ಠೇವಣಿದಾರರಿಗೆ ಆಮ್ಲಾನ್ ಆದಿತ್ಯ ಬಿಸ್ವಾಸ್ ಭರವಸೆ: ಗ್ರೀನ್‌ಬರ್ಡ್ಸ್ ಕಾರ್ಯಕರ್ತರ ಪ್ರತಿಭಟನೆ

 ನೂರಾರು ಗ್ರೀನ್ ಬರ್ಡ್ಸ್ ಕಾರ್ಯಕರ್ತರ ಪ್ರತಿಭಟನೆ
ನೂರಾರು ಗ್ರೀನ್ ಬರ್ಡ್ಸ್ ಕಾರ್ಯಕರ್ತರ ಪ್ರತಿಭಟನೆ
Published on
ಬೆಂಗಳೂರು: ಠೇವಣಿದಾರರ ರಕ್ಷಣಾ ಸಮಿತಿಯು ನೂರಾರು ಗ್ರೀನ್ ಬರ್ಡ್ಸ್ ಕಾರ್ಯಕರ್ತರನ್ನು ಒಟ್ಟುಗೂಡಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಹಕ್ಕೊತ್ತಾಯ ಪತ್ರ ಸಲ್ಲಿಸಿತ್ತು.
ಸಕ್ಷಮ ಪ್ರಾಧಿಕಾರ ಪರವಾಗಿ ಎಸಿ ಸುದರ್ಶನ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಸಮಸ್ಯೆಗಳನ್ನು ಆಲಿಸಿ ಮನವಿ ಪತ್ರ ಸ್ವೀಕರಿಸಿದರು. ನಂತರ, ಪ್ರಾಧಿಕಾರದ ಮುಖ್ಯಸ್ಥ ಆಮ್ಲಾನ್ ಆದಿತ್ಯ ಬಿಸ್ವಾಸ್ ಸಮ್ಮುಖದಲ್ಲಿ ಸಭೆ ನಡೆಸಲಾಯಿತು. ವಂಚನೆಗೆ ಒಳಗಾದ 1.5 ಲಕ್ಷ ಠೇವಣಿದಾರರು ಬಾಂಡ್ ಪತ್ರ ಸಲ್ಲಿಸಿದ್ದು, ಶೇ.50 ಆಸ್ತಿ ಹರಾಜು ಮಾಡಲಾಗಿದೆ. ಉಳಿದ ಆಸ್ತಿ ಹರಾಜು ಮಾಡಿ ಠೇವಣಿದಾರರಿಗೆ ಶೀಘ್ರವೇ ಹಣ ಪಾವತಿಸುವುದಾಗಿ ಆಮ್ಲಾನ್ ಆದಿತ್ಯ ಬಿಸ್ವಾಸ್, ಗ್ರೀನ್ ಬಡ್ಸ್ ಕಾರ್ಯಕರ್ತರಿಗೆ ಆಶ್ವಾಸನೆ ನೀಡಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ರಾಜ್ಯಾದ್ಯಂತ ಅಂದಾಜು 1.5 ಲಕ್ಷಕ್ಕೂ ಹೆಚ್ಚು ಠೇವಣಿದಾರರು ಗ್ರೀನ್ ಬರ್ಡ್ಸ್ ಆಗ್ರೋ ಫಾರಂ ಲಿಮಿಟೆಡ್‌ನಲ್ಲಿ 100 ಕೋಟಿ ರೂ.ಗಿಂತ ಅಧಿಕ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದಾರೆ. 2013ರಲ್ಲಿ 10 ಸಾವಿರಕ್ಕೂ ಹೆಚ್ಚು ಠೇವಣಿದಾರರು, ಕಾರ್ಯಕರ್ತರು ದಿಕ್ಕು ತೋಚದೆ ಸಂಕಷ್ಟದಲ್ಲಿ ಇದ್ದಾಗ ಪ್ರಬಲವಾಗಿ ಹೋರಾಟ ನಡೆಸಿದ್ದ ಪರಿಣಾಮ ಕಂಪನಿಯ ಮುಖ್ಯಸ್ಥ, ನಿರ್ದೇಶಕರು, ಸಂಬಂಧಿಕರು ಹಾಗೂ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವರ ವಿರುದ್ಧ ರಾಜ್ಯಾದ್ಯಂತ 120ಕ್ಕೂ ಅಧಿಕ ವಂಚನೆ ಪ್ರಕರಣ ದಾಖಲಿಸಿದ್ದ ಸರ್ಕಾರವು ಸಿಐಡಿ ತನಿಖೆಗೆ ಆದೇಶಿಸಿತ್ತು. ನಂತರ, ಇದಕ್ಕೆ ಸಂಬಂಧಿಸಿದ ನೂರಾರು ಆಸ್ತಿಪಾಸ್ತಿಯನ್ನು ವಶಕ್ಕೆ ಪಡೆದು ಹರಾಜು ಮಾಡಲಾಯಿತು ಎಂದರು.
ಗ್ರಾಮೀಣ ಭಾಗದ ಬಡ ಕೂಲಿ ಕಾರ್ಮಿಕರು, ರೈತ ಮಹಿಳೆಯರು ಮತ್ತು ಬೀದಿ ಬದಿ ವ್ಯಾಪಾರಿಗಳು ಹಣ ಹೂಡಿಕೆ ಮಾಡಿದ್ದು, ಕೂಡಲೇ ಅವರಿಗೆ ಹಣ ವಾಪಸ್ ನೀಡುವಂತಾಗಬೇಕು. ಕಂಪನಿಗೆ ಸಂಬಂಧಿಸಿದ್ದ ಶೇ.90 ಆಸ್ತಿಗಳನ್ನು ಈಗಾಗಲೇ ಹರಾಜು ಮಾಡಲಾಗಿದೆ. ಇದರಿಂದ ಬಂದಿರುವ ಹಣವನ್ನು ಠೇವಣಿದಾರರಿಗೆ ಹಂತ ಹಂತವಾಗಿ ಪಾವತಿಸಬೇಕು. ಬಾಕಿ ಉಳಿದಿರುವ ಕಂಪನಿಯ ಶೇ. 10 ಆಸ್ತಿಗಳನ್ನು ಕೂಡಲೇ ಹರಾಜು ಮಾಡಿ ಠೇವಣಿದಾರರಿಗೆ ಬಾಕಿ ಉಳಿದ ಹಣ ನೀಡಬೇಕು ಎಂದು ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net