ಬೆಳಗಾವಿ: ಕೊಟ್ಟ ಸಾಲಕ್ಕೆ ಚಕ್ರಬಡ್ಡಿ ವಸೂಲಿ ಮಾಡುತ್ತಿದ್ದ ಆರೋಪದಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದ ಸಂಕೇಶ್ವರ ಪಟ್ಟಣದ ಭೀಮನಗರದ ಸದಾನಂದ ಹಲಗೆ(47)ಯನ್ನು ಕಣಗಲಾ ಬಳಿ ಸಂಕೇಶ್ವರ ಠಾಣೆ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಹುಕ್ಕೇರಿ ತಾಲೂಕಿನ ಕರಜಗಾದ ಸ್ನೇಹಾ ಮೇಲಗೇರಿ ಈ ಬಗ್ಗೆ ದೂರು ನೀಡಿದ್ದರು. ಸದಾನಂದನಿಂದ 2022ರಿಂದ 2026ರ ವರೆಗೆ ಬಡ್ಡಿಯಲ್ಲಿ ಸಾಲ ಪಡೆಯುತ್ತ ಬಂದಿದ್ದು, ಸಾಲ ಪಡೆಯುವಾಗ ನಾಲ್ಕು ಖಾಲಿ ಚೆಕ್ ಹಾಗೂ ಹೆಚ್ಚಿನ ಹಣ ನಮೂದ ಮಾಡಿ ಬಾಂಡ್ ಪಡೆದುಕೊಂಡಿದ್ದ.
16,16,580 ರೂ. ಸಾಲಕ್ಕೆ ಹೆಚ್ಚಿನ ಬಡ್ಡಿ ಹಾಗೂ ಅಸಲು ಸೇರಿ 36,77,607 ರೂ. ಹಣ ಮರಳಿ ಕೊಡಲಾಗಿತ್ತು. ಆದರೆ, ಮೂರು ಚೆಕ್ ಮರಳಿ ಕೊಟ್ಟು ಇನ್ನೂ 4.64 ಲಕ್ಷ ರೂ. ಬಡ್ಡಿ ಕೊಡಬೇಕು ಇಲ್ಲದಿದ್ದಲ್ಲಿ ಜೀವ ಸಹಿತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿದ್ದಾಗಿ ಜು.20ರಂದು ದೂರು ಸಲ್ಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದ. ಈತನ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು.