮೇಶ ಎನ್.ಜವಾದಿ, ಆಕಾಶ ಖಂಡಾಳೆ, ವೈಜಿನಾಥ ಪಾಟೀಲ, ಶಾಂತವೀರ ಕೌಮಾರೆ, ರೇವಣ್ಣಸಿದ್ದ ಪಾಟೀಲ, ಪ್ರಕಾಶ ಮೆಂಡೋಳೆ ಇತರರಿದ್ದರು
ಬಸವಕಲ್ಯಾಣ: ಮಾನವೀಯ ಮೌಲ್ಯಗಳು, ಸಮಾನತೆ ಮತ್ತು ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಂತಿರುವ ಬಸವಣ್ಣನವರ ವಿಚಾರಗಳು ಆಧುನಿಕ ಸಮಾಜಕ್ಕೂ ಮಾರ್ಗದರ್ಶಿಯಾಗಿವೆ ಎಂದು ಸಾಹಿತಿ ಸಂಗಮೇಶ ಎನ್. ಜವಾದಿ ಹೇಳಿದರು.
ನಗರದ ಬಸವ ಧರ್ಮ ಪೀಠದ ಮಹಾಮನೆಯ ಆವರಣದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ 5ನೇ ಶರಣ ಸಂಗಮ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಸಮಾಜ ಸುಧಾರಕ, ಶ್ರೇಷ್ಠ ದಾರ್ಶನಿಕ ಮತ್ತು ವಚನಕಾರ ಬಸವಣ್ಣನವರ ತತ್ವಗಳು ಕಾಲಾತೀತವಾಗಿದ್ದು, ಅಂದು, ಇಂದು ಮತ್ತು ಎಂದೆಂದಿಗೂ ಪ್ರಸ್ತುತವಾಗಿವೆ ಎಂದರು.
ಬಸವಣ್ಣನವರು ಜಾತಿ, ವರ್ಗ ಮತ್ತು ಲಿಂಗ ತಾರತಮ್ಯವನ್ನು ವಿರೋಧಿಸಿದರು. ಎಲ್ಲರೂ ಒಂದೇ ಎಂಬ ಸಮಾನತೆಯ ಸಂದೇಶವನ್ನು ನೀಡಿದ್ದಾರೆ. ಪ್ರತಿಯೊಬ್ಬರೂ ಕಾಯಕ ಮಾಡಬೇಕು. ಕಾಯದಲ್ಲಿ ಶ್ರೇಷ್ಠ&ಕನಿಷ್ಠ ಎನುವುದಿಲ್ಲ ಎಂದು ಪ್ರತಿಪಾದಿಸಿದರು. ಇದು ದುಡಿಮೆಯ ನತೆಯನ್ನು ಎತ್ತಿ ಹಿಡಿಯುವ ಜತೆಗೆ ಪ್ರಾಮಾಣಿಕ ಜೀವನಕ್ಕೆ ಮಾರ್ಗದರ್ಶನವಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ಅಲ್ಲಮಪ್ರಭು ಪೀಠಾಧ್ಯಕ್ಷ ಜಗದ್ಗುರು ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಬಸವ ತತ್ವವು ಜಗತ್ತಿಗೆ ಸಮಾನತೆಯನ್ನು ಬೋಧಿಸಿದ ವೈಚಾರಿಕ ಪ್ರೆಯ ಮಾರ್ಗವಾಗಿದೆ. ಬಸವಣ್ಣನವರ ತತ್ವಗಳು ಮಾನವಕುಲಕ್ಕೆ ನೀಡಿದ ಕೊಡುಗೆ. ಸಮಾಜದಲ್ಲಿನ ಅಸಮಾನತೆ, ಭ್ರಷ್ಟಾಚಾರ, ತಾರತಮ್ಯಗಳನ್ನು ಹೋಗಲಾಡಿಸಲು ಬಸವ ತತ್ವದ ಅಳವಡಿಕೆ ಇಂದಿನ ದಿನಗಳಲ್ಲಿ ಅತ್ಯಗತ್ಯವಾಗಿದೆ ಎಂದರು.
ಹುಲಸೂರ ಬಸವ ಕೇಂದ್ರ ಆಕಾಶ ಖಂಡಾಳೆ ಪ್ರಾಸ್ತಾವಿಕ ಮಾತನಾಡಿದರು. ಮಹಾದೇವ ಮಹಾಜನ ಸ್ವಾಗತಿಸಿದರು, ಸಚಿನ ಕೌಟೆ ವಂದಿಸಿದರು. ರಾಜಕುಮಾರ ತೊಂಡಾರೆ ನಿರೂಪಣೆ ಮಾಡಿದರು. ಬಸವ ಧರ್ಮ ಪೀಠ, ಬಸವ ಮಹಾಮನೆ ಚಾರಿಟೇಬಲ್ ಟ್ರಸ್ಟ್ನಿಂದ ಉಚಿತ ವಸತಿ ನಿಲಯ ಪ್ರವೇಶ ಆರಂಭದ ಕರಪತ್ರಗಳು ಬಿಡುಗಡೆ ಮಾಡಲಾಯಿತು.
"
ಬಸವಕಲ್ಯಾಣದ ಬಸವ ಧರ್ಮ ಪೀಠದ ಮಹಾಮನೆಯ ಆವರಣದಲ್ಲಿ ಪ್ರತಿ ತಿಂಗಳು ಎರಡನೇ ಭಾನುವಾರ ಶರಣ ಸಂಗಮ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಬಸವತತ್ವ ಜನಮನಕ್ಕೆ ತಲುಪಿಸುವುದೇ ಕಾರ್ಯಕ್ರಮದ ಮೂಲ ಆಶಯವಾಗಿದೆ.