ಎಸ್.ಎಂ.ಕೃಷ್ಣ ಅಧ್ಯಯನ ಪೀಠಕ್ಕೆ ಮನವಿ

ಶಾಸಕ ದಿನೇಶ್ ಗೂಳಿಗೌಡ
ಶಾಸಕ ದಿನೇಶ್ ಗೂಳಿಗೌಡ
Published on
ಬೆಂಗಳೂರು: ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಸಾಧನೆ, ಸಾರ್ಥಕ ಜೀವನದ ಕುರಿತು ಅಧ್ಯಯನ ನಡೆಸಲು ಅಧ್ಯಯನ ಪೀಠ ಸ್ಥಾಪಿಸಬೇಕೆಂದು ಶಾಸಕ ದಿನೇಶ್ ಗೂಳಿಗೌಡ ಮನವಿ ಸಲ್ಲಿಸಿದ್ದಾರೆ.
ಮನವಿಗೆ ಸ್ಪಂದಿಸಿರುವ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಪ್ರಸ್ತಾವನೆ ಸಲ್ಲಿಸುವಂತೆ ಮೈಸೂರು ವಿವಿ ಉಪಕುಲಪತಿಗೆ ಸೂಚಿಸಿದ್ದಾರೆ. ಬೆಂಗಳೂರನ್ನು ಜಾಗತಿಕ ಐಟಿ-ಬಿಟಿ ಕೇಂದ್ರವನ್ನಾಗಿ ರೂಪಿಸುವಲ್ಲಿ ಕೃಷ್ಣ ಅವರ ಪಾತ್ರ ಪ್ರಮುಖವಾಗಿದೆ. ನಗರಾಭಿವೃದ್ಧಿಯಷ್ಟೇ ಅಲ್ಲದೆ, ಗ್ರಾಮೀಣ ಕರ್ನಾಟಕದ ಸಬಲೀಕರಣಕ್ಕಾಗಿ ಕಂದಾಯ
ದಾಖಲೆಗಳನ್ನು ಗಣಕೀಕರಿಸಿದ ಭೂಮಿ ಯೋಜನೆ, ರೈತರಿಗಾಗಿ ಯಶಸ್ವಿನಿ ಆರೋಗ್ಯ ವಿಮೆ ಹಾಗೂ ಶಾಲಾ ಮಕ್ಕಳಿಗಾಗಿ ಅಕ್ಷರ ದಾಸೋಹ (ಬಿಸಿಯೂಟ) ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಅವರದ್ದಾಗಿದೆ. ಅವರ ಸಜ್ಜನಿಕೆ, ಆಡಳಿತಾತ್ಮಕ ದೂರದೃಷ್ಟಿ ಮತ್ತು ರಾಜತಾಂತ್ರಿಕ ನೈಪುಣ್ಯತೆ ಇಂದಿನ ರಾಜಕಾರಣಿಗಳಿಗೆ ಮಾದರಿ ಹಾಗೂ ಯುವಕರಿಗೆ ಅನುಕರಣೀಯ. ಈ ಹಿನ್ನೆಲೆಯಲ್ಲಿ ಮೈಸೂರು ಅಥವಾ ಬೆಂಗಳೂರು ವಿವಿಗಳಲ್ಲಿ ಅಧ್ಯಯನ ಪೀಠ ಸ್ಥಾಪಿಸುವಂತೆ ದಿನೇಶ್ ಗೂಳಿಗೌಡ ಮನವಿ ಸಲ್ಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net