ಬೆನಕಟ್ಟಿಗಿಲ್ಲ ಪಂಚಾಯಿತಿ ಭಾಗ್ಯ

ಬೆನಕಟ್ಟಿ ಗ್ರಾಮದ ಮಹಾದ್ವಾರ.
ಬೆನಕಟ್ಟಿ ಗ್ರಾಮದ ಮಹಾದ್ವಾರ.
Published on
ಮಹಾಂತೇಶ ಗಿಲಾಕಿ ಬೆನಕಟ್ಟಿ
ಪ್ರತ್ಯೇಕ ಗ್ರಾಮ ಪಂಚಾಯಿತಿ ರಚಿಸಬೇಕೆಂಬ ಬೆನಕಟ್ಟಿ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಕಳೆದ ಮೂರೂವರೆ ದಶಕಗಳಿಂದ ಈಡೇರದೆ ನಾಗರಿಕರಲ್ಲಿ ನಿರಾಸೆ ಮೂಡಿದೆ.
ಪ್ರಸ್ತುತ ಮದ್ಲೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆನಕಟ್ಟಿ ಸುಮಾರು 6,500 ಕ್ಕೂ ಹೆಚ್ಚು ಜನಸಂಖ್ಯೆಯೊಂದಿಗೆ ಒಂಬತ್ತು ಜನ ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿದೆ. ರಾಜ್ಯ ಹೆದ್ದಾರಿಗೆ ಹೊಂದಿಕೊಂಡ ಕೇಂದ್ರ ಸ್ಥಾನವಾಗಿದ್ದು, ಸುತ್ತಮುತ್ತಲಿನ ಗ್ರಾಮಗಳ ಜನರಿಗೆ ಔದ್ಯೋಗಿಕವಾಗಿಯೂ ಆಸರೆಯಾಗಿದೆ. ಎಲ್ಲ ಮಾನದಂಡಗಳಲ್ಲೂ ಬೆನಕಟ್ಟಿ ಗ್ರಾಮ ಅರ್ಹವಾಗಿದ್ದರೂ ಈವರೆಗೂ ಗ್ರಾಮ ಪಂಚಾಯಿತಿ ಭಾಗ್ಯದಿಂದ ವಂಚಿತವಾಗಿದೆ.
2014ರ ಜೂನ್​ ತಿಂಗಳಿನಲ್ಲಿ ಬೆಳಗಾವಿಗೆ ಆಗಮಿಸಿದ್ದ ಎಸ್​.ಜಿ.ನಂಜಯ್ಯನಮಠ ನೇತೃತ್ವದ ಗ್ರಾಮ ಪಂಚಾಯಿತಿಗಳ ಪುನರ್ವಿಂಗಡಣೆ ಸಮಿತಿ 2,500ರಿಂದ 3,000 ಜನಸಂಖ್ಯೆ ಹೊಂದಿದ ಗ್ರಾಮಕ್ಕೆ ಹೊಸ ಗ್ರಾಮ ಪಂಚಾಯಿತಿ ಮಂಜೂರು ಮಾಡುವುದಾಗಿ ತಿಳಿಸಿತ್ತು. ಆ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ರಚಿಸುವಂತೆ ಬೆನಕಟ್ಟಿ ಗ್ರಾಮಸ್ಥರು ಸಮಿತಿಗೆ ಮನವಿ ನೀಡಿದ್ದರು. ಆದರೆ, ರಾಜಕೀಯ ಇಚ್ಛಾಶಕ್ತಿ ಕೊರತೆ ಲವಾಗಿ ಗ್ರಾಮ ಪಂಚಾಯಿತಿ ಪಟ್ಟ ಕೈತಪ್ಪಿದೆ ಎಂಬುದು ಗ್ರಾಮದ ಪ್ರಜ್ಞಾವಂತರ ಅಳಲು.
ಗ್ರಾಮದಿಂದ ನಾಲ್ಕು ಕಿಮೀ ದೂರದ ಮದ್ಲೂರ ಗ್ರಾಮ ಪಂಚಾಯಿತಿಗೆ ತೆರಳಿ ಸಾರ್ವಜನಿಕರು ಅಗತ್ಯ ಕಾರ್ಯ ನಿರ್ವಹಿಸಿಕೊಳ್ಳಬೇಕಿದೆ. ಅಲ್ಲಿಗೆ ಕನಿಷ್ಠ ಬಸ್​ ಸೌಲಭ್ಯವಿಲ್ಲದೆ ಕಾಲ್ನಡಿಗೆ ಇಲ್ಲವೇ ಖಾಸಗಿ ವಾಹನ ಅವಲಂಬನೆ ಅನಿವಾರ್ಯ. ಅನುಕೂಲಸ್ಥರು ಹೇಗೊ ಗ್ರಾಪಂ ಕಚೇರಿಗೆ ತೆರಳುತ್ತಾರೆ. ಆದರೆ, ವೃದ್ಧರು, ಮಹಿಳೆಯರಿಗೆ ಪರದಾಟ ತಪ್ಪದಾಗಿದೆ.
ಈಗಲಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಬೆನಕಟ್ಟಿ ಪ್ರತ್ಯೇಕ ಗ್ರಾಮ ಪಂಚಾಯಿತಿ ರಚನೆಗೆ ಮುಂದಾಗಬೇಕು. ಇಲ್ಲವಾದಲ್ಲಿ ಮುಂಬರುವ ಎಲ್ಲ ಚುನಾವಣೆ ಬಹಿಷ್ಕರಿಸವುದಾಗಿ ತಾಪಂ ಮಾಜಿ ಸದಸ್ಯ ರುದ್ರಪ್ಪ ರೇವನ್ನವರ, ಅಡಿವೆಪ್ಪ ಶಿರಸಂಗಿ ಸೇರಿದಂತೆ ಗ್ರಾಮಸ್ಥರು ತಿಳಿಸಿದ್ದಾರೆ.
ಬೆನಕಟ್ಟಿ ಹೊಸ ಗ್ರಾಮ ಪಂಚಾಯಿತಿ ರಚಿಸುವಂತೆ ಜಿಲ್ಲಾಧಿಕಾರಿಗೆ ಮನವಿ ನೀಡಿರುವ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು.
> ಆನಂದ ಬಡಕುಂದ್ರಿ
ತಾಪಂ ಇಒ ಸವದತ್ತಿ&ಯರಗಟ್ಟಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net